ಮೂಲ್ಕಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಸಾಹಿತ್ಯ ಬೆಳಕು ಕಾರ್ಯಕ್ರಮವು ದಿನಾಂಕ 01-10-2023ರ ಭಾನುವಾರ ಸಂಜೆ ಬಪ್ಪನಾಡಿನ ಮಾತಾ ಪಂಚದುರ್ಗಾ ರೆಸಿಡೆನ್ಸಿಯ ಮಾಳಿಗೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು “ವಿಶಿಷ್ಟ ಕಲ್ಪನೆಯ ಇಂತಹ ಸಾಹಿತ್ಯ ಕಾರ್ಯಕ್ರಮಗಳು ಸಾಹಿತ್ಯಾಸಕ್ತರನ್ನು ಹೆಚ್ಚಿಸಲಿ ಹಾಗೂ ಮಕ್ಕಳಿಗೂ ಪ್ರೇರಣೆ ನೀಡಲಿ” ಎಂದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳೈರು ಮಾತನಾಡಿ “ಕಡಲ ಕತ್ತಲೆ, ಪಶ್ಚಿಮ ಘಟ್ಟದ ಕತ್ತಲೆಯ ನಡುವಿನ ಈ ಸ್ಥಳದಲ್ಲಿ ಬೆಳಕಿನ ಚಿಂತನೆ ವಿಶಿಷ್ಟವಾದುದು” ಎಂದರು.
ಕಾರ್ಯಕ್ರಮದಲ್ಲಿ ಬೆಳಕಿನ ಬಗ್ಗೆ ಉಪನ್ಯಾಸ ನೀಡಿದ ಸಾಹಿತಿ ಕಲಾವಿದ ತಾರಾನಾಥ ವರ್ಕಾಡಿ “ಕತ್ತಲಿದ್ದಾಗ ಬೆಳಕಿನ ಅನುಭವ. ಬೆಳಕೆಂದರೆ ಜ್ಞಾನ, ಆಧ್ಯಾತ್ಮ, ಧನಾತ್ಮಕ ಚಿಂತನೆ, ವಿಜ್ಞಾನ, ಆಧ್ಯಾತ್ಮ ಹೀಗೆ ಎಲ್ಲವೂ ಬೆಳಕಿನ ಚಿಂತನೆಯಲ್ಲೇ ಇರುವಂತಹವು. ನಮ್ಮೊಳಗಿನ ಬೆಳಕು ಬೆಳಗುವ ನಿಟ್ಟಿನಲ್ಲಿ ನಮ್ಮ ಓದು, ಅಧ್ಯಯನ, ನಡುವಳಿಕೆ ಇತ್ಯಾದಿಗಳಿರಬೇಕು, ದಿವ್ಯ ಬೆಳಕೆಂದರೆ ಪರಬ್ರಹ್ಮ, ಅಪರಿಮಿತ ಆನಂದದ ಆ ಬೆಳಕನ್ನು ಕಾಣುವ ಪ್ರಯತ್ನ ನಮ್ಮಲ್ಲಿರಬೇಕು. ಯಕ್ಷಗಾನ ಆಡಿಸುವುದೆಂದರೆ ಬೆಳಕಿನ ಸೇವೆ ಎಂಬ ಮಾತಿದೆ. ಜ್ಯೋತಿಷ್ಯ ಶಾಸ್ತ್ರವೂ ಬೆಳಕಿಗೆ ಸಂಬಂಧಿಸಿದ್ದು. ಸೋಲಾರ್ ಶಕ್ತಿ ಎಂದರೂ ಬೆಳಕಿನ ಶಕ್ತಿಯಲ್ಲವೆ? ವಿಜ್ಞಾನಿಗಳು, ತತ್ವಜ್ಞಾನಿಗಳು, ಆಧ್ಯಾತ್ಮದ ಹುಡುಕಾಟದವರೂ ಬೆಳಕನ್ನು ಕಾಣುವ ತವಕದಲ್ಲೇ ಇರುವವರು. ಕತ್ತಲ ಹಾದಿಯಲ್ಲಿರುವುದು ಹಗ್ಗವೋ, ಹಾವೋ ಎನ್ನುವುದನ್ನು ಹೇಗೆ ಬೆಳಕು ತೋರಿಸುತ್ತದೆಯೋ ಹಾಗೇ ಬದುಕಿಗೂ ಹೊಸತನ್ನು ತೋರಿಸುವ ಬೆಳಕು ಕಾಣುವಂತಾಗುಬೇಕು. ಬೆಳಕು ಚೈತನ್ಯದ ಸೆಲೆ. ಬೆಳಕು ನಮ್ಮ ಒಳಗೂ ಉಂಟು ಹೊರಗೂ ಉಂಟು. ಹೊರಗಿನ ಬೆಳಕು ಪ್ರಪಂಚದ ಎಲ್ಲ ವ್ಯವಹಾರಗಳಿಗೆ ಶಕ್ತಿ ಕೊಡುತ್ತದೆ. ಒಳಗಿನ ಬೆಳಕು ನಮ್ಮ ಚೈತನ್ಯವನ್ನು ಉದ್ದೀಪನಗೊಳಿಸಿ ಜೀವನವನ್ನು ಉಜ್ಜೀವನಗೊಳಿಸುತ್ತದೆ. ಅದಕ್ಕೆ ಸಾಹಿತ್ಯ ಪೂರಕ. ಸಾಹಿತ್ಯವೂ ಜೀವನವನ್ನು ಬೆಳಗಿಸುವ ಬೆಳಕು” ಎಂದು ಹೇಳಿದರು.
ಸುರಿದ ಧೋ ಮಳೆಯ ತಂಪು, ಬೆಳಕಿನ ಗಾಯನದ ಇಂಪು, ತಾರಾನಾಥ ವರ್ಕಾಡಿಯವರ ಮಾತು ಸೇರಿದ ಸಾಹಿತ್ಯಾಸಕ್ತರಿಗೆ ಹೊಸ ಅನುಭವವನ್ನು ನೀಡಿತು. ಮೂಲ್ಕಿ ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು, ಕಾರ‍್ಯದರ್ಶಿ ವೀಣಾ ಶಶಿಧರ್, ಭಾನುಮತಿ ಶೆಟ್ಟಿ, ಭಗವಾನ್‌ದಾಸ್ ಶರ್ಮ ಮತ್ತಿತರರಿದ್ದರು. ಬಂದ ಎಲ್ಲರಿಗೂ ಪುಸ್ತಕಗಳನ್ನು ನೀಡಿ ವೆಂಕಟೇಶ ಹೆಬ್ಬಾರ್ ಸ್ವಾಗತಿಸಿದರು. ಪುಷ್ಪರಾಜ ಚೌಟ ನಿರೂಪಿಸಿ, ಉದಯ ಅಮೀನ್ ವಂದಿಸಿದರು.
ಅಲ್ಲಿನ ಕತ್ತಲನ್ನು ನಂದಾದೀಪಗಳು ಬೆಳಗುತ್ತಿದ್ದವು. ಕರುಣಾಳು ಬಾ ಬೆಳಕೆ, ಹಚ್ಚೇವು ಕನ್ನಡದ ದೀಪ, ದೀಪದಿಂದ ದೀಪವ ಹಚ್ಚಬೇಕು ಮಾನವ, ದೀಪವು ನಿನ್ನದೆ ಗಾಳಿಯು ನಿನ್ನದೆ, ಬಾಳ ಹಣತೆ ದೋಣಿಯಲ್ಲಿ ಹೀಗೆ ಬೆಳಕಿನ ಹಾಡುಗಳನ್ನು ಬೋಳ ವಿನಂತಿ ಕಾಮತ್ ಹಾಗೂ ಪ್ರಣವ್ ಶರ್ಮ ಹಾಡಿ ನೆರೆದವರನ್ನು ರಂಜಿಸಿದರು.