ಮಂಗಳೂರು : ಮಂಗಳೂರಿನ ಶಕ್ತಿನಗರದಲ್ಲಿ ಕಾರ್ಯಾಚರಿಸುತ್ತಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆ ಇದರ ಮುಖಾಂತರ ‘ಸಾನಿಧ್ಯ ಉತ್ಸವ’ ಮಂಗಳೂರಿನ ಕದ್ರಿ ಉದ್ಯಾನದಲ್ಲಿ ದಿನಾಂಕ 10-03-2024ರಂದು ನಡೆಯಿತು. ಉದ್ಘಾಟನೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ ವೇದಮೂರ್ತಿ ಕಮಲಾದೇವಿ ಪ್ರಸಾದ ಅಸ್ತ್ರಣ್ಣರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮುಂಬೈಯ ಚಾರ್ಟರ್ಡ್ ಅಕೌಂಟೆಂಟ್ ಶ್ರೀ ಸುಧೀರ್ ಶೆಟ್ಟಿಯವರು, ಅದೇ ರೀತಿ ಮಂಡ್ಯ ಜಿಲ್ಲೆಯ ಆಶಾ ಸದನ ವಿಶೇಷ ಶಾಲೆಯ ಮುಖ್ಯಸ್ಥರಾದ ವಂದನೀಯ ಗುರುಗಳಾದ ಜಾಯ್ಸನ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಅಕ್ಕರೆಯ ಬೆಳಕು ಶಾಲೆಯ ಸ್ಥಾಪಕರಾದ ಕರೆಪ್ಪ ಬಿ.ಎಚ್. ಹಾಗೂ ಮಂಗಳೂರು ಕಿನ್ನಿಗೋಳಿಯ ಸೈಂಟ್ ಮೇರಿಸ್ ಸ್ಪೆಷಲ್ ಸ್ಕೂಲಿನ ಮುಖ್ಯಸ್ಥೆಯಾದ ಶ್ರೀಮತಿ ರೇಷ್ಮಾ ಮರಿಯ ಮಾರ್ಟಿಸ್ ಇವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿಶೇಷ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು. ಕದ್ರಿ ಹವ್ಯಾಸಿ ಬಳಗದ ಮುಖ್ಯಸ್ಥರಾದ ಶರತ್ ಕುಮಾರ್ ಇವರ ನೇತೃತ್ವದಲ್ಲಿ ವಿಶೇಷ ಮಕ್ಕಳು ಪ್ರದರ್ಶಿಸಿದ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಸುಂದರವಾಗಿ ಮೂಡಿ ಬಂದಿತು. ಅದೇ ರೀತಿ ಸಾನಿಧ್ಯದ ಆಡಳಿತಧಿಕಾರಿ ವಸಂತ್ ಕುಮಾರ್ ಶೆಟ್ಟಿ ರಚಿಸಿ ನಿರ್ದೇಶಿಸಿದ ಸಾಮ್ರಾಟ್ ಅಶೋಕನ ಜೀವನ ಚರಿತ್ರೆಯನ್ನು ಪ್ರತಿಬಿಂಬಿಸುವ ‘ಬುದ್ಧಂ ಶರಣಂ ಗಚ್ಛಾಮಿ’ ನಾಟಕ ಪ್ರೇಕ್ಷಕರ ಮನ ಸೂರೆಗೊಂಡಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹಾಬಲ ಮಾರ್ಲ, ಖಜಾಂಜಿ ಜಗದೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರೊಫೆಸರ್ ರಾಧಾಕೃಷ್ಣ, ನಿರ್ದೇಶಕರಾದ ಮಹಮದ್ ಬಶೀರ್, ಉಷಾ ಶೆಟ್ಟಿ, ವರ್ಷ ಪ್ರಕಾಶ್, ದಿವ್ಯ ಬಾಳಿಗ ಹಾಗೂ ಇನ್ನಿತರರು ವೇದಿಕೆಯಲ್ಲಿದ್ದರು. ಸಾನಿಧ್ಯದ ಆಡಳಿತ ಅಧಿಕಾರಿ ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಅಧ್ಯಕ್ಷ ಮಹಾಬಲ ಮಾರ್ಲ ವಂದಿಸಿ, ರಾಕೇಶ್ ಶೆಟ್ಟಿ ಹಾಗೂ ಶ್ರೀಮತಿ ಸುಶ್ಮಿತಾ ಕಡಪಲ ಕಾರ್ಯಕ್ರಮ ನಿರೂಪಿಸಿದರು.