ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ವೈಭವಕ್ಕೆ ದಿನಾಂಕ 18-11-2023ರಂದು ಪುತ್ತೂರಿನ ನಾಟ್ಯರಂಗದ ನೃತ್ಯಗುರು ಮತ್ತು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡುತ್ತಾ “ಕಲೆಯನ್ನು ನಮ್ಮ ಬದುಕಿನ ಭಾಗವಾಗಿ ಇರಿಸಿಕೊಳ್ಳುವುದು ಅತ್ಯಗತ್ಯ. ಕಲೆಯು ಜೀವನಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೋಧಿಸುತ್ತದೆ. ಕೇವಲ ನೃತ್ಯ ಸಂಗೀತ ಮಾತ್ರ ಕಲೆಯಲ್ಲ ಬದಲಾಗಿ ಬದುಕುವುದು ಕೂಡಾ ಒಂದು ವಿಶಿಷ್ಠವಾದ ಕಲೆ. ಸಾಂಸ್ಕೃತಿಕವಾಗಿ ತೊಡಗಿಸಿಕೊಂಡರೆ ನಮಗೆ ಬದುಕುವ ಕಲೆ ಕರಗತವಾಗುತ್ತದೆ. ಎಳವೆಯಲ್ಲಿಯೇ ಕಲೆಯನ್ನು ಬೆಳೆಸಿಕೊಂಡರೆ ಶಿಸ್ತುಬದ್ದ ಜೀವನ ನಡೆಸಲು ಪೂರಕವಾಗುತ್ತದೆ. ಕಲೆಯು ಆತ್ಮವಿಶ್ವಾಸ ಮತ್ತು ಶಿಸ್ತಿನಿಂದ ಕೂಡಿದ ಅತ್ಯುತ್ತಮ ಜೀವನ ನಡೆಸಲು ಪ್ರೇರಣೆ ನೀಡುತ್ತದೆ. ನಮ್ಮೊಳಗೆ ಆಂತರಿಕ ಸೌಂದರ್ಯದ ವೃದ್ಧಿಗೆ ಕಲೆ ಪ್ರೇರಕವಾಗುತ್ತದೆ. ಜೀವನಾನಂದ ಪಡೆಯಲು ಕಲೆ ಮತ್ತು ಸಂಸ್ಕೃತಿಯು ಅಗತ್ಯವಾಗುತ್ತದೆ. ಕಲೆಯು ನೈಜ ಸತ್ಯವಾಗಿದೆ ಮತ್ತು ಸರ್ವರ ಮನಸಿಗೆ ಆನಂದವನ್ನು ನೀಡುತ್ತದೆ. ಕಲಾವಿದರು ತಮ್ಮೊಳಗಿನ ನೋವು ದುಃಖವನ್ನು ಮರೆಮಾಚಿಕೊಂಡು ಇತರರಿಗೆ ಸಂತಸವನ್ನು ನೀಡುವ ಶ್ರೇಷ್ಠ ಕಾಯಕವನ್ನು ಮಾಡುತ್ತಾರೆ. ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆಯ ಅವಧಿಯಲ್ಲಿ ಶೈಕ್ಷಣಿಕತೆಯೊಂದಿಗೆ ಕಲೆಯತ್ತ ಕೂಡಾ ಗಮನ ಹರಿಸಿ ಅದಕ್ಕೆ ಕೂಡಾ ಪ್ರಾಶಸ್ತ್ಯ ನೀಡಬೇಕಾಗಿರುವುದು ಅನಿವಾರ್ಯವಾಗಿದೆ. ನನ್ನದೇ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವುದು ಭಾವನಾತ್ಮಕ ವಿಚಾರ. ಕಲಾವಿದತ್ವಕ್ಕೆ ಇಂಬು ನೀಡಿ, ನನಗೆ ಬುನಾದಿ ನೀಡಿರುವುದು ನನ್ನ ವಿದ್ಯಾ ಸಂಸ್ಥೆ ಅನ್ನುವ ಹೆಮ್ಮೆ ನನಗಿದೆ. ಗ್ರಾಮೀಣ ಭಾಗದ ಈ ವಿದ್ಯಾ ಸಂಸ್ಥೆ ನಮಗೆ ಬದುಕುವ ಕಲೆಯನ್ನು ಕಲಿಸಿದೆ ಅನ್ನುವುದಕ್ಕೆ ಅನೇಕ ನೈಜ ಉದಾಹರಣೆಯಿದೆ. ನಮ್ಮ ಮನೆಯಲ್ಲಿ ಯಾರೂ ಕಲಾವಿದರಿಲ್ಲ. ಆದರೆ ನಾನು ಕಲಾವಿದೆಯಾಗಿ ರೂಪುಗೊಳ್ಳಲು ಕುಕ್ಕೆಯ ಪುಣ್ಯದ ಮಣ್ಣು ಹಾಗೂ ಕಾಲೇಜಿನ ವಾತಾವರಣ ಹಾಗೂ ಊರವರ ಪ್ರೋತ್ಸಾಹವೇ ಬುನಾದಿ. ನನ್ನ ಹೆಸರಿನ ಮುಂದೆ ಈಗಲೂ ಸುಬ್ರಹ್ಮಣ್ಯ ಇದೆ. ಇದು ನನ್ನ ಹುಟ್ಟೂರಿನ ಹೆಸರು. ನಾನು ಕಾರ್ಯಕ್ರಮ ನೀಡಿದ ಎಲ್ಲಾ ಕಡೆಯಲ್ಲೂ ಸುಬ್ರಹ್ಮಣ್ಯ ಎಂದರೆ ಏನು ಎಂದು ಕೇಳುವಾಗ ಅದು ನನ್ನ ಊರು ಎಂದು ಹೆಮ್ಮೆಯಿಂದ ಹೇಳುತ್ತೇನೆ. ಯಾಕೆಂದರೆ ಕಲಾವಿದೆಯಾಗಿ ಬೆಳಗಲು ಈ ಊರೇ ಕಾರಣ” ಎಂದು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಭಾವನಾತ್ಮಕವಾಗಿ ನುಡಿದರು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘದ ಸಂಚಾಲಕ ಜಯಪ್ರಕಾಶ್ ಆರ್., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಮಾವಿನಕಟ್ಟೆ, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿನೇಶ್ ಶಿರಾಡಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಕ್ಷಯ್ ಕಂದಡ್ಕ, ಉಪಾಧ್ಯಕ್ಷೆ ಪ್ರೀಕ್ಷಾ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ವಿದ್ಯಾಲಕ್ಷ್ಮೀ, ಕ್ರೀಡಾಕಾರ್ಯದರ್ಶಿ ಅಜಿತ್ ಜೋಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಗಗನ್ ಸ್ವಾಗತಿಸಿ, ಅನನ್ಯಾ ಭಟ್ ಪರಿಚಯಿಸಿ, ಚಿನ್ಮಯ್ ವಂದಿಸಿ ಹಾಗೂ ಮೋಕ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.