ಮಂಗಳೂರು : ಸಂಗೀತ ಪರಿಷತ್ ಮಂಗಳೂರು (ರಿ.) ಆಶ್ರಯದಲ್ಲಿ, ಭಾರತೀಯ ವಿದ್ಯಾಭವನ ಹಾಗೂ ರಾಮಕೃಷ್ಣಮಠದ ಸಹಯೋಗದಲ್ಲಿ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸಂಗೀತ ತ್ರಿಮೂರ್ತಿ ಹಾಗೂ ದಾಸ ವರೇಣ್ಯರ ಆರಾಧನೋತ್ಸವ ಕಾರ್ಯಕ್ರಮವು ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 21-01-2024ರಂದು ನಡೆಯಿತು. ಸ್ವಾಮಿ ಚಿದಂಬರಾನಂದ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಯಚ್. ಸುಬ್ರಹ್ಮಣ್ಯ ರಾವ್ ಸ್ವಾಗತಿಸಿ, ನಿರೂಪಿಸಿದರು.
ನಂತರ ಬೆಂಗಳೂರಿನ ನಿರಂಜನ್ ದಿಂಡೋಡಿಯವರು ಸುಶ್ರಾವ್ಯವಾಗಿ ಪರಿಶುದ್ಧವಾದ ವಿದ್ವತ್ ಪೂರ್ಣ ಕಛೇರಿಯನ್ನು ನೀಡಿದರು. ಪಿಟೀಲು ವೈಭವ ರಮಣಿ, ಮೃದಂಗದಲ್ಲಿ ನಿಕ್ಷತ್ ಮತ್ತು ಮೋರ್ಸಿಂಗ್ ರಾಜಶೇಖರ್ ಇವರುಗಳು ಪಕ್ಕವಾದ್ಯದಲ್ಲಿ ಸಹಕರಿಸಿದರು. ಮಧ್ಯಾಹ್ನದ ಮೊದಲ ಕಛೇರಿಯು ಮಂಗಳೂರಿನ ಸುದೀಕ್ಷ ಅವರ ಹಾಡುಗಾರಿಕೆ, ಮಹತಿಯವರ ಪಿಟೀಲು ಹಾಗೂ ಅವಿನಾಶ್ ಅವರ ಮೃದಂಗ ಸಹಕಾರದೊಂದಿಗೆ ನಡೆಯಿತು. ಆಮೇಲೆ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ, ವಿದುಷಿ ವೀಣಾ ಶಾಸ್ತ್ರಿ, ವಿದ್ವಾನ್ ಗೋಪಾಲ್ ಹಾಗೂ ಅವರ ಶಿಷ್ಯ ವೃಂದದವರಿಂದ ತ್ಯಾಗರಾಜರ ಪಂಚರತ್ನ ಗೋಷ್ಠಿಗಾಯನ ನಡೆಯಿತು.
ಸಂಜೆ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಮೈಸೂರಿನ ಹರೀಶ್ ಪಾಂಡವ್ ಅವರು ಸ್ಯಾಕ್ಸೋಫೋನ್ ಕಛೇರಿಯನ್ನು ನೀಡಿದರು. ಪ್ರಬುದ್ಧವಾದ ಗಾಯಕೀ ಶೈಲಿಯ ಅವರ ವಾದನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಂಗೀತ ಪರಿಷತ್ತಿನ ಜೊತೆ ಕಾರ್ಯದರ್ಶಿ ಅಶ್ವಿನಿ ಮತ್ತು ಸದಸ್ಯೆ ಸೀತಾಲಕ್ಷ್ಮಿ ಅವರು ಕಲಾವಿದರನ್ನು ಪರಿಚಯಿಸಿ, ಖಜಾಂಚಿ ಸುಬ್ರಹ್ಮಣ್ಯ ಉಡುಪ ವಂದಿಸಿದರು. ಕೊನೆಯಲ್ಲಿ ರಾಮಕೃಷ್ಣಮಠದ ಸ್ವಾಮಿ ಜಿತಕಾಮಾನಂದಜಿಯರು ಮಂಗಳಾರತಿ ಬೆಳಗುವ ಮೂಲಕ ಆರಾಧನೋತ್ಸವ ಸಂಪನ್ನಗೊಂಡಿತು.