ಸಿಂಧನೂರು : ಸಮುದಾಯ ಸಿಂಧನೂರು ಘಟಕದಿಂದ ದಿನಾಂಕ 24-08-2024ರಿಂದ 26-08-2024ರವೆರೆಗೆ ಮೂರು ದಿನಗಳ ಕಾಲ ಸಿಂಧನೂರು ಟೌನ್ ಹಾಲ್ ನಲ್ಲಿ ‘ಸಮುದಾಯ ನಾಟಕೋತ್ಸವ’ವನ್ನು ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳಲ್ಲಿ ನಡೆದ ನಾಟಕಗಳ ಪ್ರದರ್ಶನಕ್ಕೆ ಪ್ರೇಕ್ಷಕರು ಉತ್ಸಾಹಭರಿತರಾಗಿ ಆಗಮಿಸಿ, ನಾಟಕ ವೀಕ್ಷಣೆ ಮಾಡಿದ್ದು, ಪ್ರತಿ ದಿನವು ಟೌನ್ ಹಾಲ್ ತುಂಬಿತ್ತು.
ದಿನಾಂಕ 24 ಆಗಸ್ಟ್ 2024ರಂದು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮುದಾಯ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು ಇವರು ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ “ಸಮಾಜದಲ್ಲಿ ಬೇರೂರಿದ ಮೂಡನಂಬಿಕೆ, ಅಸಮಾನತೆ, ವೈಷಮ್ಯಗಳನ್ನು ತೊಲಗಿಸಿ ಜನರ ಬದಕನ್ನು ಸುಂದರಗೊಳಿಸುವ ಉದ್ದೇಶದಿಂದ ಸಮುದಾಯ ಸಾಂಸ್ಕೃತಿಕ ಸಂಘಟನೆ ಕಳೆದ 50 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಸಮಾಜದ ಪ್ರತಿಬಿಂಬ ನಾಟಕ ಎನ್ನುವ ವಾಸ್ತವತೆಯನ್ನು ಸಮುದಾಯ ಮನಗಂಡಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಆಗಮಿಸಿದ ರಾಯಚೂರು ಸಮುದಾಯದ ವಿ.ಎನ್. ಅಕ್ಕಿ ಮಾತನಾಡಿ “ಸಮುದಾಯ ಸಂಘಟನೆ ಅರ್ಧ ಶತಮಾನದಿಂದ ರಾಜ್ಯದ ಸಾಂಸ್ಕೃತಿಕ ಲೋಕದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ನಿರಂತರ ಪ್ರಯತ್ನಸಿದೆ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮುದಾಯ ಘಟಕದ ಅಧ್ಯಕ್ಷ ಶರಬಣ್ಣ ನಾಗಲಾಪುರ ವಹಿಸಿದ್ದರು. ವೇದಿಕೆ ಮೇಲೆ ಶಾಂತಪ್ಪ ಚಿಂಚರಕಿ. ಸುಮಂಗಲಮ್ಮ ಚಿಂಚರಕಿ, ಹುಲಗಪ್ಪ ಮ್ಯಾದರ ಉಪಸ್ಥಿತರಿದ್ದರು. ನಂತರ ರಾಯಚೂರು ಸಮುದಾಯ ತಂಡದಿಂದ ‘ರಕ್ತ ವಿಲಾಪ’ ನಾಟಕ ಪ್ರದರ್ಶನವಾಯಿತು. ಡಾ. ವಿಕ್ರಮ್ ವಿಸಾಜಿಯವರ ರಚನೆಯ ನಾಟಕ ಖ್ಯಾತ ಸಂಶೋದಕ ಡಾ. ಎಂ.ಎಂ. ಕಲಬುರಗಿ ಜೀವನದ ಘಟನೆಗಳಿಗೆ ಸಂಬಂಧಿಸಿದ್ದಾಗಿದ್ದು, ಇದನ್ನು ಪ್ರವೀಣ್ ರೆಡ್ಡಿ ಗುಂಜಳ್ಳಿಯವರು ಸಮರ್ಥವಾಗಿ ಕಟ್ಟಿಕೊಡುವ ಮೂಲಕ ಪ್ರೇಕ್ಷಕರ ಮನಗೆದ್ದರು.
ಭಾರತವು ಭೌತಿಕವಾಗಿ ಸ್ವತಂತ್ರಗೊಂಡಿದೆ ಆದರೆ ಬೌದ್ಧಿಕವಾಗಿ ಸ್ವತಂತ್ರಗೊಂಡಿಲ್ಲ. ಸ್ಥಾಪಿತ ಸಂಪ್ರದಾಯಗಳನ್ನು ಪ್ರಶ್ನಿಸಿ ಸತ್ಯಶೋಧದ ಹುಡುಕಾಟ ಮಾಡುವ ಸಂಶೋಧಕನ ಅಭಿಪ್ರಾಯಕ್ಕೆ ಮನ್ನಣೆ ಇಲ್ಲ ಎಂಬುವುದು ‘ರಕ್ತ ವಿಲಾಪ’ ನಾಟಕದ ವಿಷಯ. ಸಂಶೋದಕ ಗುಂಡೇಟಿಗೆ ಬಲಿಯಾಗುವ ದೃಶ್ಯದೊಂದಿಗೆ ಆರಂಭಗೊಂಡ ನಾಟಕ ಕೊನೆಯಾಗುವುದು ಕೂಡ ಗುಂಡಿನ ಸದ್ದಿನೊಂದಿಗೆ. ಈ ನಡುವಿನಲ್ಲಿ ಸಂಶೋಧಕನ ಬರಹದ ಜಗತ್ತು ಆತನ ಚಿಂತನೆಗಳು, ಯೋಜನೆಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಪ್ರವೀಣ್ ರೆಡ್ಡಿ ಗುಂಜಳ್ಳಿ ಇವರ ನಿರ್ದೇಶಕನಕ್ಕೆ ಹಾಗೂ ಎಂ.ಎಂ. ಕಲಬುರಗಿಯವರ ಅದ್ಬುತ ನಟನೆಗೆ ಪ್ರೇಕ್ಷಕರ ಚಪ್ಪಾಳೆ ಸಾಕ್ಷಿಯಾಗಿತ್ತು. ಉಳಿದ ಎಲ್ಲಾ ಕಲಾವಿದರು ಪಾತ್ರಕ್ಕೆ ನ್ಯಾಯವೊದಗಿಸಿದ್ದಾರೆ.
ಎರಡನೇ ದಿನದ ಕಾರ್ಯಕ್ರಮವನ್ನು ಖ್ಯಾತ ರಂಗನಿರ್ದೇಶಕರಾದ ಸಿ. ಬಸವಲಿಂಗಯ್ಯ ಉದ್ಘಾಟಿಸಿ ಸಮುದಾಯ ಸಿಂಧನೂರು ಘಟಕಕ್ಕೆ ತಾವು ನಿರ್ದೇಶನ ಮಾಡಿದ ತದ್ರೂಪಿ ನಾಟಕದ ಅನುಭವ ಹಾಗೂ ರಂಗಭೂಮಿಯ ಇತ್ತೀಚೆಗಿನ ಪರಿಸ್ಥಿತಿ ಕುರಿತು ಮಾತನಾಡಿದರು. ಅತಿಥಿಗಳಾಗಿ ಭಾಗವಹಿಸಿದ ನಿರ್ದೇಶಕರಾದ ಸುರೇಶ ಆನಗಳ್ಳಿಯವರು ಸಿಂಧನೂರು ಸಮುದಾಯ ಘಟಕಕ್ಕೆ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದು, ಇದು ನಾನು ಹೆಚ್ಚು ಇಷ್ಟ ಪಡುವ ಸಮುದಾಯದ ತಂಡ ಎಂದರು.
ಈ ಸಂದರ್ಭದಲ್ಲಿ ಸಮುದಾಯ ಸಂಘಟನೆ ಕಟ್ಟುವಲ್ಲಿ ಪ್ರಾರಂಭದ ದಿನಗಳಲ್ಲಿ ಶ್ರಮವಹಿಸಿದ ಸದಸ್ಯರನ್ನು ಗೌರವಿಸಲಾಯಿತು. ನಂತರ ಸಿಂಧನೂರು ಸಮುದಾಯ ತಂಡದಿಂದ ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶನವಾಯಿತು. ಹನುಮಪ್ಪ ದೇವರ ಮೂರ್ತಿ ತಮ್ಮ ಊರಿನಲ್ಲಿಯೆ ಪ್ರತಿಷ್ಠಾಪನೆ ಆಗಬೇಕೆಂದು ಎರಡು ಊರುಗಳ ಮಧ್ಯ ನಡೆಯುವ ಜಗಳ ಕೇಸ್ ಆಗಿ ಕೋರ್ಟ್ ಮೆಟ್ಟಲೇರಿ, ವರ್ಷಾನುಗಟ್ಟಲೆ ಅಲೆದಾಡಿ ಹೊಲಮನಿ ಮಾರಿಕೊಂಡು ಬದುಕು ದುಸ್ತರವಾಗಿ ಬದುಕು ಕಟ್ಟಿಕೊಳ್ಳಲು ಗುಳೆ ಹೋಗುವ ಪ್ರಸಂಗ ಎರಡು ಊರುಗಳ ಜನರದ್ದು. ಪ್ರಾರಂಭದಲ್ಲಿ ಇದ್ದ ಮೂರ್ತಿ ಪ್ರತಿಷ್ಠಾಪನೆ ಜಿದ್ದು ಕ್ರಮೇಣ ಮರೆಯಾಗಿ, ಕೋರ್ಟ್ ತೀರ್ಪು ಕೊಟ್ಟರೂ ದೇವರ ಮೂರ್ತಿ ಸ್ವೀಕರಿಸದ ಎರಡು ಊರಿನ ಜನ ಮತ್ತು ಯಾರಿಗೂ ಬೇಡವಾದ ಹನುಮಪ್ಪ ದೇವರು ಈ ನಾಟಕದ ಕಥಾವಸ್ತು. ನಾಟಕವನ್ನು ಕವಿ ಹನುಮಂತ ಹಾಲಗೇರಿಯವರು ರಚಿಸಿದ್ದು, ಇದನ್ನು ಗಿರೀಶ್ ಈಚನಾಳ ನಿರ್ದೇಶನ ಮಾಡಿದ್ದಾರೆ. ಸಮುದಾಯ ಸಿಂಧನೂರು ಘಟಕದ ಕಲಾವಿದರ ಉತ್ತಮ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಮೂರನೇ ದಿನವೂ ಇದೇ ನಾಟಕ ಮರು ಪ್ರದರ್ಶನಗೊಂಡಿದ್ದು, ಈ ಕಾರ್ಯಕ್ರಮವನ್ನು ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಉದ್ಘಾಟಿಸಿದರು. ಮೂರನೇ ದಿನದ ನಾಟಕ ವೀಕ್ಷಿಸಲು ಟೌನ್ ಹಾಲ್ ತುಂಬಿದ್ದು ಸಂಘಟಕರಿಗೆ ಉತ್ಸಾಹ ತುಂಬಿತು.