ಕುಪ್ಪಳ್ಳಿ : ಶ್ರೀ ಬಿ. ನಾಗೇಶ್ ನೇತೃತ್ವದ ಜಾಗೃತಿ ಟ್ರಸ್ಟ್ ಬೆಂಗಳೂರು ಸಂಸ್ಥೆ ಹಾಗೂ ರೋಟರಿ ಕ್ಲಬ್ ರಿಚ್ಮಂಡ್ ಟೌನ್ ಬೆಂಗಳೂರು ಜಂಟಿಯಾಗಿ ದಿನಾಂಕ 28 ಜುಲೈ 2024 ಆದಿತ್ಯವಾರದಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳವಾದ ಕುಪ್ಪಳ್ಳಿಯ ಪುಣ್ಯ ಮಣ್ಣಿನಲ್ಲಿನ ಕುವೆಂಪು ಶತಮಾನೋತ್ಸವ ಭವನದಲ್ಲಿ ಗುರುವಂದನಾ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಬಹಳ ಅದ್ದೂರಿಯಾಗಿ ನಡೆಯಿತು.
ಸಮಾಜ ಸೇವಕಿ ಶ್ರೀಮತಿ ಲಕ್ಷ್ಮೀದೇವಿ ಅವರು ದೀಪ ಬೆಳಗುವುದರ ಮೂಲಕ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀಯುತ ಸದಾಶಿವಯ್ಯ ಅವರು ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದರು. ಶ್ರೀಯುತರಾದ ಸುರೇಶ ಕುಮಾರ್ ಮತ್ತು ಶ್ರೀಕಾಂತ್ ಮಂಗಳಂ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಈ ವೇದಿಕೆಯಲ್ಲಿ ಡಾ. ಬಿ.ಎಸ್. ಮಂಜುನಾಥ್ ಅವರ ‘ಭಾವಜೀವಿಯ ಅನುಭಾವ ಲಹರಿ’ ಕವನ ಸಂಕಲನವನ್ನು ಕಾಸರಗೋಡಿನ ಆಯುರ್ವೇದ ವೈದ್ಯೆ, ಕವಯತ್ರಿ ಮತ್ತು ಸಂಘಟಕಿಯಾದ ಡಾ. ವಾಣಿಶ್ರೀ ಕಾಸರಗೋಡು ಇವರು ಲೋಕಾರ್ಪಣೆ ಮಾಡಿದರು. ಜಾಗೃತಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀಯುತ ನಾಗೇಶ್, ಜಾಗೃತಿ ಟ್ರಸ್ಟಿನ ನಿರ್ದೇಶಕರಾದ ಶ್ರೀಮತಿ ಬಿ.ಎನ್. ಅಂಬಿಕಾ ಮತ್ತು ಶ್ರೀಮತಿ ಮಂಜುಳಾ ನಾಗೇಶ್ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಪಾವನಾ ಐತಾಳ್ ಮತ್ತು ಕುಮಾರಿ ಅಶ್ವಿನಿ ಐತಾಳ್ ಪ್ರಾರ್ಥನೆ ಹಾಡಿದರು. ಬಿಡುಗಡೆಗೊಂಡ ಕವನ ಸಂಕಲನದ ಮೊದಲ ಅಂತರಂಗ ಶೀರ್ಷಿಕೆಯ ಕವನದ ಮೊದಲ ಎರಡು ಚರಣಗಳನ್ನು ಜಿ.ವಿ. ರಾಘವುಲು ಇವರ ಸಂಗೀತ ನಿರ್ದೇಶನದಲ್ಲಿ ಗಾಯಕರು ಗುರುರಾಜ್ ಕಾಸರಗೋಡು ಅವರು ಹಾಡಿದರು.
ಸಾಹಿತಿಗಳು, ಸಂಘಟಕರು, ಗಾಯಕರು, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಗುರುರಾಜ್ ಕಾಸರಗೋಡು ಅವರನ್ನು ‘ಕಲಾ ರತ್ನ ಬಿರುದು’ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಹಾಗೆಯೇ ಹಲವಾರು ಸಾಧಕರನ್ನು ಕೂಡಾ ಈ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಕೊನೆಯಲ್ಲಿ ಕೃತಿ ಬಿಡುಗಡೆಗೊಳಿಸಿದ ಡಾ. ವಾಣಿಶ್ರೀ ಕಾಸರಗೋಡು ಅವರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯಿಂದ ಸಾಹಿತ್ಯ ಗಾನ ನೃತ್ಯ ವೈಭವ ನಡೆಯಿತು. ಕಾರ್ಯಕ್ರಮದ ನಿರೂಪಣೆ ಹಾಗೂ ಸಾಹಿತ್ಯ ಪ್ರಸ್ತುತಿಯನ್ನು ಡಾ. ವಾಣಿಶ್ರೀ ಕಾಸರಗೋಡು ನಡೆಸಿಕೊಟ್ಟರು. ಸಂಸ್ಥೆಯ ಕಲಾವಿದರಾದ ಗುರುರಾಜ್ ಕಾಸರಗೋಡು, ವರ್ಷಾ ಶೆಟ್ಟಿ, ಪಾವನಾ ಐತಾಳ್, ಅಕ್ಷತಾ ಅಡಿಗ, ಅಶ್ವಿನಿ ಐತಾಳ್, ಶ್ರದ್ಧಾ ಎ.ಎಸ್., ಮಧುರಾ, ಸರೋಜ, ದೀಕ್ಷ್ಣಾ, ಸುನೇತ್ರ ಉಡುಪ, ಭೂಮಿಕಾ ಉಡುಪ, ನಿವೇದಿತಾ, ಶ್ರೀಲತಾ, ಶ್ರೀ ಕೃಷ್ಣ, ಶ್ರೀ ಕೃಪಾ, ಪ್ರಥಮ್ಯ, ಶ್ವೇತಾ ಕಲಾ ಪ್ರದರ್ಶನ ನೀಡಿದರು. ಡಾ. ಬಿ.ಎಸ್. ಮಂಜುನಾಥ್ ಇವರು ಭಾಗವಹಿಸಿದ ಎಲ್ಲಾ ಕಲಾವಿದರಿಗೆ ನಗದು ಬಹುಮಾನ ನೀಡಿ ಕಲಾ ಪೋಷಕರಾಗಿ ಮಿಂಚಿದರು. ಎಲ್ಲಾ ಕಲಾವಿದರಿಗೆ ಜಾಗೃತಿ ಟ್ರಸ್ಟ್ ವತಿಯಿಂದ ಸ್ಮರಣಿಕೆ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.