ಮಿಜಾರು : ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು (ಎಐಇಟಿ) ಹಾಗೂ ಆಳ್ವಾಸ್ ಕಾಲೇಜು ಸಂಸ್ಕೃತ ವಿಭಾಗ, ಸಂಸ್ಕೃತ ಸಂಘ ಹಾಗೂ ಪ್ರಜ್ಞಾ ಜಿಜ್ಞಾಸಾವೇದಿಃ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಂಸ್ಕೃತ ಚಿಂತನಂ’ ಕಾರ್ಯಕ್ರಮವು ದಿನಾಂಕ : 24-06-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಾಹಿತಿ, ನಿವೃತ್ತ ಪ್ರಾಚಾರ್ಯ, ಬೆಂಗಳೂರಿನ ಎಸ್. ವ್ಯಾಸ ಇದರ ನಿವೃತ್ತ ಡೀನ್ ಪ್ರೊ. ಗೋಪಾಲಕೃಷ್ಣ ಎನ್. ಭಟ್ ಇವರು “ನಮ್ಮನ್ನು ನಾವು ಮೊದಲು ಅರಿತುಕೊಳ್ಳಬೇಕು. ಜ್ಞಾನಾಭಿವೃದ್ಧಿಗೆ ಸ್ವಯಂ ಅನಾವರಣ ಮಾಡಬೇಕು. ದೇಹ, ಇಂದ್ರೀಯ, ಮನಸ್ಸು ಸೇರಿ ವ್ಯಕ್ತಿ ಸಂಪೂರ್ಣವಾಗುತ್ತಾನೆ. ಬಾಹ್ಯ ಪ್ರಪಂಚದ ಕಡೆಗೆ ಗಮನ ಹರಿಸುವ ಬದಲು, ನಮ್ಮ ಆತ್ಮದ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮನ್ನು ನಾವು ಅರಿತಾಗ ಮಾತ್ರ ಹೊರ ಜಗತ್ತಿನಲ್ಲಿ ಬದಲಾವಣೆ ತರಲು ಸಾಧ್ಯ. ಓಂ ಉಚ್ಛಾರ, ಧ್ಯಾನ ಹಾಗೂ ಯೋಗದಿಂದ ಹಲವು ರೋಗ ಮುಕ್ತಿ ಸಾಧ್ಯ. ಪುರಾತನ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು” ಎಂದು ಹೇಳಿದರು.
ಪಶ್ಚಿಮ ಬಂಗಾಳದ ಬೇಲೂರು ರಾಮಕೃಷ್ಣ ಮಿಷನ್ ವಿವೇಕಾನಂದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆ ಮುಖ್ಯಸ್ಥರಾದ ಜಪಸಿದ್ಧಾನಂದ ಸ್ವಾಮೀಜಿ ಶಿಖರೋಪನ್ಯಾಸ ನೀಡಿದರು.
ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ವಿನಾಯಕ ಭಟ್ ಗಾಳಿಮನೆ ಸ್ವಾಗತಿಸಿ, ಅನಘಾ, ಚೈತ್ರಾ, ಸುನ್ನಿಧಿ ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿನಿ ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಿಂಧು ಭಟ್ ನಿರೂಪಿಸಿ, ಸಿವಿಲ್ ವಿಭಾಗದ ಉಪನ್ಯಾಸಕ ಡಾ. ರಮೇಶ್ ರಾವ್ ವಂದಿಸಿದರು.