ಮಂಗಳೂರು : ಸಂಗೀತ ಪರಿಷತ್ ಮಂಗಳೂರು, ಸಂಸ್ಥೆಯು ತನ್ನ 30 ವಸಂತಗಳನ್ನು ಕಳೆದ ಸಂತಸವನ್ನು ‘ತ್ರಿಂಶತಿ ಸಂಭ್ರಮ’ ಕಾರ್ಯಕ್ರಮವನ್ನು ವರ್ಷವಿಡೀ ಹಮ್ಮಿಕೊಳ್ಳುವ ಉದ್ದೇಶವಿಟ್ಟುಕೊಂಡಿರುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಕಂಪನ್ನು ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪಸರಿಸುವ ಮಹತ್ತರ ಕಾರ್ಯ ಪರಿಷತ್ ನಿರ್ವಹಿಸುತ್ತಿದೆ. ‘ತ್ರಿಂಶತಿ ಸಂಭ್ರಮ’ದ ಉದ್ಘಾಟನಾ ಸಮಾರಂಭದ ಅಂಗವಾಗಿ ದಿನಾಂಕ 23-04-2023ರಂದು ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ‘ಮಹತಿ ಸ್ವರಾಂಜಲಿ’ ಎಂಬ ಸಂಗೀತಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶ್ರೀ ಗೋಪಾಲ್ ಮೌದ್ಗಲ್ ರವರ ನೇತೃತ್ವದಲ್ಲಿ 30 ವೀಣಾವಾದಕರು ಏಕಕಾಲದಲ್ಲಿ ಒಂದೇ ವೇದಿಕೆಯಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟರು. ಪ್ರತಿಷ್ಟಿತ ಮೈಸೂರು ಶೈಲಿಯ ವೀಣಾವಾದನ ಕಾರ್ಯಕ್ರಮದಲ್ಲಿ ಅಪರೂಪದ ರಾಗಗಳಲ್ಲಿ ಕೃತಿಗಳನ್ನು ನುಡಿಸಲಾಯಿತು. ವೆಂಕಟ ಗಿರಿಯಪ್ಪನವರ ಶಾರದಾಪ್ರಿಯ ರಾಗದ ಕೃತಿ, ಸುಪೋಷಿಣಿ ರಾಗದಲ್ಲಿ ತ್ಯಾಗರಾಜರ ಕೃತಿ, ವೀಣೆ ಶೇಷಣ್ಣನವರ ಅಪರೂಪದ ಸ್ವರ ಜತಿಗಳ ಕೃತಿಗಳನ್ನು ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು. ಶ್ರೀ ಗೋಪಾಲ್ ಮೌದ್ಗಲ್ ರವರು ರಚಿಸಿದ ಕುಮುದಪ್ರಿಯಾ ರಾಗದ ತಿಲ್ಲಾನ ಅಮೋಘವಾಗಿ ಮೂಡಿ ಬಂದಿತು. ಮೈಸೂರು ವಿನಿಕೆಯ ಸೌಂದರ್ಯಕ್ಕೆ ದರ್ಪಣ ಹಿಡಿದಂತೆ ಶಿಸ್ತುಬದ್ಧ ಶಾಸ್ತ್ರೀಯ ಸಂಗೀತದ ಪ್ರಸ್ತುತಿ ಜನಮನ ಸೂರೆಗೊಂಡಿದೆ.
ನಂತರ ಚೆನ್ನೈನ ಶ್ರೀ ರಿತ್ವಿಕ್ ರಾಜ ಮತ್ತು ತಂಡದವರಿಂದ ಹಾಡುಗಾರಿಕೆ ಕಛೇರಿ ನಡೆಯಿತು. ತೆರದಾಯಕರಾದ ಸಮಾನಮೆವರು ಕೃತಿಗಳು ಸುಲಲಿತವಾಗಿ ಮೂಡಿಬಂದರೆ, ವರಾಳಿ, ಕೇದಾರ ಗೌಳ ರಾಗಗಳು ಜನ ಮನ್ನಣೆ ಪಡೆಯಿತು. ಕಾವೆರಾಗದ ಜಗದೋದ್ಧಾರನ ಕೃತಿ ಗಾಯಕರ ಗುರು ವಿದ್ವಾನ್ ಟಿ.ಎಂ.ಕೆ.ರವರ ತದ್ರೂಪೋ ಎಂಬಂತೆ ಭಾಸವಾಯಿತು.