ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ : 09-07-2023ರಂದು ನಡೆದ ‘ಸನಾತನ ಗುರು ಪರಂಪರೆ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸೂರಿ ಕುಮೇರು ಗೋವಿಂದ ಭಟ್ ಗುರುನಮನ ಸ್ವೀಕರಿಸಿ ಮಾತನಾಡುತ್ತಾ “ವ್ಯಕ್ತಿಯ ಜೀವನಕ್ಕೊಂದು ಸರಿಯಾದ ಸಂಸ್ಕಾರವು ನೃತ್ಯಕಲೆಯಿಂದ ದೊರಕುತ್ತದೆ. ಹಾಗೆ ನೋಡಿದರೆ ಪ್ರತಿಯೊಂದು ಕಲೆಯೂ ಆತನ ಸಂಸ್ಕಾರದಿಂದಲೇ ಪ್ರಾಪ್ತವಾಗಲು ಸಾಧ್ಯ. ಲಲಿತ ವಿದ್ಯೆಗಳನ್ನು ಸ್ವೀಕರಿಸಲು ಪೂರ್ವ ಸಂಸ್ಕಾರ ಬೇಕು. ಸತ್ಯದ ಸಾಕ್ಷಾತ್ಕಾರವೇ ವಿದ್ಯೆಯ ಪರಮ ಲಕ್ಷ್ಯ. ಕೇಳುಗನಿಗೆ, ನೋಡುಗನಿಗೆ ಏನನ್ನು ಕೊಡಬೇಕು ಎಂಬುದನ್ನು ಕಲಾವಿದನು ತಿಳಿದಿರಬೇಕು. ಅದು ಗುರು ಮುಖೇನ ಲಭ್ಯವಾಗಬೇಕು” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, “ಜೀವಿತದಲ್ಲಿ ನಮಗಿರುವ ದೊಡ್ಡ ಜವಾಬ್ದಾರಿ ಎಂದರೆ ನಮ್ಮ ಹಿರಿಯರ ಉತ್ತಮ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸುವಂತಹುದು. ಪ್ರತ್ಯಕ್ಷ ಪೂಜೆಗಿಂತಲೂ ಗುರುವಿನ ತತ್ವ ಬೋಧನೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದು ಅತ್ಯುತ್ತಮ ಗುರುಪೂಜೆ” ಎಂದು ಹೇಳಿದರು.
ಮೈಸೂರು ಮೂಗೂರು ಶೈಲಿಯ ಹಿರಿಯ ಭರತನಾಟ್ಯ ಗುರು, ಕೀರ್ತಿಶೇಷ ಕೊಡವೂರು ಮಾಧವ ಭಾಗವತರ ಸಂಸ್ಮರಣೆಯನ್ನು ನೃತ್ಯಶಿಕ್ಷಕ ರಾಮಕೃಷ್ಣ ಕೊಡಂಚ ನಡೆಸಿಕೊಟ್ಟರು.
ಪುತ್ತೂರು ನಾಟ್ಯರಂಗ ಸಂಸ್ಥೆಯ ನೃತ್ಯಗುರು ಮಂಜುಳಾ ಸುಬ್ರಹ್ಮಣ್ಯ ಅವರಿಗೆ ‘ಗುರುಪ್ರೇರಣಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಯಕ್ಷಗಾನ ರಂಗ ನಿರ್ದೇಶಕ ಡಾ. ದಿನಕರ ಎಸ್. ಪಚ್ಚನಾಡಿ, ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಬಳಿಕ ನೃತ್ಯಗುರುಗಳಾದ ವಿದುಷಿ ಶಾರದಾ ಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ನಿರ್ದೇಶನದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.