ಮಂಗಳೂರು : ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ಆಜಂದಿ ಎಣ್ಣೆ ಮಾಜಂದಿ ನಿನೇ ತೆಕ್ಕಂದಿ ತುಡರ್’ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ವಾಮನ ನಂದಾವರ ಇವರಿಗೆ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ದಿನಾಂಕ 19 ಮಾರ್ಚ್ 2025ರಂದು ಉರ್ವಸ್ಟೋರ್‌ನ ತುಳು ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಿರಿಯ ವಿದ್ವಾಂಸ ಪ್ರೊ. ವಿವೇಕ್ ರೈ ಮಾತನಾಡಿ “ಡಾ. ವಾಮನ ನಂದಾವರ ಅವರು ತುಳು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ತುಳು ಸಾಹಿತ್ಯ ಬೆಳೆಯಲು ನಿರಂತರವಾಗಿ ಶ್ರಮಿಸಿದ್ದಾರೆ. ತನ್ನ ಕೃತಿಗಳ ಮೂಲಕ ನಿರಂತರ ತುಳು ಸೇವೆ ಮಾಡುತ್ತಲೇ ಇದ್ದರು. ನಂದಾವರ ಓರ್ವ ಉತ್ತಮ ಪ್ರಕಾಶಕ, ಸಂಘಟಕ, ಸಾಹಿತಿ, ಕಥೆಗಾರ ಆಗಿದ್ದರು. ಜತೆಗೆ ಊರವರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ ವ್ಯಕ್ತಿಯಾಗಿದ್ದರು. ಆರಂಭದ ದಿನಗಳಲ್ಲೇ ತುಳುವಿನ ಬಗ್ಗೆ ಕೆಲಸ ಮಾಡಬೇಕೆನ್ನುವ ಉತ್ಸಾಹ ಅವರಲ್ಲಿತ್ತು. ಗಣಿತ ಶಿಕ್ಷಕರಾಗಿದ್ದು ವಿದ್ಯಾರ್ಥಿಗಳಿಗಾಗಿ ಬರೆದ ಪದ್ಯಗಳು ಪ್ರಸಿದ್ಧಿ ಗಳಿಸಿವೆ. ನಂದಾವರ ಅವರು ಸ್ವಂತ ಖರ್ಚಿನಿಂದಲೇ ತುಳು ಕೃತಿಗಳನ್ನು ಪ್ರಕಟಿಸುತ್ತಿದ್ದರು. ಹಳ್ಳಿ ಪ್ರದೇಶದಲ್ಲಿ ಬೆಳೆದು ಬಂದ ಕಾರಣದಿಂದಾಗಿ ಕಷ್ಟದ ಜೀವನ ಅವರಿಗೆ ಅರಿವಿತ್ತು. ಕೋಟಿ ಚೆನ್ನಯ್ಯ ಜಾನಪದ ಅಧ್ಯಯನಕ್ಕೆ 145 ಜನರನ್ನು ಸಂದರ್ಶಿಸಿದ್ದಾರೆ. ಅಚ್ಚುಕಟ್ಟಾಗಿ ಸಂಶೋಧನ ಕೃತಿ ಹೊರಬಂದಿದೆ. ಅವರ ಕೃತಿಗಳು ವೈಜ್ಞಾನಿಕ ಶಿಸ್ತಿನೊಂದಿಗೆ ಹಳ್ಳಿಯನ್ನು ಪ್ರತಿಪಾದಿಸುತ್ತಿವೆ” ಎಂದು ಹೇಳಿದರು.
ಕರಾವಳಿ ಲೇಖಕಿಯರು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಪ್ಯಾನಿ ಆಲ್ವಾರಿಸ್, ಪ್ರಮುಖರಾದ ಎ.ಸಿ. ಭಂಡಾರಿ, ಚಿನ್ನಪ್ಪ ಗೌಡ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ರಾಜೇಶ್ ಜಿ., ತುಕಾರಾಂ ಪೂಜಾರಿ ಮೊದಲಾದವರು ನುಡಿನಮನ ಸಲ್ಲಿಸಿದರು. ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿದರು.