25 ಮಾರ್ಚ್ 2023, ಮಂಗಳೂರು: ಸಂಗೀತ ವಿದ್ವಾಂಸರೂ, ಸೌಜನ್ಯದ ಸಾಕಾರಮೂರ್ತಿಯೂ ಆಗಿದ್ದ ಎನ್. ಕೆ. ಸುಂದರಾಚಾರ್ಯರಿಂದ 1983ರಲ್ಲಿ ಸ್ಥಾಪಿಸಲ್ಪಟ್ಟ ಸನಾತನ ನಾಟ್ಯಾಲಯಕ್ಕೆ ಈ ವರ್ಷ ನಲ್ವತ್ತರ ಸಂಭ್ರಮ, ಸುಂದರಾಚಾರ್ಯ ಅವರ ಮಗಳಾದ ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತರಾದ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಮತ್ತು ಅವರ ಸೋದರ ಸೊಸೆ ಹಾಗೂ ಹಿರಿಯ ಶಿಷ್ಯೆ, ದೂರದರ್ಶನ ಕಲಾವಿದೆ ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್ ಮುಂದಾಳುತ್ವದಲ್ಲಿ ನಾಟ್ಯಾಲಯವು ಬೃಹತ್ ಶಿಷ್ಯವೃಂದಕ್ಕೆ ಭರತನಾಟ್ಯ ಕಲಿಸುವ ಕೆಲಸ ಮಾಡುತ್ತಿದೆ. ಶಾರದಮಣಿಯವರ ಸುಪುತ್ರಿ ಶುಭಮಣಿ ಚಂದ್ರಶೇಖರ್ (ದೆಹಲಿಯ ರಮಾ ವೈದ್ಯನಾಥನ್‌ರವರ ಶಿಷ್ಯೆ), ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆಯಾಗಿ ಪ್ರಸಿದ್ಧಿ ಹೊಂದಿರುತ್ತಾರೆ.
ಭಾರತೀಯ ಇತಿಹಾಸ ಸಂಸ್ಕೃತಿಯನ್ನು ಪರಿಚಯಿಸುವ ‘ರಾಷ್ಟ್ರದೇವೋ ಭವ’, ‘ಪುಣ್ಯಭೂಮಿ ಭಾರತ’, ‘ಶಬರಿ’, ‘ಸತ್ಯನಾಪುರದ ಸಿರಿ’ ಮುಂತಾದ ಹಲವು ಪ್ರಸ್ತುತಿಗಳು ಸ್ಥಳೀಯವಾಗಿ ಹಾಗೂ ದೇಶದ ವಿವಿಧೆಡೆಗಳಲ್ಲಿ ಮತ್ತು ವಿದೇಶದಲ್ಲಿಯೂ ಪ್ರದರ್ಶನ ಕಂಡಿವೆ. ಸನಾತನದ ವಿದ್ಯಾರ್ಥಿಗಳು ನಾಟ್ಯದ ಪಾಠಕ್ಕೆ ಸೀಮಿತವಾಗಿಲ್ಲ. ಸಂಸ್ಕಾರ ಭಾರತೀ ರಾಜ್ಯ ಉಪಾಧ್ಯಕ್ಷರೂ, ನಾಟ್ಯಾಲಯದ ನಿರ್ದೇಶಕರೂ ಆದ ಚಂದ್ರಶೇಖರ ಶೆಟ್ಟಿ ಅವರ ಪರಿಕಲ್ಪನೆಯಂತೆ ರಾಷ್ಟ್ರ, ಧರ್ಮ, ಸಂಸ್ಕಾರ, ಸಂಸ್ಕೃತಿ ಸೇವೆಯ ಬಗ್ಗೆ ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಸನಾತನ ನಾಟ್ಯಾಲಯದ ಸುಮಾರು 18 ವಿದ್ಯಾರ್ಥಿಗಳು ಭರತನಾಟ್ಯದ ರಂಗಪ್ರವೇಶ ಮಾಡಿರುತ್ತಾರೆ.
ಪ್ರತಿ ವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸುವಂತಹ ಭರತನಾಟ್ಯದ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಗ್ರೇಡ್ ಪರೀಕ್ಷೆಗಳನ್ನು ಪೂರೈಸುತ್ತಿದ್ದಾರೆ. ಸುಮಾರು 20 ವಿದ್ಯಾರ್ಥಿಗಳು ದೂರದರ್ಶನದ ಗ್ರೇಡೆಡ್ ಕಲಾವಿದರಾಗಿ ಆಯ್ಕೆಗೊಂಡಿರುತ್ತಾರೆ. ಸನಾತನ ನಾಟ್ಯಾಲಯದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮದೇ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿ, ನೃತ್ಯ ವಿದ್ಯಾರ್ಜನೆಯ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.
ಸನಾತನ ನೃತ್ಯ ಪ್ರೇರಣಾ, ಸನಾತನ ಗೀತಾಮೃತ, ಸನಾತನ ಜ್ಞಾನಾಮೃತ, ಸನಾತನ ಗುರುಪರಂಪರೆ, ಸನಾತನ ನೃತ್ಯಾಂಜಲಿ, ಸನಾತನ ರಾಷ್ಟ್ರಾಂಜಲಿ, ಸ್ವರುಣ್ ಸ್ಮರಣಾಂಜಲಿ, ಸುಂದರ ಮುರಳಿ ಸಂಸ್ಕರಣಾ ಪ್ರಶಸ್ತಿ ಮುಂತಾದ ಕಾರ್ಯಕ್ರಮಗಳನ್ನು ಪ್ರತೀ ವರ್ಷ ಪುರಭವನದಲ್ಲಿ ಆಯೋಜಿಸುತ್ತಿರುವ ಸನಾತನ ನಾಟ್ಯಾಲಯವು ನೃತ್ಯ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಕಂಠಪಾಠ, ಬಾಲ ಸಂಸ್ಕಾರ ಚಿಂತನ, ಮಾತೃವಂದನ, ಹದಿಹರೆಯದ ಸಮಸ್ಯೆಗಳ ಬಗ್ಗೆ ಹಿರಿಯರಿಂದ ಮಾರ್ಗದರ್ಶನ ಮುಂತಾದ ಸಂಸ್ಕಾರಯುತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 2020ರಲ್ಲಿ ಸನಾತನ ನಾಟ್ಯಾಲಯಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂಸ್ಥೆಯ ಗೌರವಕ್ಕೆ ಗರಿ ಮೂಡಿದಂತಾಗಿದೆ.
2022-23ನೇ ಸಾಲಿನಲ್ಲಿ ನಡೆದ ಭರತನಾಟ್ಯ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದ ಸಂಭ್ರಮ ಸನಾತನ ನಾಟ್ಯಾಲಯ ಸಂಸ್ಥೆಯದು. ಒಟ್ಟು ಪರೀಕ್ಷೆಗೆ ಹಾಜರಾದವರ ಸಂಖ್ಯೆ 117. ಇದರಲ್ಲಿ 95 ಮಂದಿ ವಿಶಿಷ್ಟ ಶ್ರೇಣಿ (Distinction)ಯಲ್ಲಿ ತೇರ್ಗಡೆ ಹೊಂದಿದ್ದು, 22 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಕಿರಿಯರ ವಿಭಾಗದಲ್ಲಿ 72 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. 65 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಮತ್ತು 7 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಹಿರಿಯರ ವಿಭಾಗದಲ್ಲಿ 29 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 20 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಮತ್ತು 09 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ವತ್ ಪೂರ್ವ ಪರೀಕ್ಷೆಗೆ 09 ಮಂದಿ ಸಿದ್ದರಾಗಿದ್ದು, ಅನಿವಾರ್ಯ ಕಾರಣದಿಂದ ಒಬ್ಬರಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ 08 ಮಂದಿ ಮಾತ್ರಾ ಹಾಜರಾಗಿ, 05 ಮಂದಿ ವಿಶಿಷ್ಟ ಶ್ರೇಣಿ ಮತ್ತು 03 ಮಂದಿ ಪ್ರಥಮ ಶ್ರೇಣಿಯ ಪಡೆದಿರುತ್ತಾರೆ.
ಅಂತಿಮ ವಿದ್ವತ್ ಪರೀಕ್ಷೆಯಲ್ಲಿ 08 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 05 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಮತ್ತು 03 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಯಾವುದೇ ಪಠ್ಯೇತರ ಚಟುವಟಿಕೆಗಳು ವಿದ್ಯಾಭ್ಯಾಸಕ್ಕೆ ತಡೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ಸಾಬೀತು ಪಡಿಸಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಉಳಿದವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅದನ್ನು ಬಿಟ್ಟು ದ್ವಿತೀಯ, ತೃತೀಯ ಶ್ರೇಣಿಗೆ ಸನಾತನದಲ್ಲಿ ಸ್ಥಾನವೇ ಇಲ್ಲದಿರುವುದು ಸಂಸ್ಥೆಯ ವಿಶೇಷತೆ.