ಮಂಗಳೂರು : ಸಂಸ್ಕೃತ ಭಾರತೀ ಮಂಗಳೂರು ಆಯೋಜಿಸಿದ ‘ಸಂಸ್ಕೃತ ಮಹೋದಧಿಃ’ ಜನಪದ ಸಮ್ಮೇಳನವು ದಿನಾಂಕ 07-04-2024ರ ರವಿವಾರದಂದು ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೈಸ್ಕೂಲಿನ ಶ್ರೀ ಸುಧೀಂದ್ರ ಸಭಾಭವನದಲ್ಲಿ ನಡೆಯಿತು.
ಸಮ್ಮೇಳನವನ್ನು ಉದ್ಘಾಟಿಸಿದ ಸಂಸ್ಕೃತ ಭಾರತೀ ಇದರ ಅ. ಭಾ. ಸಹ ಪ್ರಶಿಕ್ಷಣ ಪ್ರಮುಖ ಡಾ. ಸಚಿನ್ ಕಠಾಳೆ ಮಾತನಾಡಿ “ಸಂಸ್ಕೃತವನ್ನು ಏಕೆ ಓದಬೇಕು? ಎಂದು ಎಲ್ಲರೂ ಪ್ರಶ್ನಿಸುತ್ತಾರೆ. ಆದರೆ ಭಾರತದಲ್ಲಿ ಸಂಸ್ಕೃತವನ್ನು ಏಕೆ ಓದಬೇಕು ಎಂಬ ಪ್ರಶ್ನೆಯೇ ಬರುವುದಿಲ್ಲ. ಇಂದಿನ ಕಾಲದಲ್ಲಿ ಬ್ರಿಟಿಷರ ಕಾರಣದಿಂದ ಸಂಸ್ಕೃತ ಕೇವಲ ಸಿಲೆಬಸ್ ವಿಷಯವಾಗಿದೆ. ಅದು ಅಧ್ಯನದ ವಿಷಯವಾಗಿ ಉಳಿದಿಲ್ಲ. ಉದಾಹರಣೆಗೆ ಕ್ರೀಡೆ ಅಧ್ಯಯನದ ವಿಷಯವಲ್ಲ. ಅದು ಸ್ವಾಭಾವಿಕ ವಿಷಯ. ಕ್ರೀಡೆ ಎಲ್ಲರಿಗೂ ಬೇಕಾದ ವಿಷಯವಾಗಿದೆ. ಯಾವಾಗ ಕ್ರೀಡೆ ಮತ್ತು ಸಂಗೀತಗಳಿಗೆ ಶಿಕ್ಷಕರ ತರಬೇತಿ ಆರಂಭವಾಯಿತೋ ಆ ದಿನದಿಂದಲೇ ಅವುಗಳು ಪಠ್ಯವಿಷಯವಾಗಿ ಅದರ ಮೌಲ್ಯವನ್ನು ಕಳೆದುಕೊಳ್ಳುತ್ತಾ ಬಂದಿದೆ. ಇದೇ ರೀತಿ ಜ್ಞಾನ ಸಿದ್ಧಿಗಾಗಿ ಸಂಸ್ಕೃತವನ್ನು ಓದಬೇಕು. ಸಂಸ್ಕೃತದಲ್ಲಿ ಏನಿದೆ? ಎಂದು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರಿಸುವ ಸಾಮರ್ಥ್ಯ ನನ್ನಲಿಲ್ಲ. ಏಕೆಂದರೆ ಎಲ್ಲವೂ ಇದೆ. ಭಾರತೀಯರಿಂದ ರಚಿತವಾದ ಸಾಫ್ಟವೇರ್ ಗಳಿಗೆ ಹಾರ್ಡವೆರ್ ಅಗತ್ಯವಿಲ್ಲ. ಪಾಣಿನಿಯ ಅಷ್ಟಾಧ್ಯಾಯೀ, ಪಂತಜಲಿಯ ಯೋಗಸೂತ್ರ, ಭಾಸ್ಕರಾಚಾರ್ಯರ ಲೀಲಾವತಿ ಇತ್ಯಾದಿ ಗ್ರಂಥಗಳು ಅದ್ಭುತವಾದ ಸಾಫ್ಟವೇರ್ ಇವುಗಳನ್ನು ಉಪಯೋಗಿಸಲು ಸಂಸ್ಕೃತ ಭಾಷೆ ಮತ್ತು ನಮ್ಮ ಬುದ್ಧಿಶಕ್ತಿ ಇದ್ದರೆ ಸಾಕು. ಆದ್ದರಿಂದ ನಮ್ಮ ಬುದ್ಧಿಯನ್ನು ಚುರುಕುಗೊಳಿಸಲು ಸಂಸ್ಕೃತ ಅತ್ಯಂತ ಅಶ್ಯಕವಾಗಿದೆ. ಐ. ಐ. ಟಿ. ಕಾನಪುರದ ಒಬ್ಬ ವಿದ್ಯಾರ್ಥಿ ತಾನು ಕಳೆದುಕೊಂಡ ನೆನಪಿನ ಶಕ್ತಿಯನ್ನು ಭಗವದ್ಗೀತೆಯ ಅಧ್ಯಯನದಿಂದ ಪಡೆದುಕೊಂಡ. ಮಹೇಶ್ ಯೋಗಿ ಅವರು ಹೇಳುತ್ತಾರೆ, ಸಂಸ್ಕೃತ ಭಾಷೆಯ ಸಂಭಾಷಣೆಯಿಂದ ಮನಸ್ಸಿನ ಸ್ಥಿತಿ ಅತ್ಯಂತ ಶುದ್ಧವಾಗುತ್ತದೆ. ಸಂಸ್ಕೃತ ಉಚ್ಛಾರಣೆಯಿಂದ ಮಾತಿನ ಸ್ಪಷ್ಟತೆ ಸಿದ್ಧಿಸುತ್ತದೆ. ಸಂಸ್ಕೃತ ಭಾಷೆಯಲ್ಲಿ ಪ್ರತಿ ಅಕ್ಷರದ ಉಚ್ಛಾರಣೆಯ ಕ್ರಮವನ್ನು ತಿಳಿಸಿದ್ದಾರೆ. ಅರವತ್ನಾಲ್ಕು ವಿದ್ಯೆಗಳನ್ನು ತಿಳಿಸಿದ್ದಾರೆ. ಭಾರತೀಯರು ಅನೇಕ ಕಲೆಗಳಲ್ಲಿ ನಿಷ್ಣಾತರಾಗಿದ್ದರು. ಇದನ್ನೆಲ್ಲ ನೋಡಿದರೆ ಸಂಸ್ಕೃತ ಅತ್ಯಂತ ವಿಶಿಷ್ಟ ಭಾಷೆ ಎಂಬುದರಲ್ಲಿ ಸಂಶಯವೇ ಇಲ್ಲ. ಭಾರತದಲ್ಲಿ ಯಾವುದೆಲ್ಲ ಉತ್ತಮವಾದುದು ಇದೆಯೋ ಅದನ್ನು ರಕ್ಷಿಸಬೇಕು, ಯಾವುದು ಕೆಟ್ಟದು ಇದೆಯೋ ಅದನ್ನೆಲ್ಲವನ್ನು ಬಿಡಬೇಕು. ಜೀವನಪರ್ಯಂತ ಸಂಸ್ಕೃತಕ್ಕಾಗಿ ಜೀವನ ಮಾಡೋಣ.” ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಮಂಗಳೂರು ಇದರ ಅಧ್ಯಕ್ಷರಾದ ಜಿ. ಬಿ. ಹರಿಶ್ ರೈ ಮಾತನಾಡಿ “ಈ ಸಂಸ್ಕೃತದ ವೇದಿಕೆಯಲ್ಲಿ ನಾನು ಭಾಗವಹಿಸಲು ನಮ್ಮ ಗುರುಗಳಾದ ಶಂಕರನಾರಾಯಣ ಉಡುಪ ಹಾಗೂ ಹಿರಿಯ ಪ್ರಚಾರಕರಾದ ವೆಂಕಟರಮಣ ಭಟ್ಟರು ನೀಡಿದ ಸಂಸ್ಕಾರವೇ ಕಾರಣ. ಅವರ ಕಾರಣದಿಂದ ಈ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಂಸ್ಕೃತ ಭಾಷೆ ನಮ್ಮ ಸಮಾಜದಲ್ಲಿ ಈಗಾಗಲೇ ಹಾಸುಹೊಕ್ಕಾಗಿದೆ. ಭಾಷೆಗೆ ಅದ್ಭುತವಾದ ಶಕ್ತಿ ಇದೆ. ಭಾಷೆ ನಶಿಸಿ ಹೋದರೆ ನಮ್ಮ ಸಂಸ್ಕೃತಿಯೇ ನಾಶವಾಗುತ್ತದೆ. ಸಂಸ್ಕೃತಿ ರಕ್ಷಣೆಗಾಗಿ, ಭಾರತಕ್ಕಾಗಿ, ನಮ್ಮ ತನವನ್ನು ಉಳಿಸಿಕೊಳ್ಳುವುದಕ್ಕಾಗಿ ನಾವು ನಮ್ಮ ಭಾಷೆಯನ್ನು ಉಳಿಸಿಕೊಳ್ಳೋಣ.” ಎಂದು ಹೇಳಿದರು.
ಮಂಗಳೂರು ನಗರ ಸಂಸ್ಕೃತ ಭಾರತೀ ಅಧ್ಯಕ್ಷರಾದ ಶ್ರೀ ಎಂ.ಆರ್. ವಾಸುದೇವ ಮಾತನಾಡಿ “ಸಂಸ್ಕೃತ ಭಾಷೆ ಭಾರತೀಯ ಭಾಷೆಗಳಿಗೆ ತಾಯಿಯ ಸ್ಥಾನದಲ್ಲಿದೆ. ಎಲ್ಲ ಕಲೆಗಳಿಗೂ, ವಿಜ್ಞಾನಕ್ಕೂ ಸಂಸ್ಕೃತದ ಕೊಡುಗೆ ಇದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಸಂಸ್ಕೃತದಲ್ಲಿದೆ.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಸಂಸ್ಕೃತ ಭಾರತಿಯ ನೂತನ ಅಧ್ಯಕ್ಷರನ್ನಾಗಿ ಕೆ. ಎಂ. ಸಿ ವೈದ್ಯಕೀಯ ವಿದ್ಯಾಲಯದ ಪ್ರಧ್ಯಾಪಕರಾದ ಡಾ. ವೇಣುಗೋಪಾಲ ಅವರ ಹೆಸರನ್ನು ಉದ್ಘೋಷಿಸಲಾಯಿತು.
ಸಭಾಕಾರ್ಯಕ್ರಮದ ಅನಂತರ ಸಂಸ್ಕೃತದಲ್ಲಿ ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಗಜಾನನ ಭೋವಿಕಾನ್ ಸ್ವಾಗತಿಸಿ, ರವಿಶಂಕರ ಹೆಗಡೆ ಅತಿಥಿಗಳ ಪರಿಚಯ ಮಾಡಿ, ಶ್ರೀಮತಿ ಶೀಲಾ ಶಂಕರಿ ನಿರೂಪಿಸಿ, ಶ್ರೀ ಶರಣ್ಯ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಕೃತ ಭಾರತೀ ಪ್ರಾಂತ ಸಂಪರ್ಕ ಪ್ರಮುಖರಾದ ಕೆ.ವಿ. ಸತ್ಯನಾರಾಯಣ, ಮಂಗಳೂರು ವಿಭಾಗ ಸಂಯೋಜಕ ನಟೇಶ, ಮಹಾನಗರ ಸಂಯೋಜಕಿ ಸಂಧ್ಯಾ ಕಾಮತ್, ಗಣಪತಿ ಕಾಮತ್ ಹಾಗೂ ಅನೇಕ ಸಂಸ್ಕೃತ ಭಾರತೀ ಕಾರ್ಯಕರ್ತರು, ಸಂಸ್ಕೃತ ಅಧ್ಯಾಪಕರು ಹಾಗೂ ಸಂಸ್ಕೃತ ಪ್ರೇಮಿಗಳು ಉಪಸ್ಥಿತರಿದ್ದರು.