ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಹಮ್ಮಿಕೊಂಡಿರುವ ‘ಸಮರ್ಪಣಂ ಕಲೋತ್ಸವ 2025’ವನ್ನು ದಿನಾಂಕ 03 ಏಪ್ರಿಲ್ 2025ರಂದು ಪೂರ್ವಾಹ್ನ 10-00 ಗಂಟೆಗೆ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 10-00 ಗಂಟೆಗೆ ವಿಶ್ವಕರ್ಮ ಕಲಾ ಪರಿಷತ್ ಸದಸ್ಯರಿಂದ ಸಾಂಸ್ಕೃತಿಕ ಸೌರಭ ಪ್ರಸ್ತುತಗೊಳ್ಳಲಿದೆ. ‘ಸಮರ್ಪಣಂ ಕಲೋತ್ಸವ’ದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮಜ್ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪೀಠಾಧೀಶ್ವರ ಪರಮ ಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪ ಪ್ರಜ್ವಲನೆ ಮಾಡಿ ನೆರವೇರಿಸಲಿರುವರು. ಇದೇ ಸಂದರ್ಭದಲ್ಲಿ ಪ್ರಾಚೀನ ವಿಶ್ವಬ್ರಾಹ್ಮಣ ಪರಂಪರೆಯ ಸಮರ್ಥ ರಾಯಭಾರಿ ಸಂಶೋಧಕ ಲೇಖಕ ಮೇರು ವಿದ್ವಾಂಸ ಡಾ. ಜಿ. ಜ್ಞಾನಾನಂದ ಇವರಿಗೆ ‘ಭೌವನ ವಿಶ್ವಕರ್ಮ ಕಲಾ ಪ್ರಶಸ್ತಿ’ ಪ್ರದಾನ ಹಾಗೂ ಗೌರವಾಭಿನಂದನೆ ನಡೆಯಲಿದೆ. ಬೆಂಗಳೂರಿನ ಶ್ರೀ ಭ್ರಮರಿ ಕ್ರಿಯೇಷನ್ಸ್ ಪ್ರೈವೇಟ್ ಲಿ. ಇದರ ವ್ಯವಸ್ಥಾಪಕ ನಿರ್ದೇಶಕರಾದ ಹರೀಶ್ಚಂದ್ರ ಎನ್. ಆಚಾರ್ಯ ಇವರು ಕಲೋತ್ಸವಕ್ಕೆ ಚಾಲನೆ ನೀಡಲಿದ್ದು, ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್ ಇದರ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯ ಖ್ಯಾತ ಯಕ್ಷಗಾನ ಕಲಾವಿದ ಎಂ.ಕೆ. ರಮೇಶ ಆಚಾರ್ಯ ತೀರ್ಥಹಳ್ಳಿ, ಹಿರಿಯ ಹರಿದಾಸ ಕೀರ್ತನ ಕಲಾಗ್ರೇಸರ ಆಚಾರ್ಯ ಡಾ. ಕೆ. ಶ್ರೀಧರ ದಾಸಜೀ ಕುಂಭಾಶಿ, ಹಿರಿಯ ಸ್ವರ್ಣಶಿಲ್ಪಿ ಸಮಾಜ ಸೇವಕ ಅಡ್ಡೂರು ಉಪೇಂದ್ರ ಆಚಾರ್ಯ ಮಂಗಳೂರು, ಹಿರಿಯ ಚಿತ್ರಕಲಾವಿದ ವೈ.ಎನ್. ಗಣೇಶ್ ಆಚಾರ್ಯ ಮಂಗಳೂರು ಮತ್ತು ಹಿರಿಯ ಅಯಸ್ ಶಿಲ್ಪಿ ಲಿಂಗಪ್ಪ ಆಚಾರ್ಯ ವಾಮಂಜೂರು ಇವರುಗಳಿಗೆ ದಿ. ಶಿವಪುರ ಪದ್ಮನಾಭ ಆಚಾರ್ಯ ಪುರಸ್ಕಾರ ಸಹಿತ ವಿಶ್ವಕರ್ಮ ಕಲಾ ಪ್ರಶಸ್ತಿ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಕರಣ್ ಆಚಾರ್ಯ ಉಡುಪಿ, ಖ್ಯಾತ ಎರಕ ಶಿಲ್ಪಿ ಡಾ. ಜ್ಞಾನಾನಂದರ ಶಿಷ್ಯ ಶಿಲ್ಪಿ ಶರತ್ ಎಲ್. ಆಚಾರ್ಯ, ಖ್ಯಾತ ನೃತ್ಯ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ, ಲೇಖಕ ಕವಿ ಯುವಸಾಹಿತಿ ಅಶೋಕ ಎನ್. ಕಡೇಶಿವಾಲಯ ಮತ್ತು ಖ್ಯಾತ ಸೂಕ್ಷ್ಮ ಕಲಾವಿದ ವೆಂಕಟೇಶ್ ಆಚಾರ್ಯ ತಲೆಬೈಲು ಕಾಸರಗೋಡು ಇವರುಗಳಿಗೆ ಪಿ.ಎನ್. ಆಚಾರ್ಯ ಪುರಸ್ಕಾರ ಸಹಿತ ವಿಶ್ವಕರ್ಮ ಕಲಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ. ಜಿ. ಜ್ಞಾನಾನಂದ ಇವರಿಗೆ ಅಶೋಕ ಎನ್. ಕಡೇಶಿವಾಲಯ ಇವರಿಂದ ಕಾವ್ಯಾಭಿವಂದನೆ ಮತ್ತು ವಿದುಷಿ ಲಾವಣ್ಯ ಸುಧಾಕರ್ ಇವರಿಂದ ಗಾನಾಭಿವಂದನೆ, ವಿಶ್ವ ಬ್ರಾಹ್ಮಣ ಸಮಾಜದ ಕಲಾವಿದರಿಂದ ಶಿಲ್ಪಿಗಳು ಹಾಗೂ ಕುಶಲ ಕರ್ಮಿಗಳಿಂದ ವೈವಿಧ್ಯಮಯ ಕಾಲಕೃತಿಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿದೆ.