ತೀರ್ಥಹಳ್ಳಿ : ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಮೇಲಿನ ಕುರುವಳ್ಳಿಯಲ್ಲಿ ದಿನಾಂಕ 25 ಜುಲೈ 2024ರಂದು ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಹೋಬಳಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕಥೆ, ಕವನ, ಪ್ರಬಂಧ ರಚನೆ ಮತ್ತು ಮಂಡನೆಯ ಕುರಿತಾದ ಒಂದು ವಿಭಿನ್ನವಾದ ‘ಸಾಹಿತ್ಯ ಕಮ್ಮಟ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಹೆಗಡೆ, ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಶ್ರೀ ರಮೇಶ್ ಶೆಟ್ಟಿ ಹಾಗೂ ಆಗಮಿಸಿದ ಮುಖ್ಯ ಅತಿಥಿಗಳು ‘ಕಾವ್ಯ ಕಮ್ಮಟ’ ಕಾರ್ಯಕ್ರಮದ ಮೂಲ ಉದ್ದೇಶಗಳು, ಪ್ರಸ್ತುತ ಸನ್ನಿವೇಶಕ್ಕೆ ಅದರ ಅವಶ್ಯಕತೆಗಳು ಹಾಗೂ ಮಕ್ಕಳು ಉತ್ತಮ ಸಂಸ್ಕಾರ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಕಾವ್ಯ ಕಮ್ಮಟದ ಮಹತ್ವವನ್ನು ತಿಳಿಸಿಕೊಟ್ಟರು. ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕಥೆ, ಕವನ ಮತ್ತು ಪ್ರಬಂಧಕ್ಕೆ ಮೂರು ವಿಭಾಗ ಮಾಡಿ ಪ್ರತ್ಯೇಕ ಕೊಠಡಿಗಳಲ್ಲಿ ಆ ವಿಷಯಗಳ ಕುರಿತಾಗಿ ರಚನೆ ಮಂಡನೆಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾದ ಸಾಹಿತಿ ಶ್ರೀಮತಿ ನಾಗರತ್ನ ಇವರು ಕಥೆ ಹುಟ್ಟುವಿಕೆ ಮತ್ತು ಮಂಡನೆಯ ಕುರಿತಾಗಿ ಮಕ್ಕಳಿಗೆ ತರಬೇತಿಯನ್ನು ನೀಡಿದರೆ, ಕವನ ರಚನೆಗೆ ಸಾಹಿತಿ ಶ್ರೀ ಸುರೇಶ್ ಮಲ್ಲಿಗೆ ಮನೆ ಹಾಗೂ ಪ್ರಬಂಧ ರಚನೆ ಮತ್ತು ಮಂಡನೆಗೆ ಸಂಬಂಧಿಸಿದಂತೆ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿಯಾದ ಶ್ರೀಮತಿ ಸುದೀಷ್ಣ ಕುಮಾರಿಯವರು ವಿವಿಧ ಕಲಿಕೊಪಕರಣಗಳನ್ನು ಬಳಸಿ ಮನಮುಟ್ಟುವಂತೆ ತರಬೇತಿ ನೀಡಿ ಮಕ್ಕಳಿಗೆ ಬರವಣಿಗೆಯ ಕರಗತ ಮಾಡಿಸಿದರು.
ಕಾರ್ಯಕ್ರಮದ ಸ್ವಾಗತ ಮತ್ತು ಕೊನೆಯಲ್ಲಿ ಕಾರ್ಯಕ್ರಮದ ಒಟ್ಟು ರೂಪುರೇಷೆಗಳ ಕುರಿತಾಗಿ ಮಾತನಾಡಿದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶ್ರೀಮತಿ ಲೀಲಾವತಿರವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನೂ ಕೂಡ ಪ್ರಶಂಶಿಸಿ ಗೌರವಿಸಿದರು. ಹೋಬಳಿ ಮಟ್ಟದ ವಿವಿಧ ಶಾಲೆಗಳಿಂದ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತುಂಬು ಆಸಕ್ತಿಯಿಂದ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮೇಲಿನ ಕುರುವಳ್ಳಿ ಶಾಲೆಯ ಮುಖ್ಯ ಗುರುಗಳಾದಂತಹ ಶ್ರೀಮತಿ ವೀಣಾ, ಶಾಲೆಯ ಎಲ್ಲಾ ಸಹ ಶಿಕ್ಷಕರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಶಾಲೆಗಳಿಂದ ಆಗಮಿಸಿದ ಮುಖ್ಯ ಗುರುಗಳು, ಸಹ ಶಿಕ್ಷಕರು ಹಾಗೂ ಊರಿನ ಎಲ್ಲಾ ಪೋಷಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.