ಬೆಂಗಳೂರು : ‘ಡಾ. ಸಿ.ಸೋಮಶೇಖರ – ಶ್ರೀಮತಿ ಎನ್.ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನ’ ವತಿಯಿಂದ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಡಾ. ಹೀ.ಚಿ. ಬೋರಲಿಂಗಯ್ಯ, ದಾಸ ಸಾಹಿತ್ಯಕ್ಕೆ ಪ್ರೊ. ಎ.ವಿ. ನಾವಡ ಹಾಗೂ ಸಂಗೀತ ಕ್ಷೇತ್ರದ ಸಾಧನೆಗೆ ಪಂಡಿತ್ ಡಾ. ನರಸಿಂಹಲು ವಡವಾಟಿ ಅವರಿಗೆ ‘ಸಂಸ್ಕೃತಿ ಸಂಗಮ-2023’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ದಿನಾಂಕ 21-10-2023ರಂದು ನಡೆಯಿತು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ. ಹಂಪಾ ನಾಗರಾಜಯ್ಯ ಇವರು ‘ಸಂಸ್ಕೃತಿ ಸಂಗಮ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ “ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸ್ವೀಕರಿಸಿ ಆಯ್ಕೆ ಮಾಡುವ ಬದಲು, ಅರ್ಹ ಸಾಧಕರನ್ನು ತಜ್ಞರ ಸಮಿತಿಯ ಮೂಲಕ ಆಯ್ಕೆ ಮಾಡುವುದು ಸೂಕ್ತ. ‘ರಾಜ್ಯೋತ್ಸವ ಪ್ರಶಸ್ತಿ’ಗೆ ಆನ್ ಲೈನ್ ಮೂಲಕ ಅರ್ಜಿ ಕರೆದ ಕಾರಣ 2,500 ಅರ್ಜಿ ಬಂದಿವೆ. ಇದರಿಂದ ನಾನು ಸಂಕಟದಲ್ಲಿ ಸಿಕ್ಕಿ ಬಿದ್ದಿದ್ದೇನೆ. ಸಾಧನೆ, ಜಿಲ್ಲೆ, ಜಾತಿ ನೋಡಿಕೊಂಡು ಯಾರನ್ನು ಆಯ್ಕೆ ಮಾಡಬೇಕು ಎಂದು ತಿಳಿಯುತ್ತಿಲ್ಲ. ವೈಯಕ್ತಿಕ ಅಭಿಪ್ರಾಯದಲ್ಲಿ ಅರ್ಜಿ ಹಾಕುವ ಪದ್ಧತಿಯನ್ನೇ ನಿಲ್ಲಿಸಬೇಕು. ಸಮಿತಿ ಮೂಲಕ ಅರ್ಹ ಸಾಧಕರನ್ನು ಆಯ್ಕೆ ಮಾಡಬೇಕು. ಈ ಮೊದಲು ಪ್ರಶಸ್ತಿಗಳ ಸಂಖ್ಯೆ 200-300 ಆಗುತ್ತಿತ್ತು. ಈಗ ಕಳೆದಿರುವ ವರ್ಷಗಳ ಆಧಾರದ ಮೇಲೆ ಸಂಖ್ಯೆ ನಿಗದಿ ಪಡಿಸಲಾಗುತ್ತದೆ. ಯಾವುದೇ ಪ್ರಶಸ್ತಿಗೆ ಗೌರವ ಇರಬೇಕು. ಒತ್ತಡ ಇಲ್ಲದೇ ಸಾಧನೆ ಆಧಾರದ ಮೇಲೆ ಗೌರವಿಸಬೇಕು. ಅಧಿಕಾರ, ಅಂತಸ್ತಿಗಾಗಿ ಮನುಷ್ಯ ಎಷ್ಟೇ ಒದ್ದಾಟ, ಹೋರಾಟ ಮಾಡಿದರೂ ಅಂತಿಮವಾಗಿ ನೆಮ್ಮದಿ ಬೇಕು ಎನ್ನುತ್ತಾನೆ. ಸಾಹಿತ್ಯ, ಸಂಗೀತ, ಕಲೆ, ಜಾನಪದ, ಪುಸ್ತಕಗಳು ಮನುಷ್ಯನಿಗೆ ನೆಮ್ಮದಿ ಕೊಡುತ್ತವೆ. ಮನುಕುಲಕ್ಕೆ ನೆಮ್ಮದಿ ಕೊಡುವ ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಉತ್ತಮ ಕೆಲಸವನ್ನು ಸೋಮಶೇಖರ್ ದಂಪತಿ ಮಾಡುತ್ತಿರುವುದು ಅಭಿನಂದನಾರ್ಹರು” ಎಂದು ಹೇಳಿದರು.
ಸಾನಿಧ್ಯ ವಹಿಸಿ ಮಾತನಾಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, “ಸಾಧಕರನ್ನು ಪ್ರಶಸ್ತಿಗಳು ಅರಸಿಕೊಂಡು ಹೋಗಬೇಕು ಎಂಬುದು ಪ್ರಾಚೀನ ಮಾತು. ಈಗ ಬಹಳಷ್ಟು ಜನ ರಾಜ್ಯೋತ್ಸವ ಪ್ರಶಸ್ತಿಗೆ ಬಯೋಡೇಟಾ ಕೊಟ್ಟು ಅಪೇಕ್ಷೆ ಮಾಡುತ್ತಿದ್ದಾರೆ. ಪ್ರಶಸ್ತಿಯಿಂದಲೇ ಮನುಷ್ಯ ದೊಡ್ಡವನಾಗುವುದಿಲ್ಲ” ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ್ ವಿ. ಪಾಟೀಲ್ ಮಾತನಾಡಿ, “ಸಾಧನೆ ಎಂದರೆ ಏಕಾಗ್ರತೆ ಹಾಗೂ ತಪಸ್ಸು. ಹೀಗಿರುವಾಗ ಮಾತು ಸಾಧನೆಯಾಗಬಾರದು. ನಮ್ಮ ಸಾಧನೆಯ ಬಗ್ಗೆ ಜನರು ಮಾತನಾಡುವಂತಾಗಬೇಕು. ಸಮಾಜದಲ್ಲಿಂದು ಪ್ರಶಸ್ತಿ ಪಡೆದುಕೊಳ್ಳುವವರನ್ನು ಮತ್ತು ಪ್ರಶಸ್ತಿ ಹೊಡೆದುಕೊಳ್ಳುವವರನ್ನು ಕಾಣುತ್ತಿದ್ದೇವೆ. ಅರ್ಹರಿಗೆ ಪ್ರಶಸ್ತಿ ಪುರಸ್ಕಾರಗಳು ಸಿಗಬೇಕು. ಇದು ಇನ್ನಷ್ಟು ಜನರಿಗೆ ಪ್ರೇರಣೆಯಾಗುತ್ತದೆ. ಸಂಧ್ಯಾ ಕಾಲದಲ್ಲಿ ಗೌರವಯುತ ಜೀವನ ನಡೆಸಲೂ ಕಷ್ಟಪಡುವ ಸಾಹಿತಿಗಳಿಗೆ ನೆರವು ನೀಡುವ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು” ಎಂದರು. ಪ್ರತಿಷ್ಠಾನದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಮತ್ತು ಎನ್. ಸರ್ವಮಂಗಳ ಉಪಸ್ಥಿತರಿದ್ದರು.