ಉಡುಪಿ : ಸಾಂಸ್ಕೃತಿಕ ಸಾಮಾಜಿಕ ಸಾಹಿತ್ಯಿಕ ಸಂಸ್ಥೆ ಅಮೋಘ (ರಿ.) ಉಡುಪಿ ಇದರ ವತಿಯಿಂದ ‘ಸಾಮರಸ್ಯ ಪ್ರಶಸ್ತಿ ಪುರಸ್ಕಾರ’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 24 ಮೇ 2025ರಂದು ಸಂಜೆ 4-00 ಗಂಟೆಗೆ ಉಡುಪಿ ಎಂ.ಜಿ.ಎಂ. ಕಾಲೇಜು ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವಿದ್ವಾಂಸರಾದ ಡಾ. ಪಾದೆಕಲ್ಲು ವಿಷ್ಣು ಭಟ್ ಇವರು ವಹಿಸಲಿದ್ದು, ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಗುರುಪೀಠ ಇದರ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಇವರಿಗೆ ಮಾಹೆ, ಮಣಿಪಾಲದ ಮಾನ್ಯ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಶ್ರೀ ವಾದಿರಾಜ, ಕ.ಸಾ.ಪ. ಉಡುಪಿ ಜಿಲ್ಲೆಯ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗ, ಉಡುಪಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ನಿವೃತ್ತ ಮುಖ್ಯಸ್ಥರಾದ ಶ್ರೀ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ, ಹಿರಿಯ ಲೇಖಕಿ ಶ್ರೀಮತಿ ಪಾರ್ವತಿ ಜಿ. ಐತಾಳ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಲೇಖಕಿ ಪೂರ್ಣಿಮಾ ಸುರೇಶ್ ಇವರ 2024ರ ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಕೃತಿ ‘ಸಂತೆಯೊಳಗಿನ ಏಕಾಂತ’ ಮತ್ತು ಪಾರ್ವತಿ ಜಿ. ಐತಾಳ್ ಇವರು ಅನುವಾದಿಸಿದ ‘ದಿ ಅಕ್ವೇರಿಯಂ’ ಎಂಬ ಕೃತಿಗಳು ಬಿಡುಗಡೆಗೊಳ್ಳಲಿದೆ.