ಮಂಗಳೂರು : ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಆಯೋಜಿಸಿದ ‘ಸಮರ್ಪಣಂ ಕಲೋತ್ಸವ – 2025’ ದಿನಾಂಕ 03 ಏಪ್ರಿಲ್ 2025ರ ಗುರುವಾರದಂದು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಮಾತನಾಡಿ “ವ್ಯಕ್ತಿಯು ತನ್ನ ಕೃತಿ ಹಾಗೂ ಕಾರ್ಯಗಳಿಂದ ಅಮರನಾಗುತ್ತಾನೆ. ಮೇರು ವಿದ್ವಾಂಸರಾದ ಡಾ. ಜಿ. ಜ್ಞಾನಾನಂದ ಅವರು 75ಕ್ಕೂ ಅಧಿಕ ಕೃತಿಗಳ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆ ಕೃತಿಗಳನ್ನು ಓದುವ ಮನಸ್ಸು ನಮ್ಮದಾಗಬೇಕು” ಎಂದು ಅಭಿಪ್ರಾಯಪಟ್ಟರು.
ಕರಾವಳಿಯ ವಿಶ್ವಬ್ರಾಹ್ಮಣ ಶಿಲ್ಪಿಗಳು, ಕಲಾವಿದರು, ಕುಶಲಕರ್ಮಿಗಳ ಪರವಾಗಿ ವಿಶ್ವಕರ್ಮ ಕಲಾ ಪರಿಷತ್ ವತಿಯಿಂದ ಶಿಲಾಶಾಸ್ತ್ರಜ್ಞ ಪ್ರಾಚೀನ ವಿಶ್ವಬ್ರಾಹ್ಮಣ ಪರಂಪರೆಯ ಸಮರ್ಥ ರಾಯಭಾರಿ, ಸಂಶೋಧಕ, ಲೇಖಕ ಮೇರು ವಿದ್ವಾಂಸ ಡಾ. ಜಿ. ಜ್ಞಾನಾನಂದ ಅವರಿಗೆ ‘ಭೌವನ ವಿಶ್ವಕರ್ಮ ಕಲಾ ಪ್ರಶಸ್ತಿ’ ನೀಡಿ ಗೌರವಾಭಿನಂದನೆ ಸಲ್ಲಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಡಾ. ಜಿ. ಜ್ಞಾನಾನಂದ ಮಾತನಾಡಿ “ವಿಶ್ವಕರ್ಮನ ಬಗ್ಗೆ ಅನೇಕ ವ್ಯಾಖ್ಯಾನಗಳನ್ನು ಅನೇಕರು ನೀಡಿದ್ದಾರೆ. ವಿಶ್ವಕರ್ಮ ಸರ್ವವನ್ನು ಸೃಷ್ಟಿಸಿದವ ಮನುಷ್ಯನ ಸೃಷ್ಟಿ ಬ್ರಹ್ಮನ ಕೆಲಸ. ಭಕ್ತರು ಕೇಳಿದ್ದನ್ನು ಕೊಡುವುದು ದೇವತೆಗಳ ಕೆಲಸ. ದೇವತೆಗಳನ್ನು ತಯಾರು ಮಾಡುವುದು ಶಿಲ್ಪಿಗಳು. ಶ್ರೇಷ್ಠ ಜೀವನ ನಡೆಸುವ ಅವಕಾಶ ನಮಗೆ ಒದಗಿದೆ. ಅದನ್ನು ಬಳಸಿ ಲೋಕವನ್ನು ಸುಖವಾಗಿ ಇಡುವ ಕೆಲಸವನ್ನು ನಾವು ಮಾಡಬೇಕು” ಎಂದರು. ಜ್ಞಾನಾನಂದ ಅವರಿಗೆ ಚಿತ್ರ-ಕಾವ್ಯ-ಗಾಯನದ ಅಭಿನಂದನೆ ಸಲ್ಲಿಸಲಾಯಿತು. ಅಶೋಕ್ ಎನ್. ಕಡೆಶಿವಾಲಯ ರಚಿಸಿದ ಸ್ತುತಿಗೀತೆಯನ್ನು ಲಾವಣ್ಯ ಆಚಾರ್ಯ ಹಾಡಿದರು. ಜ್ಞಾನಾನಂದರ ಚಿತ್ರವನ್ನು ಕರಣ್ ಅಚಾರ್ಯ ರಚಿಸಿದರು.
ಯಕ್ಷಗಾನ ಕಲಾವಿದ ಎಂ. ಕೆ. ರಮೇಶ ಆಚಾರ್ಯ ತೀರ್ಥಹಳ್ಳಿ, ಕುಂಭಾಶಿಯ ಹರಿದಾಸ ಕೆ. ಶ್ರೀಧರ ದಾಸ್, ಸ್ವರ್ಣಶಿಲ್ಪಿ ಅಡ್ಡೂರು ಉಪೇಂದ್ರ ಆಚಾರ್ಯ, ಚಿತ್ರ ಕಲಾವಿದ ವೈ. ಎನ್. ಗಣೇಶ ಆಚಾರ್ಯ ಕೊಲ್ಯ, ಅಯಸ್ ಶಿಲ್ಪಿ ಲಿಂಗಪ್ಪ ಆಚಾರ್ಯ ವಾಮಂಜೂರು ಇವರಿಗೆ ಶಿವಪುರ ಪದ್ಮನಾಭ ಅಚಾರ್ಯ ಪುರಸ್ಕಾರ ಸಹಿತ ವಿಶ್ವಕರ್ಮ ಕಲಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಚಿತ್ರ ಕಲಾವಿದ ಕರಣ್ ಆಚಾರ್ಯ ಉಡುಪಿ, ಎರಕ ಶಿಲ್ಪಿ ಶರತ್ ಎಲ್. ಅಚಾರ್ಯ, ನೃತ್ಯ ಕಲಾವಿದೆ ಪುತ್ತೂರು ನಾಟ್ಯರಂಗದ ವಿದುಷಿ ಮಂಜುಳಾ ಸುಬ್ರಹ್ಮಣ್ಯ, ಲೇಖಕ ಅಶೋಕ್ ಎನ್. ಕಡೇಶಿವಾಲಯ, ಸೂಕ್ಷ್ಮಕಲಾವಿದ (ಮೈಕ್ರೋ ಅರ್ಟಿಸ್ಟ್) ಕಾಸರಗೋಡಿನ ವೆಂಕಟೇಶ್ ಆಚಾರ್ಯ ತಲೆಬೈಲ್ ಇವರಿಗೆ ಪಿ. ಎನ್. ಆಚಾರ್ಯ ಪುರಸ್ಕಾರ ಸಹಿತ ವಿಶ್ವಕರ್ಮ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀ ಭ್ರಮರಿ ಕ್ರಿಯೇಷನ್ಸ್ ಪ್ರೈ. ಲಿ. ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ಹರೀಶ್ಚಂದ್ರ ಎನ್. ಆಚಾರ್ಯ, ಶ್ರೀ ಕಾಳಿಕಾಂಬಾ ವಿನಾಯಕ ದೇಗುಲದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ, ವಿಶ್ವಕರ್ಮ ಕಲಾ ಪರಿಷತ್ ಇದರ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್, ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಇದರ ಅಧ್ಯಕ್ಷರಾದ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಇದರ ನಿಕಟಪೂರ್ವ ಅಧ್ಯಕ್ಷರಾದ ಸದಾನಂದ ಎನ್. ಆಚಾರ್ಯ, ಕುಂಭಾಶಿ ವಿಶ್ವಕರ್ಮ ಶಿಲ್ಪಕಲಾ ಕೇಂದ್ರ ಕೋಟೇಶ್ವರ ಇದರ ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಪ್ರಮುಖರಾದ ಪ್ರೊಫೆಸರ್ ಯಶವಂತ ಆಚಾರ್ಯ, ಹರಿದಾಸ್ ಎಸ್. ಪಿ. ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಸುಂದರ ಆಚಾರ್ಯ ಬೆಳುವಾಯಿ ಸ್ವಾಗತಿಸಿ, ವಿದ್ವಾನ್ ಎನ್.ಆರ್. ದಾಮೋದರ ಶರ್ಮ ಬಾರ್ಕೂರು ನಿರೂಪಿಸಿ, ರತ್ನಾವತಿ ಜೆ. ಬೈಕಾಡಿ ವರದಿ ವಾಚಿಸಿ, ಎ. ಜಿ. ಸದಾಶಿವ ಆಚಾರ್ಯ ಧನ್ಯವಾದ ಸಮರ್ಪಿಸಿದರು.