ಮಂಗಳೂರು : ಸನಾತನ ನಾಟ್ಯಾಲಯದ ಆಶ್ರಯದಲ್ಲಿ ‘ಸನಾತನ ನೃತ್ಯೋತ್ಸವ’ ಕಾರ್ಯಕ್ರಮವು ದಿನಾಂಕ 17-09-2023ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ಗೌರವ ಸನ್ಮಾನ ಸ್ವೀಕರಿಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡುತ್ತಾ, “ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಸ್ವಚ್ಛ ಹಾಗೂ ಸಮೃದ್ಧ ನಗರವನ್ನು ರೂಪಿಸುವ ಜವಾಬ್ದಾರಿಯು ಪಾಲಿಕೆಯ ಹೆಗಲ ಮೇಲಿದೆ ಮತ್ತು ಅದನ್ನು ಸರ್ವಪ್ರಯತ್ನಗಳೊಂದಿಗೆ ನಿರ್ವಹಿಸಲು ಬದ್ಧವಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ‘ಶಿಕ್ಷಣದಲ್ಲಿ ರಾಷ್ಟ್ರೀಯತೆ’ ಎಂಬ ವಿಷಯದ ಬಗ್ಗೆ ಮಾತನಾಡಿದ ಯುವವಾಗ್ಮಿ ಲತೇಶ್ ಬಾಕ್ರಬೈಲು ಅವರು, “ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ದೇಶೀಯ ಅಂಶಗಳಿಗೆ ಒತ್ತು ಕೊಡದೇ ಇರುವುದರ ಫಲವಾಗಿ ನಮ್ಮತನದ ಮಹತ್ವವನ್ನು ಮರೆತುಬಿಟ್ಟಿದ್ದೇವೆ. ನಮ್ಮ ದೇಶದಲ್ಲಿರುವ ಜ್ಞಾನ ಸಂಪತ್ತನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಕಲಾಮಾಧ್ಯಮಗಳ ಮೂಲಕ ರೂಪಿಸಿಕೊಳ್ಳುವ ವ್ಯವಸ್ಥೆಯಾಗಬೇಕು. ಸನಾತನ ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಯುವ ತಲೆಮಾರಿಗೆ ತಿಳಿಸಿಕೊಡುವ ಜವಾಬ್ದಾರಿಯಿಂದ ನಾವು ನುಣುಚಿಕೊಳ್ಳಬಾರದು” ಎಂದು ಹೇಳಿದರು.
ವೇದಿಕೆಯಲ್ಲಿ ಸನಾತನ ನಾಟ್ಯಾಲಯದ ಗುರುಗಳಾದ ವಿದುಷಿ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್ ಮತ್ತು ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿ, ವಿದುಷಿ ಶ್ರೀಲತಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರಿಂದ ‘ನೃತ್ಯೋತ್ಸವ’ ಕಾರ್ಯಕ್ರಮ ನಡೆಯಿತು.