‘ಸಂಸ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಕನ್ನಡದ ಖ್ಯಾತ ಸಾಹಿತಿಗಳಲ್ಲಿ ಒಬ್ಬರು ಎ. ಎನ್. ಸಾಮಿ ವೆಂಕಟಾದ್ರಿ ಅಯ್ಯರ್. ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದದ್ದು ‘ಸಾಮಿ’ ಎಂದು. ಇವರು ತಮ್ಮ ಹೆಸರನ್ನು ‘ಸಾಮಿ’ , ‘ಸಾಮಿ ವೆಂಕಟಾದ್ರಿ’ ‘ಎ.ಎನ್. ಸಾಮಿ ವೆಂಕಟಾದ್ರಿ ಅಯ್ಯರ್’ ಹೀಗೆ ಬೇರೆ ಬೇರೆ ರೀತಿಯಲ್ಲಿ ಬರೆಯುತ್ತಿದ್ದರು. 1898 ಜನವರಿ 13ರಂದು ಮೈಸೂರು ಸಂಸ್ಥಾನದ ಯಳಂದೂರು ತಾಲೂಕಿನ ಅಗರ ಎಂಬ ಗ್ರಾಮದ ನರಸಿಂಹ ಪಂಡಿತ ಮತ್ತು ಗೌರಮ್ಮ ದಂಪತಿಯ ಮೂರು ಮಂದಿ ಮಕ್ಕಳಲ್ಲಿ ಕೊನೆಯವರು.
ಇವರ ಕಾವ್ಯನಾಮ ಸಂಸ ಆಗಿದ್ದು ಒಂದು ವಿಶೇಷ ಸನ್ನಿವೇಶ. ಸಾಹಿತ್ಯ ಕ್ಷೇತ್ರದಲ್ಲಿ ಸಂಸರು ಗುರುತಿಸಿಕೊಂಡದ್ದು 1925ರಲ್ಲಿ ಪ್ರಕಟವಾದ ಇವರ ವಿಗಡ ವಿಕ್ರಮರಾಯ ನಾಟಕದಿಂದ. ‘ಕಂಸ’ ಎಂಬ ಕಾವ್ಯನಾಮದಿಂದ ಈ ನಾಟಕಕ್ಕೆ ಪ್ರಕಟಣೆ ನೀಡಿದರೂ ಮುದ್ರಣ ಮಾಡುವಾಗ ಅದು “ಸಂಸ” ಎಂದು ತಪ್ಪಾಗಿ ಮುದ್ರಣಗೊಂಡರೂ ಮುಂದೆ ಅವರ ಕಾವ್ಯನಾಮವಾಗಿಯೇ ಉಳಿದುಕೊಂಡಿತು.
ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸದೆ ನಿಲ್ಲಿಸಿದ ಸಂಸರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಕರಿಬಸಪ್ಪ ಶಾಸ್ತ್ರಿಗಳ ಗರಡಿಯಲ್ಲಿ ಪಳಗಿ, ಕನ್ನಡ ಪ್ರೌಢ ಗ್ರಂಥಗಳನ್ನು ಓದಿ ‘ವಿಗಡ ವಿಕ್ರಮರಾಯ’ ಎಂಬ ಐತಿಹಾಸಿಕ ನಾಟಕವನ್ನು 1915ರಲ್ಲಿ ತಮ್ಮ 17ನೆಯ ವಯಸ್ಸಿನಲ್ಲಿ ರಚಿಸಿದರು. ಇದರ ಬೆನ್ನಿಗೆ ‘ಕೌಶಲ’ ಎನ್ನುವ ಬಂಗಾಳಿ ಶೈಲಿಯ ಕಾದಂಬರಿ ಇವರ ಲೇಖನಿಂದ ಮೂಡಿಬಂತು. ‘ಶ್ರೀಮಂತೋದ್ಯಾನ ವರ್ಣನಂ’ ಎಂಬುದು ಚಂಪೂ ಕಾವ್ಯ. 1919 ನೇ ಇಸವಿಯಲ್ಲಿ ಬೆಂಗಳೂರಿನ ಎ.ಡಿ.ಎ. ಸಂಸ್ಥೆ ಏರ್ಪಡಿಸಿದ್ದ ಶ್ರೀ ಕಂಠೀರವ ನರಸರಾಜ ಕನ್ನಡಿಗ ನಾಟಕ ರಚನಾ ಸ್ಪರ್ಧೆಯಲ್ಲಿ ಇವರ ಮೊದಲ ನಾಟಕ ‘ಸುಗುಣ ಗಂಭೀರ’ಕ್ಕೆ ಎರಡನೆಯ ಬಹುಮಾನ ಬಂದದ್ದು ಸಂತೋಷದ ಸಂಗತಿಯಾಗಿತ್ತು.
ತಮ್ಮಲ್ಲಿರುವ ಕನ್ನಡದ ಜ್ಞಾನ ಸಂಪತ್ತನ್ನು ಅನೇಕ ವಿದ್ಯಾರ್ಥಿಗಳಿಗೆ ಹಲವು ಕಾಲ ದಾನ ಮಾಡಿದ ಹೃದಯ ಶ್ರೀಮಂತ ಇವರು. ಹಲವಾರು ಶಾಲೆಗಳಲ್ಲಿ ಕನ್ನಡ ಪಂಡಿತರಾಗಿಯೂ ಕೆಲಸ ಮಾಡಿದ ಕನ್ನಡದ ಅಭಿಮಾನಿ. ಬಹಳ ದಿನ ಒಂದೇ ಕಡೆ ನಿಲ್ಲದ ಸಂಸರು ದುಡಿದು ಧನ ಸಂಪಾದಿಸುವುದಾಗಿ ಹೇಳಿ ದೇಶ ವಿದೇಶಗಳಲ್ಲಿ ಸುತ್ತಿ ಬಂದರು. ತಿರುಗಿ ಬಂದ ಮೇಲೆ ಹೋದಲ್ಲಿ ಏನಾಗಿತ್ತು ಎಂಬುದು ಯಾರಿಗೂ ತಿಳಿದಿರಲಿಲ್ಲ . ಸಂಸರು ಮಾನಸಿಕ ಪೀಡನೆಯ ಭ್ರಮೆಗೆ ಒಳಗಾಗಿ ಒಂಟಿಯಾಗಿ ಉಳಿದು, ಯಾರ ಮಾತಿಗೂ ಸ್ಪಂದಿಸದೆ, ತಮ್ಮ ಜೀವನದ ಕೊನೆಯ ಕಾಲದಲ್ಲಿ ಮೈಸೂರಿನ ಸದ್ವಿದ್ಯಾ ಶಾಲೆಯ ಒಂದು ಸಣ್ಣ ಕೊಠಡಿಯಲ್ಲಿ ವಾಸವಾಗಿದ್ದರು. ವಿವಾಹವಾಗದೆ ಏಕಾಂತ ಜೀವನ ನಡೆಸುತ್ತಿದ್ದ ಇವರು 14 ಫೆಬ್ರವರಿ 1939 ರಂದು ವಿಷ ಸೇವಿಸಿ ತಮ್ಮ 41ನೇ ವಯಸ್ಸಿನಲ್ಲಿ ಇಹದ ಬಂಧನವನ್ನು ಕಳಚಿಕೊಂಡರು.
ಸಂಸರ ಅಮೋಘ ಜ್ಞಾನ ಭಂಡಾರದಿಂದ ಹೊರಬಂದ ಅನರ್ಘ್ಯ ಕೃತಿಗಳು ಹಲವು ‘ಈಶಪ್ರಕೋಪನ’, ‘ಸಂಸಪದಮ್’, ‘ಶ್ರೀಮಂತೋದ್ಯಾನ ವರ್ಣನಂ’, ‘ನರಕ ದುರ್ಯೋಧನನೀಯಮ್’ ಇವುಗಳು ಸಂಸರ ಕಾವ್ಯಗಳಾದರೆ ‘ಬೆಟ್ಟದರಸು’, ‘ಮಂತ್ರಶಕ್ತಿ’ ಮತ್ತು ‘ವಿಜಯನಾರಸಿಂಹ’ ಎಂಬ ಮೂರು ನಾಟಕಗಳ ಹಸ್ತ ಪ್ರತಿಗಳು ಮುದ್ರಣ ಕಾಣದೆ ಉಳಿದವುಗಳು. ಸುಮಾರು 23ಕ್ಕೂ ಹೆಚ್ಚು ನಾಟಕಗಳ ರಚನೆ ಮಾಡಿದ್ದರೂ ಲಭ್ಯವಿರುವುದು ಆರು ಮಾತ್ರ. ‘ಕೌಶಲ’ ಮತ್ತು ‘ಶರ್ಲಾಕ್ ಹೋಂಸ್ ಇನ್ ಜೈಲ್’ ಇವೆರಡು ಕಾದಂಬರಿಗಳು. ‘ಬಿರುದಂತೆಂಬರ ಗಂಡ’ ಎಂಬ ಐತಿಹಾಸಿಕ ಏಕಾಂಕ ನಾಟಕ ‘ಕಥಾಂಜಲಿ’ ಎಂಬ ಮಾಸಪತ್ರಿಕೆಯ ಮೊದಲನೇ ಸಂಚಿಕೆಯಲ್ಲಿ ಮುದ್ರಣವಾಗಿತ್ತು.
ಕನ್ನಡ ಸಾಹಿತ್ಯದ ಮೊದಲ ಐತಿಹಾಸಿಕ ನಾಟಕಕಾರ ಎಂದು ಹೆಸರಾದ ಸಂಸರ ಪ್ರೌಢ ನಾಟಕಗಳ ರಚನೆಗಾಗಿ ‘ಕನ್ನಡ ನಾಟಕದ ಶೇಕ್ಸ್ ಪಿಯರ್’ ಎಂದು ಗೌರವದಿಂದ ಕರೆಯುತ್ತಿದ್ದರು. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಒಂದು ಬಯಲು ರಂಗ ಮಂದಿರಕ್ಕೆ ‘ಸಂಸ’ ಎಂಬ ಹೆಸರಿಟ್ಟಿರುವುದು ಅವರು ನಾಟಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ದ್ಯೋತಕವಾಗಿದೆ.
– ಅಕ್ಷರೀ