ಮೈಸೂರು : ಅರಮನೆ ಆವರಣದಲ್ಲಿ ದಿನಾಂಕ 22 ಸೆಪ್ಟೆಂಬರ್ 2025ರಂದು ನಡೆದ ದಸರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯಲ್ಲಿ ‘ಸಂಗೀತ ವಿದ್ವಾನ್ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.
ಸಿ.ಎಂ. ಸಿದ್ದರಾಮಯ್ಯ ಇವರಿಂದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಹಿಂದೂಸ್ತಾನಿ ಸಂಗೀತ ವಿದ್ವಾಂಸ ವೆಂಕಟೇಶ ಕುಮಾರ್ “ಎಂತಹ ಸಂದರ್ಭದಲ್ಲಿಯೂ ಜಾತಿ ನೋಡುವುದು ತಪ್ಪು, ತಮ್ಮ ಗುರುಗಳು ತಮ್ಮಂತಹವರನ್ನು ಇದೇ ರೀತಿ ನೋಡಿ, ಹಳ್ಳಿಯಿಂದ ದಿಲ್ಲಿಗೆ ಕಳುಹಿಸಿದ್ದಾರೆ. ನಾನು ಹಾಡುವವರು, ಮಾತನಾಡುವವನಲ್ಲ. ಆದರೂ ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಾತನಾಡಬೇಕಾಗಿ ಬಂದಿದೆ. ಈ ಹಿಂದೆಲ್ಲ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದಾಗ ನನಗೆ ಯಾವಾಗ ಪ್ರಶಸ್ತಿ ಬರುತ್ತದೆ ಎಂದು ಹಾಸ್ಯ ಮಾಡುತ್ತ ಪ್ರಶ್ನಿಸಿದ್ದೆ. ಆದರೆ ಈಗ ತಾನಾಗಿಯೇ ಒಲಿದು ಬಂದಿದೆ. ಇದರೊಡನೆ ಸುಮಾರು 40 ವರ್ಷ ಹಿಂದೆ ಅರಮನೆಯೊಳಗೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ. ಈಗ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಗೌರವ ಸಂದಿರುವುದು ಅಂದಿನ ಸೇವೆಗೆ ಈಗ ದೊರೆತ ಸತ್ಕಾರ ಎಂದು ಭಾವಿಸುತ್ತೇನೆ” ಎಂದರು. ಬಳಿಕ ಕನಕದಾಸರ ರಚನೆಯ ‘ತೊರೆದು ಜೀವಿಸಬಹುದೆ, ಹರಿ ನಿನ್ನ ಚರಣಗಳ, ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ’ ಸಾಲನ್ನು ಹಾಡುವ ಮೂಲಕ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು.
ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಬಸವರಾಜ ತಂಗಡಗಿ, ಸಂಸದ ಸುನಿಲ್ ಬೋಸ್, ಶಾಸಕರಾದ ಟಿ.ಎಸ್. ಶ್ರೀವತ್ಸ, ತಸ್ವೀರ್‌ಸೇಠ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.