ಮಂಗಳೂರು : ಸನಾತನ ನಾಟ್ಯಾಲಯದ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 29-07-2023ರಂದು ‘ಸನಾತನ ನೃತ್ಯ ಪ್ರೇರಣಾ’ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ 2022ರಲ್ಲಿ ಭರತನಾಟ್ಯ ವಿದ್ವತ್ ಪೂರೈಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
‘ಸನಾತನ ನೃತ್ಯ ಪ್ರೇರಣಾ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷ ಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಇವರು ಮಾತನಾಡಿ “ನೃತ್ಯ ಕಲೆ ಮಾತ್ರವಲ್ಲ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಸನಾತನ ನಾಟ್ಯಾಲಯದ ಕಾರ್ಯ ವೈಖರಿಯನ್ನು ಸಮಾಜವು ಗುರುತಿಸಬೇಕು. ಕಲೆ ಎಂಬುದು ಯಾವುದಕ್ಕೂ ಅಡೆತಡೆ ಆಗುವುದಿಲ್ಲ. ಅದನ್ನು ನಂಬಿಯೇ ಜೀವನ ಮಾಡುವುದು ಸಾಧ್ಯ. ಕಲೆಯನ್ನು ಪ್ರೀತಿಸಿ ತಪಸ್ಸಾಧನೆ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ” ಎಂದು ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಹಿರಿಯ ಶಾಖಾಧಿಕಾರಿ ಶ್ರೀ ಎಲ್.ದಿವಾಕರ್, ಮಣಿಪಾಲದ ಹೆಜ್ಜೆ ಗೆಜ್ಜೆ ಸಂಸ್ಥೆಯ ನೃತ್ಯಗುರು ವಿದುಷಿ ಯಶ ರಾಮಕೃಷ್ಣ ವಿದ್ವತ್ ಪೂರೈಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವಿದ್ವತ್ ಪರೀಕ್ಷೆಯಲ್ಲಿ ಪಾಸಾದ ವಿದುಷಿಯರಾದ ಅನನ್ಯ ಕುಂಡಂತಾಯ, ಅಪೂರ್ವ ಅಲೆವೂರಾಯ, ಅಮೃತ ವಿ, ರೀನಾ ಕಿಶೋರ್, ರಿಯಾ ಕಿಶೋರ್, ಸಾಹಿತ್ಯ ಸುರೇಶ್, ನಾಗರಶ್ಮಿ ಮತ್ತು ತುಳಸಿ ಇವರೆಲ್ಲರನ್ನೂ ನಾಟ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.
ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ನೃತ್ಯ ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ನಿರ್ದೇಶನದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ಅದ್ಭುತ ನೃತ್ಯ ಪ್ರದರ್ಶನ ನೀಡಿದರು.