ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಸಂಸ್ಕೃತೋತ್ಸವವನ್ನು ದಿನಾಂಕ 14-09-2023ರಂದು ಕದ್ರಿಯ ಜ್ಯೋತಿಷ ವಿದ್ವಾನ್ ಶ್ರೀರಂಗ ಐತಾಳ ಇವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ “ವಿದ್ಯಾರ್ಜನೆಯು ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಬೌದ್ಧಿಕ ವಿಕಾಸವಾಗಬೇಕು. ಅಧ್ಯಯನದ ಜತೆ ಭಾಷಾಭಿಮಾನ, ದೇಶಾಭಿಮಾನ ಹಾಗೂ ಸ್ವಾಭಿಮಾನವನ್ನು ಬೆಳೆಸಿಕೊಂಡಾಗ ಸಂಸ್ಕೃತ ಭಾಷೆಯ ಆಗಾಧತೆ ಅರಿವಾಗುತ್ತದೆ. ಹಾಗಾಗಿ ಭಾರತೀಯರ ಪ್ರಾಣಸದೃಶವಾದ ಸಂಸ್ಕೃತ ಭಾಷೆಯನ್ನು ಉಳಿಸಿಬೆಳೆಸುವಲ್ಲಿ ವಿದ್ಯಾರ್ಥಿಗಳು ಶ್ರದ್ಧಾವಂತರಾಗಬೇಕು” ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅವರು, “ವಿದ್ಯಾರ್ಥಿಗಳು ಬಾಲ್ಯದಲ್ಲಿ ಭಾಷೆಯನ್ನು ಶ್ರದ್ಧೆಯಿಂದ ಕಲಿತಾಗ ಅದರಲ್ಲಿ ಪ್ರೌಢಿಮೆ ಸಿದ್ಧಿಸುತ್ತದೆ. ಸಂಸ್ಕೃತ ವ್ಯವಹಾರ ಭಾಷೆಯಾಗಿ ಮೂಡಿಬರಬೇಕಾದರೆ ನಮ್ಮ ಇಚ್ಚಾಶಕ್ತಿ ಬಹಳ ಮುಖ್ಯ. ಈ ಭಾಷೆಯ ಮೂಲಕ ವೈದಿಕ ಸಾಹಿತ್ಯ, ರಾಮಾಯಣ ಮಹಾಭಾರತಾದಿ ಮಹಾಕಾವ್ಯಗಳ ರಸಾಸ್ವಾದ ಮಾಡಲು ಸಾಧ್ಯ” ಎಂದರು.
ಶಾರದಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಪ್ರದೀಪ ಕುಮಾರ ಕಲ್ಕೂರ “ಭಾರತೀಯ ಋಷಿಗಳು ಇಂದಿನ ವಿಜ್ಞಾನಿಗಳಿಗಿಂತ ಮೊದಲೇ ವೈಜ್ಞಾನಿಕ ವಿಷಯಗಳನ್ನು ತಿಳಿದವರಾಗಿದ್ದರು. ಖಗೋಳ ಶಾಸ್ತ್ರ, ಗಣಿತ ಶಾಸ್ತ್ರ, ಆಯುರ್ವೇದ ಶಾಸ್ತ್ರಕ್ಕೆ ಸಂಬಂಧಪಟ್ಟ ಗ್ರಂಥಗಳು ಸಂಸ್ಕೃತದಲ್ಲಿಯೇ ರಚಿಸಲ್ಪಟ್ಟಿರುವುದು ಇದಕ್ಕೆ ಸಾಕ್ಷಿ” ಎಂದರು.
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಶ್ರೀ ಸುಧಾಕರ ರಾವ್ ಪೇಜಾವರ, ಕಾಲೇಜಿನ ಪ್ರಾಚಾರ್ಯ ಶ್ರೀ ಮಹಾಬಲೇಶ್ವರ ಭಟ್ ಸೊಡಂಕೂರು, ಉಪಪ್ರಾಚಾರ್ಯ ಶ್ರೀ ಪ್ರಕಾಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀ ರಮೇಶ ಆಚಾರ್ಯ ನಾರಳ ಪ್ರಸ್ತಾವಿಸಿದರು. ಸಂಸ್ಕೃತ ವಿದ್ಯಾರ್ಥಿಗಳಿಂದ ವೇದ ಪಠಣ, ಸಂಸ್ಕೃತ ಪ್ರಹಸನ, ಸಂಸ್ಕೃತ ಗೀತಗಾಯನ ಹಾಗೂ ಸಂಸ್ಕೃತ ಭಾಷಣ ಸಮೂಹ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ವಿದ್ಯಾರ್ಥಿನಿ ನಿಹಿರಾ ಸ್ವಾಗತಿಸಿ, ದಿಲೀಪ್ ಶಾಸ್ತ್ರಿ ವಂದಿಸಿದರು. ಕೃಷ್ಣಪ್ರಿಯಾ, ಧನ್ಯಶ್ರೀ, ತನ್ವಿ ಪ್ರಭು ಕಾರ್ಯಕ್ರಮ ನಿರೂಪಿಸಿದರು.