ಉಡುಪಿ : ಆದರ್ಶ ಆಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ಉಡುಪಿ ರಂಗಭೂಮಿಯು ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ ನೀಡುವ ‘ಪುಸ್ತಕ ಪ್ರಶಸ್ತಿ’ಯ ದ್ವಿತೀಯ ವರ್ಷದ ಪುರಸ್ಕಾರಕ್ಕೆ ಬೆಂಗಳೂರಿನ ಉಪನ್ಯಾಸಕರಾದ ಎನ್.ಸಿ. ಮಹೇಶ್ ಇವರ ‘ಸಾಕುತಂದೆ ರೂಮಿ’ ನಾಟಕ ಕೃತಿಯು ಆಯ್ಕೆಯಾಗಿದೆ. ಮೂವರು ತೀರ್ಪುಗಾರರ ಸಮಿತಿಯ ಸಲಹೆಯಂತೆ ಈ ಕೃತಿಯನ್ನು ಆಯ್ಕೆ ಮಾಡಲಾಗಿದೆ ಎಂದು ರಂಗಭೂಮಿ (ರಿ.) ಉಡುಪಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟರು ತಿಳಿಸಿರುವರು.
ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಕಟವಾದ ಕನ್ನಡ ನಾಟಕ ಕೃತಿಗೆ ನೀಡಲಾಗುವ ದ್ವಿತೀಯ ವರ್ಷದ ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ರೂಪಾಯಿ ಹದಿನೈದು ಸಾವಿರ ನಗದು ಬಹುಮಾನವನ್ನು ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 27 ಮಾರ್ಚ್ 2025ರಂದು ‘ವಿಶ್ವರಂಗಭೂಮಿ ದಿನಾಚರಣೆ’ಯಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಲಿದೆ.
ಕಳೆದ ವರ್ಷ ಈ ಪ್ರಶಸ್ತಿಯು ರಂಗಭೂಮಿಗೆ ಪ್ರಸ್ತುತವಾದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯ ಕೃತಿಯಾದ ಮೌನೇಶ ಬಡಿಗೇರರ ‘ಅಭಿನಯ ಕಲಿಸಲು ಸಾಧ್ಯವಿಲ್ಲ’ ಪುಸ್ತಕಕ್ಕೆ ಲಭಿಸಿತ್ತು. ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ ರಂಗಭೂಮಿಯು ನಿರಂತರವಾಗಿ ನಡೆಸಲಿರುವ ಈ ಸ್ಪರ್ಧೆಯ ಮುಂದಿನ ವರ್ಷದ ಪುರಸ್ಕಾರಕ್ಕೆ 2023 ಮತ್ತು 2024 ಈ ಎರಡು ವರ್ಷಗಳಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ರಂಗಭೂಮಿಗೆ ಪ್ರಸ್ತುತವಾದ ಗಂಭೀರ ಚಿಂತನೆಯ ನಾಟಕೇತರ ಸ್ವತಂತ್ರ ಸಾಹಿತ್ಯ ಕೃತಿಯನ್ನು ಪರಿಗಣಿಸಲಾಗುವುದು.