ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಹಮ್ಮಿಕೊಂಡಿರುವ ‘ಸಮರ್ಪಣಂ ಕಲೋತ್ಸವ 2024’ವು ದಿನಾಂಕ 13-04-2024ರಂದು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಸಮರ್ಪಣಂ ಕಲೋತ್ಸವದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪ ಪ್ರಜ್ವಲನೆ ಮಾಡಿ ನೆರವೇರಿಸಲಿರುವರು. ಇದೇ ಸಂದರ್ಭದಲ್ಲಿ ವಿಶ್ವವಿಖ್ಯಾತ ಅಯೋಧ್ಯಾ ಶ್ರೀ ರಾಮಲಲ್ಲಾ ವಿಗ್ರಹ ನಿರ್ಮಾತೃ ಅಭಿನವ ಅಮರಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಜೀ ಇವರಿಗೆ ‘ವಿಶ್ವಕರ್ಮ ಕುಲ ತಿಲಕ’ ಬಿರುದು ಪ್ರದಾನ ಹಾಗೂ ಗೌರವ ಸಂಮಾನ ನಡೆಯಲಿದೆ. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಇವರು ಕಲೋತ್ಸವಕ್ಕೆ ಚಾಲನೆ ನೀಡಲಿದ್ದು, ವಿಶ್ವಕರ್ಮ ಕಲಾ ಪರಿಷತ್ ಇದರ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯ ಕಲಾ ಸಾಧಕರಾದ ಹರೇಕಳದ ಕಾಷ್ಠಶಿಲ್ಪಿ ಶ್ರೀ ಬೈತಾರ್ ಬಾಲಕೃಷ್ಣ ಆಚಾರ್ಯ, ಬಂಟ್ವಾಳದ ಯಕ್ಷಗಾನ ಕಲಾವಿದ ಶ್ರೀ ಜಯರಾಮ ಆಚಾರ್ಯ, ರಂಗಭೂಮಿ ಕಲಾವಿದ ಕುಂಟೆರಾಮೆ ಖ್ಯಾತಿಯ ಶ್ರೀ ಜಿ.ಎಸ್. ಆಚಾರ್, ವಾಮಂಜೂರಿನ ಚಿತ್ರಕಲಾವಿದ ಶ್ರೀ ಸೋಮನಾಥ ಆಚಾರ್ಯ ಮತ್ತು ಕಾರ್ಕಳದ ಬಹುಮುಖ ಪ್ರತಿಭೆಯ ಕಲಾವಿದೆ ಹಾಗೂ ಕುಶಲಕರ್ಮಿ ಶ್ರೀಮತಿ ಸರೋಜಿನಿ ವಸಂತ್ ಇವರುಗಳನ್ನು ಸನ್ಮಾನಿಸಲಾಗುವುದು. ಶಿಲ್ಪಿಶ್ರೀ ಚಿದಾನಂದ ಆಚಾರ್ಯ ವಿಟ್ಲ, ಶಿಲ್ಪಿಶ್ರೀ ಜಯ ಚಂದ್ರ ಆಚಾರ್ಯ ನಾಳ, ಕುಮಾರಿ ಸಾನಿಧ್ಯ ಆಚಾರ್ಯ ಪೆರ್ಡೂರು, ಶ್ರೀ ಕೌಶಿಕ್ ಆಚಾರ್ಯ ಮತ್ತು ಶ್ರೀ ನಿರಂಜನ ಆಚಾರ್ಯ ಕಡ್ಲಾರು ಇವರಿಗೆ ‘ಪಿ.ಎನ್. ಆಚಾರ್ಯ ವಿಶ್ವಕರ್ಮ ಕಲಾ ಪ್ರಶಸ್ತಿ’ ನೀಡಲಾಗುವುದು. ಶ್ರೀ ಉದಯಭಾಸ್ಕರ್ ಸುಳ್ಯ, ಕು. ಶ್ರೇಯಾ ಆಚಾರ್ಯ ಆಲಂಕಾರು, ಮಾಸ್ಟರ್ ಯಶಸ್ ಆಚಾರ್ಯ ಆಲಂಕಾರು ಇವರು ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಯಕ್ಷ, ಕಾವ್ಯ ಮತ್ತು ನೃತ್ಯಾಭಿವಂದನೆಯನ್ನು ಪ್ರಸ್ತುತ ಪಡಿಸಲಿದ್ದಾರೆ.