ಬೆಂಗಳೂರು : ಬೆಂಗಳೂರಿನ ಜಕ್ಕೂರಿನಲ್ಲಿರುವ ‘ಶ್ರೀ ರಾಮ ಕಲಾ ವೇದಿಕೆ’ ಪ್ರಸ್ತುತಪಡಿಸಿದ ‘ಸಂಗೀತ ಸುಧೆ’ ಕಾರ್ಯಕ್ರಮ ದಿನಾಂಕ 02-10-2023 ರಂದು ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯಿತು.
ಕಳೆದ ವರ್ಷ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹಾಗೂ ಈ ವರ್ಷ ತಮ್ಮ ಜೀವನದ 75 ಸಂವತ್ಸರಗಳನ್ನು ಪೂರೈಸಿದ ಪಂಡಿತ್ ವಿನಾಯಕ ತೊರವಿ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಬಗ್ಗೆ ಮಾತನಾಡುತ್ತಾ ಪಂಡಿತ್ ರವೀಂದ್ರ ಯಾವಗಲ್ “ ಶ್ರೀಯುತ ತೊರವಿಯವರು ಒಬ್ಬ ಉತ್ತಮ ಸಂಗೀತ ಕಾರ್ಯಕರ್ತ, ಕಲಾವಿದ ಹಾಗೂ ಕಲಾ ಸೇವಕ. ಹುಬ್ಬಳ್ಳಿ ಮತ್ತು ಧಾರವಾಡದಂತಹ ಪ್ರದೇಶದಲ್ಲಿ ನಡೆಯುತ್ತಿದ್ದ ಆಹೋರಾತ್ರಿ ಸಂಗೀತ ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ನಡೆಸಿದ ಕೀರ್ತಿ ಪಂಡಿತ್ ವಿನಾಯಕ ತೊರವಿ ಇವರಿಗೆ ಸಲ್ಲುತ್ತದೆ. ಇವರ ನಿರ್ದೇಶನದ ‘ಗುರುರಾಜ್ ದೇಶಪಾಂಡೆ ಸಂಗೀತ ಸಭಾ’ ಹಲವಾರು ಯುವ ಪ್ರತಿಭೆಗಳನ್ನು ಬೆಳೆಸಿದೆ ಹಾಗೂ ಪ್ರೋತ್ಸಾಹಿಸಿದೆ.” ಎಂದರು. ‘ಶ್ರೀ ರಾಮ ಕಲಾ ವೇದಿಕೆ’ಯ ಪರವಾಗಿ ರವಿ ದೇಸಾಯಿ, ಶ್ರೀರಂಗ ಸುಬ್ಬಣ್ಣ, ಉದಯರಾಜ್ ಕರ್ಪೂರ್, ಪಂಡಿತ್ ರವೀಂದ್ರ ಯಾವಗಲ್ ಹಾಗೂ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಸನ್ಮಾನಿಸಿದರು. ಇದೇ ಸಂದರ್ಭಯಲ್ಲಿ ಈ ಮೊದಲೇ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಪಂಡಿತ್ ರವೀಂದ್ರ ಯಾವಗಲ್ ಇವರನ್ನು ಹಿತೈಷಿಗಳು ಹಾಗೂ ಶಿಷ್ಯವೃಂದದ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮದ ಮೊದಲು ಶ್ರೀ ಲೋಚನ್ ಇವರ ಗಣೇಶ ಸ್ತುತಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ಶ್ರೀ ರಜತ ಕುಲಕರ್ಣಿ ಹಿಂದೂಸ್ಥಾನಿ ಸಂಗೀತದ ಅಹಿರ್ ಭೈರವ್ ರಾಗ ಪ್ರಸ್ತುತಪಡಿಸಿದರು. ಇವರಿಗೆ ಶ್ರೀ ಪ್ರಹ್ಲಾದ್ ದೇಶಪಾಂಡೆ ತಬಲಾದಲ್ಲಿ ಹಾಗೂ ಶ್ರೀ ಗೌರವ್ ಗಡಿಯಾರ್ ಹಾರ್ಮೋನಿಯಂನಲ್ಲಿ ಸಾಥ್ ನೀಡಿದರು. ಬಳಿಕ ನಡೆದ ಹಿಂದೂಸ್ಥಾನಿ ಬಾನ್ಸುರಿ ವಾದನ ಕಛೇರಿಯಲ್ಲಿ ಪ್ರವೀಣ್ ಗೋಡ್ಖಿಂಡಿಯವರು ಆರಂಭದಲ್ಲಿ ‘ತೋಡಿ ರಾಗ’ ಪ್ರಸ್ತುತಪಡಿಸಿದರು. ನಂತರ ‘ರೂಪಕ್ ತಾಳ’ದಲ್ಲಿ ಅವರೇ ರಚಿಸಿದ ಒಂದು ಸಂಯೋಜನೆಯನ್ನು ಪ್ರಸ್ತುತ ಪಡಿಸಿದರು. ಇವರಿಗೆ ಯುವ ಪ್ರತಿಭೆ ಪ್ರವೀಣ್ ಯವರು ಮಗ ಶ್ರೀ ಷಡಜ್ ಗೋಡ್ಖಿಂಡಿ ಬಾನ್ಸುರಿಯಲ್ಲಿ ಹಾಗೂ ಪಂಡಿತ್ ರವೀಂದ್ರ ಯಾವಗಲ್ ತಬಲಾದಲ್ಲಿ ಸಾಥ್ ನೀಡಿದರು. ಆಕಾಶವಾಣಿ ಕಲಾವಿದೆಯಾದ ಸುಮತಿ ಕಾರ್ಯಕ್ರಮ ನಿರೂಪಿಸಿದರು.