ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಪ್ರತಿವರ್ಷ ನಡೆಸುವ ‘ಸಂಸ್ಕೃತಿ ಉತ್ಸವ 2026’ವನ್ನು ದಿನಾಂಕ 24, 25 ಮತ್ತು 26 ಜನವರಿ 2026ರಂದು ಸಂಜೆ ಗಂಟೆ 5-15ಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದ ಐ.ವೈ.ಸಿ. ಹವಾ ನಿಯಂತ್ರಿತ ಸಭಾಂಗಣದಲ್ಲಿ ನಡೆಯಲಿದೆ.

ದಿನಾಂಕ 24 ಜನವರಿ 2026ರಂದು ನಡೆಯುವ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಇವರು ವಹಿಸಲಿದ್ದು, ಡಾ. ಶಿವರಾಂ ಕಾರಂತ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ. ಗಣನಾಥ ಎಕ್ಕಾರು ಇವರು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗ ನಿರ್ದೇಶಕರಾದ ಎಸ್.ಎನ್. ಸೇತುರಾಂ ಇವರಿಗೆ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ.) ಹೆಬ್ರಿ ಪ್ರಾಯೋಜಿತ ‘ಶಾರದಾ ಕೃಷ್ಣ ಪುರಸ್ಕಾರ -2026’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಎಸ್.ಎನ್. ಸೇತುರಾಂ ಇವರ ರಚನೆ ಮತ್ತು ನಿರ್ದೇಶನದಲ್ಲಿ ಅನನ್ಯ ನಾಟಕ ತಂಡ ಅಭಿನಯಿಸುವ ‘ತಳಿ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 25 ಜನವರಿ 2026ರಂದು ಸಾಹಿತಿ, ಕಿರುತೆರೆ ನಿರ್ದೇಶಕರಾದ ಟಿ.ಎನ್. ಸೀತಾರಾಂ ಇವರಿಗೆ ಪಂಚಮಿ ಟ್ರಸ್ಟ್ (ರಿ.) ಉಡುಪಿ ಪ್ರಾಯೋಜಿತ ‘ಪಂಚಮಿ ಪುರಸ್ಕಾರ 2026’ ಪ್ರದಾನ ಮಾಡಲಾಗುವುದು. ಹಿರಿಯ ವಿದ್ವಾಂಸರಾದ ನಾಡೋಜ ಪ್ರೊ. ಕೆ.ಪಿ. ರಾವ್ ಇವರು ಸಭಾಧ್ಯಕ್ಷತೆಯನ್ನು ವಹಿಸಲಿರುವರು. ಶ್ರೀಕಾಂತ್ ಎನ್.ವಿ. ನಿರ್ದೇಶನದಲ್ಲಿ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರು ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ನಾಟಕವನ್ನು ಪ್ರಸ್ತುತ ಪಡಿಸಲಿರುವರು.
ದಿನಾಂಕ 26 ಜನವರಿ 2026ರಂದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್ ಇವರು ವಹಿಸಲಿದ್ದು, ಶಿಕ್ಷಣ ತಜ್ಞರಾದ ಅಶೋಕ್ ಕಾಮತ್ ಇವರಿಗೆ ಶ್ರೀಮತಿ ಪ್ರಭಾವತಿ ಶೆಣೈ ಮತ್ತು ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವ ಪ್ರಭಾ ಪುರಸ್ಕಾರ 2026’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಬಿ.ಆರ್. ವೆಂಕಟರಮಣ ಐತಾಳ ಇವರ ನಿರ್ದೇಶನದಲ್ಲಿ ಯಕ್ಷ ರಂಗಾಯಣ ರೆಪರ್ಟರಿ ಕಲಾವಿದರು ‘ಮಹಾತ್ಮಾರ ಬರವಿಗಾಗಿ’ ನಾಟಕ ಪ್ರದರ್ಶನ ನೀಡಲಿದ್ದಾರೆ.



