ಮಂಗಳೂರು : ಸನಾತನ ನಾಟ್ಯಾಲಯ ಇದರ ವತಿಯಿಂದ ‘ಸನಾತನ ನೃತ್ಯ ಪ್ರೇರಣಾ’ ಮತ್ತು ‘ಭರತನಾಟ್ಯ’ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿಯರನ್ನು ಗೌರವಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ “ನೃತ್ಯಶಿಕ್ಷಣವು ಕೇವಲ ಒಂದು ಕಲಾಶಿಕ್ಷಣವಷ್ಟೇ ಆಗಿರದೇ, ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಜೀವನ, ಸಂಸ್ಕಾರ, ದೇಶ ಪ್ರೇಮ, ಕೌಟುಂಬಿಕ ಮೌಲ್ಯಗಳನ್ನು ಕಲಿಸಿಕೊಡುವ ಸನಾತನ ನಾಟ್ಯಾಲಯ ಸಂಸ್ಥೆಯು ನೃತ್ಯದ ಮೂಲಕ ಯಾವೆಲ್ಲ ವಿಚಾರಗಳನ್ನು ಮಕ್ಕಳಿಗೆ ಕಲಿಸಬಹುದು ಎಂಬುದನ್ನು ವಿಸ್ತಾರವಾಗಿ ತೋರಿಸಿಕೊಟ್ಟಿದೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ. ಅರುಣ್ ಐತಾಳ್ ಇವರು ವಿದ್ವತ್ ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿನಿಯರನ್ನು ಶ್ಲಾಘಿಸಿದರು. ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಸಿಂಚನಾ ಎಸ್. ಕುಲಾಲ್, ವಿಜಿತಾ ಕೆ. ಶೆಟ್ಟಿ, ವೈಷ್ಣವಿ ತಂತ್ರಿ, ಜಾಹ್ನವಿ ಎಸ್. ಶೇಖ, ಧೃತಿ ಶೇರಿಗಾರ್, ಸಂಹಿತ ಕೊಂಚಾಡಿ, ಸ್ನೇಹ ಪೂಜಾರಿ, ಶಾರ್ವರಿ ಮಯ್ಯ ಇವರುಗಳನ್ನು ಸನಾತನ ನಾಟ್ಯಾಲಯದ ವತಿಯಿಂದ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಮ್ಮ ನೃತ್ಯ ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಇವರ ಪಾದಪೂಜೆ ಮಾಡಿ ಗೌರವ ಸಲ್ಲಿಸಿದರು. ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಟ್ಯಾಲಯದ ನೃತ್ಯ ವಿದ್ಯಾರ್ಥಿನಿಯರು ‘ಭರತನಾಟ್ಯ’ ನೃತ್ಯ ಪ್ರದರ್ಶನ ನೀಡಿದರು.