ಮುಂಬೈ : ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ದಿನಾಂಕ 20 ಡಿಸೆಂಬರ್ 2025ರಂದು ರಾನಡೆ ಭವನದಲ್ಲಿ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪರಮಶಿವಮೂರ್ತಿ ಇವರು ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತ “ಕನ್ನಡದಲ್ಲಿ ಸಿಗುವಷ್ಟು ವೈವಿಧ್ಯಮಯ ಶಾಸನಗಳು ಬೇರೆ ಯಾವ ಭಾಷೆಗಳಲ್ಲೂ ಸಿಗುವುದಿಲ್ಲ. ಕನ್ನಡದ ಶಾಸನಗಳು ಸಾಂಸ್ಕೃತಿಕ ವಿಚಾರಕ್ಕೆ ಹೆಚ್ಚಿನ ಮಹತ್ವವನ್ನು ನೀಡಿವೆ. ಐದನೆಯ ಶತಮಾನದಲ್ಲಿ ರಚಿತವಾದ ಶಾಸನವು ಕನ್ನಡದ ಮೊದಲ ಲಭ್ಯ ಶಾಸನವಾಗಿದೆ. ಮೊದಲ ಮರಾಠಿ ಶಾಸನ ಕರ್ನಾಟಕದಲ್ಲಿ ದೊರೆತಿರುವುದು ವಿಶೇಷ. ಅನೇಕ ಪ್ರತಿಭಾವಂತ ಕವಿಗಳು ಮೊದಲು ಶಾಸನಗಳನ್ನು ಬರೆಯುತ್ತಿದ್ದರು. ವೃತ್ತಗಳು ದೊಡ್ಡ ಪ್ರಮಾಣದಲ್ಲಿ ಶಾಸನಗಳಲ್ಲೂ ಬಳಕೆಯಾಗಿರುವುದನ್ನು ಕಾಣಬಹುದು. ಕರ್ನಾಟಕ ಇತಿಹಾಸ ಅಕಾಡೆಮಿಯು 400ಕ್ಕೂ ಹೆಚ್ಚು ಶಾಸನಗಳನ್ನು ಪ್ರಕಟ ಮಾಡಿದೆ. ಶಾಸನಗಳಲ್ಲಿ ಕಲ್ಪನಾಲೇಖಕ್ಕೆ ಆಸ್ಪದ ಕಡಿಮೆ. ಶಾಸನಗಳನ್ನು ಇಟ್ಟುಕೊಂಡು ಕನ್ನಡ ಸಾಹಿತ್ಯ ಚರಿತ್ರೆಯನ್ನು ಚರ್ಚಿಸುವ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

“ಸಾಹಿತ್ಯ ಮತ್ತು ಶಾಸನಗಳನ್ನು ಜೊತೆಯಾಗಿ ಇಟ್ಟರೆ ಅನೇಕ ಕೊಂಡಿಗಳನ್ನು ಬೆಸೆಯುವುದು ಸಾಧ್ಯವಾಗುತ್ತದೆ. ಸಾಹಿತ್ಯಕ್ಕೆ ಹೋಲಿಸಿದರೆ ಶಾಸನಗಳು ಹೆಚ್ಚು ವಿಶ್ವಾಸಾರ್ಹವಾಗಿವೆ. ಪಂಪ ತನ್ನ ಕಾವ್ಯದಲ್ಲಿ ಸ್ವಂತ ತಮ್ಮನ ಕುರಿತು ಏನನ್ನು ಹೇಳಿಕೊಂಡಿಲ್ಲ. ಆದರೆ ಕುರಕ್ಯಾಲ ಶಾಸನದಲ್ಲಿ ಪಂಪನ ಜೀವನ ವೃತ್ತಾಂತದ ಕುರಿತು ಸಾಕಷ್ಟು ಸಂಗತಿಗಳು ತಿಳಿದು ಬರುತ್ತವೆ. ಹೀಗಾಗಿ ಶಾಸನ ಸಾಹಿತ್ಯವನ್ನು ಕಾವ್ಯದ ಜೊತೆಗೆ ಇಟ್ಟು ಅಧ್ಯಯನ ಮಾಡಬೇಕಾಗುತ್ತದೆ” ಎಂಬುದನ್ನು ವಿವಿಧ ಉದಾಹರಣೆಗಳೊಂದಿಗೆ ಅವರು ವಿವರಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, “ಬಹಳ ಹಿಂದಿನಿಂದಲೂ ಅನೇಕ ಜಂಟಿ ಕಾರ್ಯಕ್ರಮಗಳನ್ನು ಆಯೋಜಿಸಿದ ಕನ್ನಡ ವಿಭಾಗ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳ ನಡುವೆ ಆತ್ಮೀಯ ಸಂಬಂಧವಿದೆ. ಡಾ. ಪರಮಶಿವ ಮೂರ್ತಿಯವರು ಸರಳ ಸಜ್ಜನಿಕೆಯ ವ್ಯಕ್ತಿ. ಕಳೆದ ಮೂರು ದಶಕಗಳಿಂದ ಶಾಸನ ಶಾಸ್ತ್ರದ ಕುರಿತು ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಶಾಸನಗಳಲ್ಲಿ ಶಿಲ್ಪವನ್ನು, ಕಲಾತ್ಮಕತೆಯನ್ನು ಕಂಡಂತಹವರು. ಹೊಸ ಹೊಸ ವಿಷಯಗಳನ್ನು ತೆರೆದು ತೋರಿದಂತಹ ಶ್ರೇಯ ಅವರಿಗೆ ಸಲ್ಲುತ್ತದೆ. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಅನೇಕ ನೆಲೆಗಳಲ್ಲಿ ಕನ್ನಡವನ್ನು ಬಲಗೊಳಿಸುವ ಕಾರ್ಯವನ್ನು ಮಾಡುತ್ತಿದೆ. ಬೇರೆ ಬೇರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಪನ್ಯಾಸಗಳನ್ನು ಸಂತತವಾಗಿ ಆಯೋಜಿಸುತ್ತ ಬಂದಿದೆ. ವಿಭಾಗವು ಮುಂಬೈ ಕನ್ನಡಿಗರ ಮುಖವಾಣಿಯಾಗಿಯೂ ಕೆಲಸವನ್ನು ಮಾಡುತ್ತಿದೆ. ಕುಲಪತಿಗಳು ಇಂದು ಕನ್ನಡ ವಿಭಾಗಕ್ಕೆ ಭೇಟಿ ನೀಡಿ ರುವುದು ಸಂತೋಷದ ಸಂಗತಿ” ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅತಿಥಿಯವರನ್ನು ಶಾಲು ಹೊದಿಸಿ, ಸ್ಮರಣಿಕೆ ಮತ್ತು ಕಲಾವಿದರಾದ ಜಯ ಸಾಲ್ಯಾನ್ ಚಿತ್ರಿಸಿದ ಡಾ. ಪರಮಶಿವಮೂರ್ತಿ ಅವರ ಚಿತ್ರಪಟ ನೀಡಿ ಗೌರವಿಸಲಾಯಿತು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಶೆಟ್ಟಿಯವರು ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು. ವಿಭಾಗದ ಸಂಶೋಧನ ವಿದ್ಯಾರ್ಥಿಗಳಾದ ಕಲಾ ಭಾಗ್ವತ್, ಅನಿತಾ ಪೂಜಾರಿ, ಸುರೇಖಾ ದೇವಾಡಿಗ, ಸುರೇಖಾ ಶೆಟ್ಟಿ, ಪ್ರತಿಭಾ ರಾವ್, ಸವಿತಾ ಅರುಣ್ ಶೆಟ್ಟಿ ಮತ್ತು ಆಶಾ ಸುವರ್ಣ, ವಿಕ್ರಮ್ ಜೋಶಿ, ಶೇಖರ್ ಶೆಟ್ಟಿ, ಡಿಪ್ಲೊಮಾ ವಿದ್ಯಾರ್ಥಿಗಳಾದ ಯೋಗಿನಿ ಆತ್ರೇಯ, ಪುಷ್ಪಲತಾ ಗೌಡ, ಶಾರದಾ ವಾಳದ್ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.
