ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಮತ್ತು ಮನೋಹರ ಗ್ರಂಥಮಾಲಾ ಇವುಗಳ ಸಹಯೋಗದಲ್ಲಿ ಹಿರಿಯ ಸಾಹಿತಿ ಡಾ. ನಾ. ಡಿಸೋಜಾ ಅವರಿಗೆ ಭಾವ ಪೂರ್ಣ ಶೃದ್ಧಾಂಜಲಿ ನುಡಿನಮನ ಕಾರ್ಯಕ್ರಮವು ದಿನಾಂಕ 06 ಜನವರಿ 2025ರಂದು ಧಾರವಾಡದ ಮನೋಹರ ಗ್ರಂಥ ಮಾಲಾ ಅಟ್ಟದಲ್ಲಿ ನಡೆಯಿತು.
ಈ ಸಭೆಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ. ಶಾಮಸುಂದರ ಬಿದರಕುಂದಿ “ನಾ. ಡಿಸೋಜಾ ಜನಸಾಮಾನ್ಯರ ಅನುಭೂತಿ ಇಟ್ಟುಕೊಂಡು ಕಥೆ, ಕಾದಂಬರಿ ರಚನೆ ಮಾಡಿ ಜನಪ್ರಿಯ ಸಾಹಿತಿಯಾದರು. ಮುಳುಗಡೆ ಅವರ ಸಾಹಿತ್ಯದ ಸ್ಥಾಯಿವಸ್ತು. ಮುಳುಗಡೆ ಪ್ರದೇಶದ ಜನರ ಬದುಕು, ಬವಣೆ, ನೋವು, ನಲಿವುಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದು ವಿಶೇಷತೆ. ಲಿಂಗನಮಕ್ಕಿ ಜಲಾಶಯದ ನಿರ್ಮಾಣದಿಂದ ಜನರ ಜೀವನದಲ್ಲಾದ ಬದಲಾವಣೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಬರೆದರು. ಅವರ ಹಲವು ಕತೆಗಳು, ಪ್ರಬಂಧಗಳು ಪಠ್ಯವಾಗಿವೆ. ಡಿಸೋಜಾ ಅವರ ಕಾದಂಬರಿ ‘ದ್ವೀಪ’ ಸಿನೆಮಾ ಆಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು ಹೆಗ್ಗಳಿಕೆ. ಡಿಸೋಜಾ ಅವರ ಎಲ್ಲ ಕತೆಗಳು ರೂಪಕಗಳೇ ಆಗಿವೆ. ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. ವಿಮರ್ಶಕರು ಅವರನ್ನು ಕಡೆಗಣಿಸಿದರೂ ಜನಸಾಮಾನ್ಯರು ಅವರ ಕತೆ, ಕಾದಂಬರಿಗಳನ್ನು ಇಷ್ಟಪಟ್ಟು ಓದಿದರು. ಸಾಹಿತ್ಯದ ಬಗ್ಗೆ ಅವರಿಗೆ ಆಳವಾದ ಜ್ಞಾನವಿರದಿದ್ದರೂ ಅವರನ್ನು ಶ್ರೇಷ್ಠ ಸಾಹಿತಿ ಎಂದು ಒಪ್ಪಿಕೊಂಡರು” ಎಂದು ಹೇಳಿದರು.
ಡಾ. ರಮಾಕಾಂತ ಜೋಶಿ ಮಾತನಾಡಿ “ನಾ. ಡಿಸೋಜಾ ಒಬ್ಬ ಸರಳ ಸಜ್ಜನ ವ್ಯಕ್ತಿ. ಮನೋಹರ ಗ್ರಂಥಮಾಲೆ ನಾ. ಡಿಸೋಜಾ ಅವರ ‘ಇಗರ್ಜಿ ಸುತ್ತಲಿನ ಹತ್ತು ಮನೆಗಳು’ ಮತ್ತು ‘ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ’ ಎಂಬ ಎರಡು ಕೃತಿಗಳನ್ನು ಪ್ರಕಟಿಸಿದೆ. ‘ಹಕ್ಕಿಗೂಂದು ಗೂಡು ಕೂಡಿ’ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ ಪಡೆದ ಕೃತಿ ‘ಮುಳುಗಡೆ ಊರಿಗೆ ಬಂದವರು’ ಎಂಬ ಎರಡು ಮಕ್ಕಳ ಕಾದಂಬರಿಗಳನ್ನು ಮನೋಹರ ಗ್ರಂಥ ಮಾಲೆಯ ಅಂಗ ಸಂಸ್ಥೆಯಾದ ಜಡಭರತ ಪ್ರಕಾಶನದಿಂದ ಪ್ರಕಟಿಸಿದೆ. ಅವರ ಕಥೆ, ಕಾದಂಬರಿಗಳನ್ನು ಓದಬೇಕು. ಆದರೆ ಪ್ರಸ್ತುತ ಜನರಲ್ಲಿ ಓದುವ ಹವ್ಯಾಸವೇ ಕಡಿಮೆಯಾಗಿದೆ. ಓದುವ ಹವ್ಯಾಸ ಬೆಳೆಸುವುದು ಮುಖ್ಯ. ನಾ. ಡಿಸೋಜಾ ಮತ್ತು ಗ್ರಂಥ ಮಾಲೆಯ ಸಂಬಂಧ ಕೇವಲ ಲೇಖಕ-ಪ್ರಕಾಶಕರ ಸಂಬಂಧವಾಗಿರದೆ, ಅದನ್ನು ಮೀರಿ ಆತ್ಮೀಯ ಗೆಳೆತನವನ್ನು ಹೊಂದಿತ್ತು” ಎಂದರು.
ಡಾ. ಬಸು ಬೇವಿನಗಿಡದ, ಆನಂದ ಪಾಟೀಲ, ಡಾ. ಶಶಿಧರ ನರೇಂದ್ರ ಮಾತನಾಡಿದರು. ಡಾ. ಹ.ವೆಂ. ಕಾಖಂಡಿಕಿ ನಿರೂಪಿಸಿದರು. ಅರವಿಂದ ಕುಲಕರ್ಣಿ, ಲಿಂಗರಾಜ ಅಂಗಡಿ, ಜಯತೀರ್ಥ ಜಾಗೀರ್ದಾರ್, ಸಮೀರ ಜೋಶಿ ಉಪಸ್ಥಿತರಿದ್ದರು.