ಬೆಂಗಳೂರು : ಸಂಸ ಥಿಯೇಟರ್ ಬೆಂಗಳೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಇವರ ಸಹಕಾರದೊಂದಿಗೆ ‘ಸಂಸ ನಾಟಕೋತ್ಸವ’ವನ್ನು ಬೆಂಗಳೂರಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ದಿನಾಂಕ 23 ಸೆಪ್ಟೆಂಬರ್ 2024ರಿಂದ 26 ಸೆಪ್ಟೆಂಬರ್ 2024ರವರೆಗೆ ಆಯೋಜಿಸಲಾಗಿದೆ.
ದಿನಾಂಕ 23 ಸೆಪ್ಟೆಂಬರ್ 2024ರಂದು ಸಂಜೆ 6-45ಕ್ಕೆ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ಇವರು ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ಹಾಸನದ ಕಲಾಸಿರಿ ನಾಟಕ ಶಾಲೆಯವರಿಂದ ರಾಜೇಂದ್ರ ಕಾರಂತ ರಚಿಸಿರುವ ಜಯಶಂಕರ್ ಬೆಳಗುಂಬ ಇವರ ನಿರ್ದೇಶನದಲ್ಲಿ ‘ಸಂಜೆ ಹಾಡು’ ನಾಟಕ ಪ್ರದರ್ಶನ ನಡೆಯಲಿದೆ.
ರಾಜೇಂದ್ರ ಕಾರಂತ ರಚಿಸಿದ ನಾಟಕ ‘ಸಂಜೆ ಹಾಡು’ ಈ ದಿನಮಾನಗಳಲ್ಲಿ ಹಣದ ಹಿಂದೆ ಬಿದ್ದ ಮನುಷ್ಯ, ಸಂಬಂಧಗಳಿಗೆ ಬೆಲೆ ಕೊಡುವುದು ಕಡಿಮೆಯಾಗಿದೆ. ಇವನಲ್ಲ ಇದ್ದರೂ ಮನುಷ್ಯನ ಸಂಜೆಕಾಲದಲ್ಲಿ ಆಸರೆ ಆಗಬೇಕಾದ ಮಕ್ಕಳು, ಎಲ್ಲೋ ಒಂದು ಕಡೆ ಸೆಟ್ಲಾಗುವ ಭರದಲ್ಲಿ ಅನಾಥಾಶ್ರಮಗಳು ಹೆಚ್ಚು ಹೆಚ್ಚು ಸೃಷ್ಟಿಯಾಗುತ್ತಿವೆ. ವಯಸ್ಸಾದ ತಂದೆಯ ಹಪಹಪಿ, ಮಗನ ಮೇಲಿನ ಪ್ರೀತಿ, ದುಗುಡ, ಕೋಪ, ಅನಾಥ ಪ್ರಜ್ಞೆ, ತಳಮಳ, ಕಣ್ಣೀರು, ಅಸಹಾಯಕತೆ ಈ ನಾಟಕದಲ್ಲಿ ಇವೆ. ಮಕ್ಕಳನ್ನು ಪ್ರೀತಿಸುವ ಹೆತ್ತವರು, ಹೆತ್ತವರನ್ನು ಪ್ರೀತಿಸುವ ಮಕ್ಕಳು ನೋಡಲೇಬೇಕಾದ ನಾಟಕ.
ದಿನಾಂಕ 24 ಸೆಪ್ಟೆಂಬರ್ 2024ರಂದು ಸಂಜೆ 6-45ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಪ್ರಾಧ್ಯಾಪಕರಾದ ಡಾ. ಬಿ. ಗಂಗಾಧರ್, ನಟ ಹಾಗೂ ರಂಗ ಸಂಘಟಕರಾದ ಸುಕುಮಾರ್ ಮೋಹನ್ ಮತ್ತು ರಂಗ ನಿರ್ದೇಶಕರಾದ ನಿರ್ಮಲಾ ನಾದನ್ ಇವರುಗಳು ಅತಿಥಿಗಳಾಗಿ ಭಾಗವಹಿಸಲಿರುವರು. 7-15 ಗಂಟೆಗೆ ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆಯವರು ಗುರುರಾಜ್ ಮಾರ್ಪಳ್ಳಿ ಇವರು ರಚಿಸಿ ನಿರ್ದೇಶಿಸಿದ ‘ಅವ್ವ ನನ್ನವ್ವ’ ನಾಟಕ ಪ್ರದರ್ಶನ ನೀಡಲಿದ್ದಾರೆ.
ಗುರುರಾಜ ಮಾರ್ಪಳ್ಳಿ ರಚಿಸಿ ನಿರ್ದೇಶಿಸಿರುವ ‘ಅವ್ವ ನನ್ನವ್ವ’ ನಾಟಕ, ತಂತ್ರಜ್ಞಾನದ ಯುಗ ಆಧುನಿಕರಣದ ನಾಗಾಲೋಟದಲ್ಲಿ ಮನುಷ್ಯ ನಾಗರೀಕತೆಯ ಮೇಲೆ ಬಹುದೊಡ್ಡ ಪ್ರಭಾವ ಮಾಡಿದ್ದಾನೆ. ಜಾಗತೀಕರಣದ ಈ ಅಂಧಾದುಂದಿ ಬ್ರೈನ್ ಹಾರ್ವೆಸ್ಟಿಂಗಿಗೆ ಗಂಡು, ಹೆಣ್ಣು ಭಯ ಆಗುತ್ತಿರುವ ಕಥೆಯನ್ನು ‘ಅವ್ವ ನನ್ನವ್ವ’ ನಾಟಕ ಹೇಳಬಯಸುತ್ತದೆ. ನಾಟಕಕಾರರು ತಂದೆ ಮಗಳು ಪಾತ್ರಗಳಿಂದ ಆಳವಾದ ಒಳನೋಟದಿಂದ ಈ ರಂಗರೂಪವನ್ನು ಸೃಷ್ಟಿಸಿದ್ದಾರೆ. ತಾಯಿಯು ಬಹುದೊಡ್ಡ ರೂಪಕವಾಗಿ ನಾಟಕದಲ್ಲಿ ಭೂಮಿಯ ಒಂದು ಪ್ರತಿಮೆ ಹಾಗೂ ಧ್ವನಿಯಾಗಿ ನಿಲ್ಲುತ್ತಾಳೆ.
ದಿನಾಂಕ 25 ಸೆಪ್ಟೆಂಬರ್ 2024ರಂದು ಸಂಜೆ 6-45ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಕತೆಗಾರರಾದ ಡಾ. ಕೂಡ್ಲೂರು ವೆಂಕಟಪ್ಪ, ಬರಹಗಾರರಾದ ಗಿರಿಯಪ್ಪ ಮತ್ತು ರಂಗ ನಟಿ ಗಾಯಿತ್ರಿ ಮಹಾದೇವ ಇವರುಗಳು ಅತಿಥಿಗಳಾಗಿ ಭಾಗವಹಿಸಲಿರುವರು. ಧಾರವಾಡದ ಆಟ ಮಾಟ ತಂಡದವರು ಮಹಾದೇವ ಹಡಪದ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ಆತೋಲ್ ಪೋಗಾಡ್ ‘ಗುಡ್ಡದ ಹಾಡು’ ಎಂಬ ನಾಟಕ ಪ್ರಸ್ತುತ ಪಡಿಸಲಿದ್ದಾರೆ.
ಮಹಾದೇವ ಹಡಪದ ನಟುವರ ರಂಗರೂಪ, ನಿರ್ದೇಶನ ಮಾಡಿ, ಅಭಿನಯಿಸಿರುವ ನಾಟಕ ‘ಗುಡ್ಡದ ಹಾಡು’. ಇದೊಂದು ಅಪ್ಪಟ ಕನ್ನಡ ನೆಲದ್ದೆ ಬದುಕಿನ ಚಿತ್ರಣ. ಚೌಡಿಕೆ ಸಂಪ್ರದಾಯ ಮತ್ತು ಯಲ್ಲಮ್ಮನ ಗುಡ್ಡ ಇಲ್ಲಿ ನೆಪಕ್ಕೆ ಬಳಸಲ್ಪಡುವ ಸಂಗತಿಯಲ್ಲ. ಆ ಸಂಪ್ರದಾಯದ ಹಾಡು, ಭಕ್ತಿ ಸಂಪ್ರದಾಯದ ನಿಲುವು ಕಾಲಂತರದಲ್ಲಿ ಬದಲಾಗುತ್ತಲೇ. ಅದರ ಕಥನ ಪರಂಪರೆಯ ಹಾಡುಗಳನ್ನು ದಾಟಿ ವಾದಿ ಸಂವಾದಿ ರೂಪದ ಗೀಗಿ ಪದಗಳ ಹದವನ್ನು ಕಂಡುಕೊಳ್ಳುತ್ತಾ ಬಂದಿತ್ತು. ಇದಿಷ್ಟರಲ್ಲೇ ಹೆಣ್ಣೆಚ್ಚು ಗಂಡುಹೆಚ್ಚು ಎಂಬಂತ ತತ್ವ ಆಧಾರಿತ ಜಿಜ್ಞಾಸೆಯಲ್ಲಿಯೂ ತಂಗಲಾರದೆ ಅದು ಕಿರುಚಾಡುವ ಮನೋರಂಜನೆಯ ಅಭಿರುಚಿಗೆ ಇಳಿದು ಮತ್ತೊಂದು ಜಾಮ್ ಝ ಮೇಳದ ಸ್ವರೂಪದಲ್ಲಿ ಪ್ರಕಟಗೊಳ್ಳತೊಡಗಿತು. ಉತ್ತರ ಕರ್ನಾಟಕದ ಹಲವು ಕಲಾ ಪ್ರಕಾರಗಳ ತಾಯಿ ಚೌಡಕೆ ಮೇಳ. ಅದರ ಸ್ವರಪದ ಯಥಾವತ್ ಕಥನವು ಈ ನಾಟಕದಲ್ಲಿದೆ.
ದಿನಾಂಕ 26 ಸೆಪ್ಟೆಂಬರ್ 2024ರಂದು ಸಂಜೆ 6-45ಕ್ಕೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಕೃತಿ ಚಿಂತಕರಾದ ಡಾ. ಎಂ.ಎಸ್. ಮೂರ್ತಿ ಇವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಎನ್. ಶಿವಲಿಂಗಯ್ಯ ಇವರ ನಿರ್ದೇಶನದಲ್ಲಿ ಮಂಡ್ಯದ ಗೋತಮಿ ಫೌಂಡೇಶನ್ ತಂಡದವರು ‘ಕಿಸಾ ಗೋತಮಿ’ ನಾಟಕ ಪ್ರದರ್ಶನ ನೀಡಲಿದ್ದಾರೆ.
ಶಿವಲಿಂಗಯ್ಯ ಎನ್. ರಚನೆ, ನಿರ್ದೇಶನ ಮಾಡಿರುವ ನಾಟಕ ಕಿಸಾ ಗೋತಮಿ. 2500 ವರ್ಷದ ಹಿಂದೆ ಕಪಿಲವಸ್ತುವಿನ ಆಸ್ಥಾನದ ರಾಜ ಶುದ್ಧೋಧನನ ಪತ್ನಿ ಮಹಾರಾಣಿ ಮಹಾಮಾಯೆ ಗರ್ಭದಲ್ಲಿ ಜನಿಸಿದ ಮಗು ಮುಂದೆ ಬುದ್ಧತ್ವವನ್ನು ಹೊಂದಿ, ಇಡೀ ಜಗತ್ತಿಗೆ ‘ಮನುಷ್ಯರು ತಮ್ಮ ಅಧಿಕಾರ ಲಾಲಸೆಗಾಗಿ ನಡೆಸುವ ಯುದ್ಧಗಳನ್ನು ತೊರೆದು ನಿಮ್ಮೊಳಗಿರುವ ಮೈತ್ರಿಯನ್ನು ಗಳಿಸಿಕೊಳ್ಳಿ ಆಗ ನಿಮ್ಮೊಳಗೆ ಅಚಲವಾದ ಶಾಂತಿ ಜಾಗ್ರುತವಾಗುತ್ತದೆ’ ಎಂದು ಬೋಧಿಸಿದರು. ಮನುಷ್ಯರ ದುಃಖ, ದುಃಖದ ಉಗಮಕ್ಕೆ ಕಾರಣ, ಅದಕ್ಕೆ ಪರಿಹಾರ, ಪರಿಹಾರದ ಮಾರ್ಗವನ್ನು ಬೋಧಿಸಿದರು. ‘ಕಿಸಾಗೋತಮಿ’ ಎಂಬ ಮುಗ್ಧ ಹೆಣ್ಣಿನ ಜೀವನದ ದೃಷ್ಟಾಂತದ ಘಟನೆ ಕುರಿತ್ತಾಗಿದೆ.
ದಿನಾಂಕ 27 ಸೆಪ್ಟೆಂಬರ್ 2024ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ, ಹಲಗೆವಡೇರಹಳ್ಳಿ ಕೆ.ಆರ್.ಪಿ. ಇಂಟಿಮೇಟ್ ಥಿಯೇಟರ್ ಇಲ್ಲಿ ‘ವಿಚಾರ ಸಂಕಿರಣ’ವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಕರ್ನಾಟಕ ಬೀದಿ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಸಾಂಬಶಿವ ದಳವಾಯಿ ಇವರ ಅಧ್ಯಕ್ಷತೆಯಲ್ಲಿ ಕಲಾವಿದರು ಹಾಗೂ ಸಂಘಟಕರಾದ ಸಿ.ಎಂ. ನರಸಿಂಹಮೂರ್ತಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಮೈಸೂರಿನ ನೆಲೆ ಹಿನ್ನೆಲೆ ಸಂಸ್ಥೆಯ ರಂಗ ಸಂಘಟಕರಾದ ಕೆ.ಆರ್. ಗೋಪಾಲಕೃಷ್ಣ ಮತ್ತು ರಂಗ ನಿರ್ದೇಶಕರಾದ ಪ್ರದೀಪ್ ತಿಪಟೂರು ಇವರು ಉಪನ್ಯಾಸ ನೀಡಲಿದ್ದಾರೆ.