ಮೂಲ್ಕಿ : ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೂಲ್ಕಿ ಕೊಳಚಿಕಂಬಳ ಸಮುದ್ರ ಬದಿಯ ಮಂತ್ರ ಸರ್ಫ್ ಕ್ಲಬ್ ಆವರಣದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಕಂಡ ಸಾಹಿತ್ಯ ಮತ್ತು ಕನ್ನಡ ನೋಟ ಕಾರ್ಯಕ್ರಮವು ದಿನಾಂಕ 19-05-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ‘ಸಾಹಿತ್ಯ ಉಪನ್ಯಾಸ’ ನೀಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ “ಕುವೆಂಪುರವರ ಹೊರತಾಗಿ ಇತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಊರುಗಳಲ್ಲಿ ಇರುವ ಸ್ಮಾರಕಗಳು ಇನ್ನಷ್ಟು ಅಭಿವೃದ್ಧಿ ಆಗಬೇಕಾಗಿದೆ. ಕೋಟದಲ್ಲಿ ಶಿವರಾಮ ಕಾರಂತರ ನೆನಪಿನಲ್ಲಿ ಸುಮಾರು ಆರು ಕೋಟಿ ರೂಪಾಯಿ ಖರ್ಚು ಮಾಡಿ, ಥೀಮ್ ಪಾರ್ಕ್ ನಿರ್ಮಿಸಿದ್ದು ಇದೇ ಉದ್ದೇಶದಿಂದ. ಇತರ ಸಾಹಿತಿಗಳ ನೆನಪಿನಲ್ಲಿ ಇದೇ ರೀತಿಯ ಸ್ಮಾರಕಗಳು, ಕೃತಿಗಳ ಪ್ರಕಟನೆ, ಸೂಕ್ತ ಗೌರವ ಕೊಡುವ ಕೆಲಸ ಆಗಬೇಕಾಗಿದೆ. ಕನ್ನಡದ ಹೋರಾಟದ ಬಗ್ಗೆ ಸಮಾಜ ಚಿಂತನೆ ಮಾಡಬೇಕಾಗಿದೆ. ಸಿದ್ದಲಿಂಗಯ್ಯ ಸಾಹಿತ್ಯದ ಮೂಲಕ ದಲಿತ ಚಳುವಳಿಯ ಶಕ್ತಿಯ ಬೆಳೆ ತೆಗೆಯುತ್ತಿದ್ದರು. ರೈತ ಚಳುವಳಿ ರುದ್ರಪ್ಪ ಅವರಂತಹವರ ನಾಯಕತ್ವದಲ್ಲಿ ಮಾದರಿಯಾಗಿ ನಡೆಯುತ್ತಿತ್ತು. ಅಂತಹ ಚಳುವಳಿಗಳು ಹಾದಿ ತಪ್ಪಿವೆಯಾ ಅಂತನಿಸುತ್ತಿದೆ. ಕನ್ನಡದ ಚಳುವಳಿಗಳು, ಹೋರಾಟಗಳು ಮೂಲ ಶಕ್ತಿ ಕಳೆದುಕೊಂಡಿವೆ. ಕನ್ನಡವನ್ನು ಉಳಿಸಿ ಬೆಳೆಸಲು ಸಾಂಸ್ಕೃತಿಕ ಶಕ್ತಿಯನ್ನು ನೀಡಬೇಕಾಗಿದೆ. ಎಸ್.ಎಲ್. ಭೈರಪ್ಪ ಅವರಿಗೆ ಇನ್ನೂ ಯಾಕೆ ಜ್ಞಾನಪೀಠ ಸಿಕ್ಕಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ಅವರ ಅಧ್ಯಯನ, ಜ್ಞಾನ, ರಾಜಿಯಿಲ್ಲದ ವಿಚಾರ ಚಿಂತನೆ ಮತ್ತೊಬ್ಬರಲ್ಲಿ ಕಂಡಿಲ್ಲ” ಎಂದು ಹೇಳಿದರು.
ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, “ಪಿಲಿಕುಳ ನಿಸರ್ಗಧಾಮಕ್ಕೆ ಶಿವರಾಮ ಕಾರಂತರ ಹೆಸರನ್ನು ಇಡಬೇಕೆಂದು ಸರಕಾರಿ ಆದೇಶ, ನ್ಯಾಯಾಲಯದ ಆದೇಶ ಇದ್ದರೂ ಆ ಕೆಲಸ ಆಗಿಲ್ಲ” ಎಂದರು. ಕ.ಸಾ.ಪ. ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ಸ್ವಾಗತಿಸಿ, ಕಾರ್ಯದರ್ಶಿ ಜೊಸ್ಸಿ ಪಿಂಟೊ ವಂದಿಸಿ, ಹರೀಶ್ ಹೆಜಮಾಡಿ ಮತ್ತು ಪ್ರಕಾಶ್ ಆಚಾರ್ ನಿರೂಪಿಸಿದರು.