ಕಾಸರಗೋಡು : ಹರಿಕಥೆ ಉಳಿಸಿ ಅಭಿಯಾನ ಸಮಿತಿ ಇದರ ವತಿಯಿಂದ ಗುಡ್ಡೆ ಕ್ಷೇತ್ರ ಶ್ರೀ ಪಾರ್ವತಿ ಅಮ್ಮ ದೇವಸ್ಥಾನದಲ್ಲಿ ನವರಾತ್ರಿಗೆ ಆಯೋಜಿಸಿದ ಸಂಪೂರ್ಣ ಶ್ರೀಮದ್ ದೇವಿ ಭಾಗವತ 11 ದಿನಗಳ ಹರಿಕಥೋತ್ಸವವು ದಿನಾಂಕ 22 ಸೆಪ್ಟೆಂಬರ್ 2025ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನವಿತ್ತ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ “ವರ್ತಮಾನ ಕಾಲಘಟ್ಟದಲ್ಲಿ ಆಧುನಿಕ ತಂತ್ರಜ್ಞಾನಗಳ ಬಹುವಿಧ ಪ್ರದರ್ಶನಗಳ ಮಧ್ಯೆ ನಮ್ಮ ಧಾರ್ಮಿಕ ಕಲೆಗಳ ಉಳಿವಿಗೆ ಪ್ರಯತ್ನ ಅಗತ್ಯವಿದೆ. ಹರಿಕಥೆ ಅಂತಹ ಪುರಾಣ, ಸಂಸ್ಕೃತಿ ಪ್ರಧಾನ ಕಲೆಗಳ ಪ್ರಯೋಗ ಆಕರ್ಷಣೆಯ ಸಹಿತ ಅದರ ಗುಣಮಟ್ಟ ಕಾಯ್ದುಕೊಂಡು ಹೆಚ್ಚಿನ ಪ್ರೋತ್ಸಾಹ ಸಿಗುವ ಚಿಂತನೆ ನಡೆಸಬೇಕು” ಎಂದು ನುಡಿದರು.
ಗುಡ್ಡೆ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ. ಅನಂತ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಚಿತ್ರನಟ ಕಾಸರಗೋಡು ಚಿನ್ನಾ ಇವರು ಮಾತನಾಡಿ “ಹಿರಿಯ ಕಲಾವಿದರೆಲ್ಲ ಶಿಷ್ಟ ಕಲೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಜವಾಬ್ದಾರಿಯನ್ನು ಯುವ ಸಂಘಟಕರಿಗೆ ದಾಟಿಸುವ ಕೆಲಸ ಮಾಡಬೇಕು. ಈ ಕಾರ್ಯ ಸಕ್ರಿಯಗೊಂಡಾಗ ಮಾತ್ರ ಹರಿಕಥೆ, ಮತ್ತಿತರ ಶಾಸ್ತ್ರೀಯ ಕಲೆಗಳಿಗೆ ಪ್ರೇಕ್ಷಕರ ಹೆಚ್ಚಳ ನಿರೀಕ್ಷಿಸಬಹುದು” ಎಂದರು.
ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಮಾಲಕರು ಎಂ. ರವೀಂದ್ರ ಶೇಟ್, ಅಡ್ವಕೇಟ್ ಸದಾನಂದ ರೈ ಕಾಸರಗೋಡು, ಸಂಗೀತಗಾರ ಸದಾಶಿವ ಆಚಾರ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು. ಅಭಿಯಾನ ಸಮಿತಿ ಸಂಚಾಲಕರು ಕೆ. ಮಹಾಬಲ ಶೆಟ್ಟಿ ಪ್ರಸ್ತಾವನೆಗೈದರು. ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ರಂಗನಟ ಸುಬ್ಬಣ್ಣ ಶೆಟ್ಟಿ ವಂದಿಸಿದರು. ಶ್ರೀಮತಿ ವಿಜಯಲಕ್ಷ್ಮಿ ಶಂ ನಾಡಿಗ ಇವರಿಂದ ‘ಶ್ರೀದೇವಿ ಭಾಗವತ’ ಪ್ರಥಮ ಸ್ಕಂದ ಹರಿಕಥೆ ಜರಗಿತು.