ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ದಿನಾಂಕ 25 ಜುಲೈ 2024ರಂದು ಶ್ರೀ ಎಡನೀರು ಮಠದ ಭಾರತೀ ಕಲಾ ಸದನದಲ್ಲಿ ಎರಡು ದಿನಗಳ ಸಂಗೀತೋತ್ಸವ ಆರಂಭವಾಯಿತು. ನಾಡಿನ ಖ್ಯಾತ ಸಂಗೀತ ವಿದ್ವಾಂಸರು ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ.
ಜುಲೈ 26 2024ರಂದು ಸಂಜೆ 6-00 ಗಂಟೆಯಿಂದ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರ ನಿರ್ದೇಶನದಲ್ಲಿ ‘ಲಯಲಾವಣ್ಯ ತಾಳವಿದ್ಯಾ’ ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಸುಮಾರು ಹತ್ತಕ್ಕೂ ಹೆಚ್ಚು ವಿವಿಧ ವಾದ್ಯ ಪರಿಕರಗಳ ಕಲಾವಿದರು ಭಾಗವಹಿಸಲಿದ್ದಾರೆ.
ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಮಾನ್ಯ ವಲಯ ಸಮಿತಿಯ ಒಂದು ದಿನದ ಪೂರ್ಣಸೇವೆಯು 27 ಜುಲೈ 2024ರಂದು ನಡೆಯಲಿದೆ. ಬೆಳಗ್ಗೆ 9ಕ್ಕೆ ಶ್ರೀಗಳಿಂದ ದೀಪಪ್ರಜ್ವಲನೆ, ಕಲ್ಲಕಟ್ಟ ಶ್ರೀಕೃಷ್ಣಗಾನ ಭಜನಾ ಸಂಘದಿಂದ ಭಜನೆ, 10 ಗಂಟೆಗೆ ಶ್ರೀ ಸಚ್ಚಿದಾನಂದ ಭಾರತೀ ಶಿಷ್ಯವೃಂದ ಮಾನ್ಯ ಇವರಿಂದ ಭಜನೆ, 11ರಿಂದ ಶ್ರೀ ಶಾಸ್ತಾ ಮಹಿಳಾ ಭಜನಾ ಸಂಘ ಮಾನ್ಯ ಇವರಿಂದ ಭಜನೆ ನಡೆಯಲಿದೆ. ಮಧ್ಯಾಹ್ನ 1.30ರಿಂದ ಯಕ್ಷಸಿಂಧೂರ ಮಹಿಳಾ ಯಕ್ಷಕೂಟ ತಲಪಾಡಿ ಇವರಿಂದ ‘ರಾವಣಾಂತರಂಗ’ ಯಕ್ಷಗಾನ ತಾಳಮದ್ದಳೆ, ಸಂಜೆ 4ರಿಂದ ನಾಟ್ಯವೈಭವ, 5ರಿಂದ ಅಭಿನಂದನಾ ಕಾರ್ಯಕ್ರಮ, ಶ್ರೀಗಳಿಂದ ಆಶೀರ್ವಚನ ನಡೆಯಲಿದೆ.
ಕರ್ನಾಟಕದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಲ್ಪೆ ಅಧ್ಯಕ್ಷತೆಯಲ್ಲಿ ಡಾ. ಟಿ. ಶ್ಯಾಮ ಭಟ್ ಅವರಿಗೆ ಗೌರವಾರ್ಪಣೆ ಜರಗಲಿದೆ. ವೇದಮೂರ್ತಿ ಕಮಲಾದೇವಿ ಆಸ್ರಣ್ಣ ಕಟೀಲು, ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದ ಅಧ್ಯಕ್ಷ ಮಧುಸೂದನ ಆಯರ್ ಮಂಗಳೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಭಿನಂದನಾ ಭಾಷಣ ಮಾಡುವರು. 6.30ರಿಂದ ಕೀಲಾರು ಶ್ರೀ ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಇದರ ವತಿಯಿಂದ ‘ಗುರುತೇಜ ಗುರುಕಾರುಣ್ಯ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.