27 ಮಾರ್ಚ್ 2023, ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ಗುರುವಾರ ದಿನಾಂಕ 23-03-2023ರ ಸಂಜೆ ನಡೆದ “ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು” ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಉಪನ್ಯಾಸ ನೀಡಿದರು.
“ಅಸ್ಪೃಶ್ಯತೆಯು ಮಾನವ ಕುಲಕ್ಕೆ ಅಂಟಿದ ದೊಡ್ಡ ಕಳಂಕ. ಅದನ್ನು ನಿರ್ಮೂಲನಗೊಳಿಸಲು ಹೋರಾಟ ಅಥವಾ ಸಂಘರ್ಷದಿಂದ ಅಸಾಧ್ಯ. ಅದಕ್ಕೆ ಬೇಕಾದುದು ಮುಕ್ತ ಮನಸ್ಸು. ತೆರೆದ ಮನಸ್ಸಿಂದ ಮಾತ್ರ ಸಾಮರಸ್ಯ ಮೂಡಬಹುದು. ಸಾಮರಸ್ಯಕ್ಕೆ ನಮ್ಮ ಮನೆಯೇ ವೇದಿಕೆಯಾಗಬೇಕು. ಇದು ಕೇವಲ ಮಾತಿನಿಂದ ಮಾತ್ರವಲ್ಲದೆ ಅನುಷ್ಠಾನದಲ್ಲೂ ಕಾಣಬೇಕಾಗಿದೆ. ತಾನೇ ಇತರರಿಂದ ಶ್ರೇಷ್ಠ ಎನ್ನುವ ಸಂಕುಚಿತ ಭಾವನೆಯಿಂದ ಇತರ ವರ್ಗ ಅಥವಾ ವ್ಯಕ್ತಿಗಳನ್ನು ತುಚ್ಛವಾಗಿ ಅಥವಾ ಕೀಳಾಗಿ ಕಾಣುವುದೇ ಅಸ್ಪೃಶ್ಯತೆ. ತಮ್ಮತನವನ್ನು ಉಳಿಸಿಕೊಂಡು ಅಸ್ಪೃಶ್ಯತೆಯನ್ನು ತೊಡೆದು ಹಾಕಬೇಕು. ದೇವಾಲಯಗಳಿಗೆ ಎಲ್ಲರಿಗೂ ಮುಕ್ತವಾಗಿ ಪ್ರವೇಶ ದೊರೆಯಬೇಕು. ಶವ ಸಂಸ್ಕಾರದಲ್ಲೂ ಅಸ್ಪೃಶ್ಯತೆಯನ್ನು ಕಾಣುವ ಕೀಳು ಚಿಂತನೆ ನೀಗಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿವೃತ್ತ ಉಪನ್ಯಾಸಕ, ಸಾಹಿತಿ ಪ್ರೊ.ಪಿ.ಎನ್. ಮೂಡಿತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಸಮಾಜದ ಅಶಾಂತಿಗೆ ಮುಖ್ಯ ಕಾರಣವೇ ಅಸಮಾನತೆಯಾಗಿದೆ. ಮೊದಲಿದ್ದಷ್ಟು ಈಗಿಲ್ಲವಾದರೂ ಸಂಪೂರ್ಣವಾಗಿ ತೊಡೆದು ಹೋಗಿಲ್ಲ. ಇದಕ್ಕೆ ಎಲ್ಲರೂ ತನ್ನವರೆಂಬ ಉದಾರ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕ್ ಬಿ.ಗೋಪಾಲ ಚೆಟ್ಟಿಯಾರ್ ಪೆರ್ಲ ಗೌರವ ಉಪಸ್ಥಿತಿಯಲ್ಲಿ, ರಾಜೇಶ್ ಪದ್ಮಾರ್ ಅವರ “ಸಾಮರಸ್ಯಕ್ಕೆ ಬೇಕು ತೆರೆದ ಮನಸ್ಸು” ಎಂಬ ಪುಸ್ತಕ ಅನಾವರಣಗೊಂಡಿತು. ಆರ್.ಎಸ್.ಎಸ್. ಬದಿಯಡ್ಕ ತಾಲೂಕು ಪ್ರಚಾರ ಪ್ರಮುಖ್ ಗಣೇಶ್ ಪಿ.ಎಂ. ಮುಂಡಾನ್ ತ್ತಡ್ಕ ಸ್ವಾಗತಿಸಿ, ಕಾಸರಗೋಡು ಗ್ರಾಮಾಂತರ ತಾಲೂಕು ಪ್ರಚಾರ ಪ್ರಮುಖ್ ಪ್ರಮೋದ್ ವಂದಿಸಿದರು. ಮಂಜೇಶ್ವರ ತಾಲೂಕು ಪ್ರಚಾರ ಪ್ರಮುಖ್ ಜಗದೀಶ್ ಪ್ರತಾಪನಗರ ಕಾರ್ಯಕ್ರಮ ನಿರೂಪಿಸಿದರು. ರಂಜಿತ್ ಕೋಡಿಬೈಲು ವೈಯಕ್ತಿಕ ಗೀತೆ ಹಾಡಿದರು.