ಕುಶಾಲನಗರ : ಕೊಡಗು ಜಿಲ್ಲಾ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಸಾಹಿತ್ಯ ಮಂಥನ’ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದ ರಾಜ್ “ಸಂಸ್ಕೃತ ಭಾಷೆ ದೇವರ ಭಾಷೆ, ಜನರ ಭಾಷೆ ಹಾಗೂ ಶ್ರೀಮಂತರ ಭಾಷೆಯಾಗಿತ್ತು. ಜನಸಾಮಾನ್ಯರಿಗೆ ಸಂಸ್ಕೃತ ಭಾಷೆ ಕಬ್ಬಿಣದ ಕಡಲೆಯಾಗಿತ್ತು. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಉಳಿಸಲು ಹಾಗೂ ಬೆಳೆಸಲು ‘ವಿಕ್ರಮಾರ್ಜುನ ವಿಜಯ’ ಹಾಗೂ ‘ಆದಿ ಪುರಾಣ’ ಗ್ರಂಥಗಳನ್ನು ಬರೆದ ಪಂಪ ಮಹಾಕವಿ ಕನ್ನಡ ಭಾಷೆಗೆ ಶ್ರೇಷ್ಠತೆಯನ್ನು ತಂದು ಕೊಟ್ಟ ಮೇರು ಕವಿ. ಇಂದು ಕನ್ನಡ ಮಾತನಾಡಿದರೆ ಕೀಳರಿಮೆ, ಇಂಗ್ಲೀಷ್ ಮಾತನಾಡಿದರೆ ಹಿರಿಮೆ ಎಂದು ಬೀಗುತ್ತಿರುವ ಪರಿಸ್ಥಿತಿ. ಅಂದು ಪಂಪನ ಕಾಲಘಟ್ಟದಲ್ಲಿ ಇದ್ದುದರಿಂದ ಮೇಲ್ವರ್ಗದ ಮಂದಿ ಅಂದು ಸಂಸ್ಕೃತ ಭಾಷೆಯನ್ನು ವೈಭವೀಕರಿಸಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದರಿಂದಾಗಿ ಪಂಪ ಮಹಾಕವಿ ಮೈಕೊಡವಿ ನಿಂತು ಕನ್ನಡ ಸಾಹಿತ್ಯಕ್ಕೆ ಅಪಾರ ಶ್ರೀಮಂತಿಕೆ ತಂದು ಕೊಟ್ಟರು, ವಿದ್ಯಾರ್ಥಿಗಳು ಕಾಲೇಜು ದಿನಗಳಿಂದಲೇ ವೈಚಾರಿಕ ಪ್ರಜ್ಞೆಯ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಡಾ. ಅಂಬೇಡ್ಕರ್ ಅವರು ದೇಶಕ್ಕೆ ಕೊಟ್ಟಂತಹ ಸಂವಿಧಾನ ಹಾಗೂ ಜಗಜ್ಯೋತಿ ಬಸವೇಶ್ವರರು ಸಾರಿದ ವಚನ ಸಾಹಿತ್ಯದ ಆಶಯಗಳನ್ನು ಮೈಗೂಡಿಸಿಕೊಂಡು ಶ್ರೇಷ್ಠ ಭಾರತವನ್ನು ನಿರ್ಮಾಣ ಮಾಡಬೇಕು” ಎಂದು ಕರೆಕೊಟ್ಟರು.
ಪರಿಸರ ತಜ್ಞ ತುಮಕೂರಿನ ಟಿ.ಎಸ್. ವಿವೇಕಾನಂದ ಮಾತನಾಡಿ, “ವಿದ್ಯಾರ್ಥಿಗಳು ಪಠ್ಯದಷ್ಟೇ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಬೇಕು. ಈ ಭೂಮಿ, ಮಣ್ಣು, ನೀರು, ಗಾಳಿಯನ್ನು ಕೆಡದಂತೆ ಸಂರಕ್ಷಿಸಿ ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕು” ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಅಕಾಡೆಮಿ ಅಧ್ಯಕ್ಷ ಮುಕುಂದ ರಾಜ್ ಸಂವಾದ ನಡೆಸಿದರು. ರಾಮನಗರದ ಸಾಹಿತಿ ಬೈರಮಂಗಲ ರಾಮೇಗೌಡ ಹಾಗೂ ಕಾವ್ಯ ಸಂಸ್ಕೃತಿ ಯಾನದ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಮಹಾಮನೆ ಮಾತನಾಡಿ “ವಿದ್ಯಾರ್ಥಿಗಳು ಸಾಹಿತ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಾಹಿತ್ಯಕ್ಕೆ ತನ್ನದೇ ಆದ ಮೌಲ್ಯವಿದೆ. ಸಾಹಿತ್ಯ ನೋವುಂಡ ಮನುಷ್ಯನ ಬದುಕಿಗೆ ಔಷಧಿಯಂತೆ ಕೆಲಸ ಮಾಡುತ್ತದೆ” ಎಂದರು. ಸಾಹಿತ್ಯಾಸಕ್ತರ ವೇದಿಕೆ ಸಂಚಾಲಕ ಕೆ.ಎನ್. ಮೂರ್ತಿ, ಮಹಾತ್ಮಗಾಂಧಿ ಪದವಿ ಕಾಲೇಜು ಅಧ್ಯಕ್ಷ ಎನ್.ಎನ್. ಶಂಭುಲಿಂಗಪ್ಪ, ಪ್ರಾಂಶುಪಾಲೆ ಲಿಖಿತಾ ಉಪಸ್ಥಿತರಿದ್ದರು. ಮುಕುಂದ ರಾಜ್ ಇವರನ್ನು ಸಾಹಿತ್ಯ ವೇದಿಕೆಯಿಂದ ಗೌರವಿಸಲಾಯಿತು. ಕಾಲೇಜು ಕನ್ನಡ ಉಪನ್ಯಾಸಕ ಮಂಜೇಶ್ ಸ್ವಾಗತಿಸಿದರು.