ಭಾರತವು ಹಲವಾರು ರೀತಿಯ ಕಲೆ, ಸಂಸ್ಕೃತಿ, ಸಾಹಿತ್ಯ, ವಾಸ್ತುಶಿಲ್ಪಗಳನ್ನು ಒಳಗೊಂಡಿದೆ. ಈ ಕಲೆ-ಸಾಹಿತ್ಯ ಮಾನವನೊಂದಿಗೆ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಹಲವು ಜನರು ಇದರ ಮಹತ್ವವನ್ನು ಅರಿತುಕೊಳ್ಳದಿದ್ದರೂ ಅವುಗಳ ಬಗ್ಗೆ ವಿಶೇಷವಾದ ಒಲವನ್ನು ಮೂಡಿಸಿಕೊಳ್ಳಲು ಕಾತುರದಿಂದ ಇರುತ್ತಾರೆ. ಎಲ್ಲರಲ್ಲಿಯೂ ಈ ಕಲೆ ಸಾಹಿತ್ಯಗಳು ಹುಚ್ಚೆಬ್ಬಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಅವಕಾಶ ಬಂದಾಗ ಅದನ್ನು ವ್ಯಕ್ತಪಡಿಸುವುದು ಕೂಡ ಒಂದು ಕಲೆಯಾಗಿರುತ್ತದೆ.
ನಮ್ಮ ಜೀವನವೇ ಒಂದು ಸುಂದರವಾದ ಕಲೆ. ಆ ಕಲೆಯೇ ಸಾಹಿತ್ಯದ ಬೇರು. ಅದು ಅನೇಕ ಸಾಹಿತ್ಯದಿಂದ ಕೂಡಿರುತ್ತದೆ. ಸುಜ್ಞಾನಿಗಳ ಮನದಲ್ಲಿ ಬರಹಗಾರ ಅಥವಾ ಕವಿ ಸೃಷ್ಟಿಯಾದಲ್ಲಿ ಒಂದು ಸುಂದರ ಸಾಹಿತ್ಯ ಲೋಕ ಸೃಷ್ಟಿಯಾಗಬಲ್ಲದು. ಮಾತುಗಳಿಂದ, ರಚನೆಯ ಕಲೆಯಿಂದ ಅದ್ಭುತವಾದ ಸಾಹಿತ್ಯ ಲೋಕ ಗಮನಕ್ಕೆ ಬರಬಹುದು.
ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿನಂತೆ ಕವಿಯಾದವನಿಗೆ ನಿರ್ಜೀವ ವಸ್ತುವಿಗೆ ಜೀವ ತುಂಬಿ ವರ್ಣಿಸುವ ಕಲೆ ಇರುತ್ತದೆ. ಒಂದು ಸಾಹಿತ್ಯ ರಚನೆಯಾಗಬೇಕಾದರೆ ಮನದ ಭಾವನೆಗಳಿಗೆ ಬರಹದ ರೂಪಕೊಟ್ಟು ಒಂದು ಸುಂದರ ಬಂಧವನ್ನು ಬೆಸೆಯಬೇಕು. ಸಾಹಿತ್ಯಗಳಲ್ಲಿ ಅನೇಕ ವಿಧಗಳಿದ್ದಂತೆ ಕಲೆಯಲ್ಲೂ ಅನೇಕ ರೀತಿಗಳಿವೆ. ಮನುಷ್ಯನ ವಿಶಿಷ್ಟ ಪ್ರತಿಭೆಯಿಂದ ಚಿಗುರುವ ಸಣ್ಣ ಸಾಲುಗಳೇ ಮುಂದುವರಿದು ಒಂದು ಮಟ್ಟಿನ ಲೇಖನವಾಗುವುದನ್ನು ಸಾಹಿತ್ಯ ಎನ್ನಬಹುದು. ಅಂದ್ರೆ ಹಳೆ ಬೇರು ಹೊಸ ಚಿಗುರು ಇದ್ದಂತೆ. ಕೇವಲ ಸಾಹಿತ್ಯ ಮಾತ್ರವಲ್ಲ ಕಲೆಯು ಕೂಡ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಸ್ಥಾನಮಾನವನ್ನು ಪಡೆದಿದೆ. ಪ್ರತಿಯೊಬ್ಬ ಮನುಷ್ಯನೂ ಯಕ್ಷಗಾನ, ಸಂಗೀತ, ನೃತ್ಯ, ಚಿತ್ರಕಲೆ ಅನೇಕ ರೀತಿಯಲ್ಲಿ ಕಲೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಅಂತಹ ಒಂದು ಸಾಹಿತ್ಯ ಕಲೆಯ ಒಲವು ಇನ್ನೂ ಬರುವ ಯುವಮನಗಳಲ್ಲಿ ಭಾಸವಾಗುವುದರೊಂದಿಗೆ ಕನ್ನಡ ನಾಡಿನ ಕಲೆ ಸಾಹಿತ್ಯ ಇನ್ನಷ್ಟು ಪಸರಿಸಲಿ.
- ನಿರೀಕ್ಷಾ ಗೌಡ
ತೃತೀಯ ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಕಾಲೇಜು (ಸ್ವಾಯತ್ತ ), ಪುತ್ತೂರು