ಬೆಂಗಳೂರು : ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯವು 2021ನೇ ಸಾಲಿನ ‘ಸಂಸ್ಕೃತ ಪುರಸ್ಕಾರ’ಕ್ಕೆ ಗ್ರಂಥಗಳನ್ನು ಆಹ್ವಾನಿಸಿದೆ. ಪುರಸ್ಕಾರವು 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಫಲಕವನ್ನು ಒಳಗೊಂಡಿದೆ. 2018ರಿಂದ ಈವರೆಗೆ ಪ್ರಕಟವಾದ ಪುಸ್ತಕಗಳನ್ನು ಪುರಸ್ಕಾರಕ್ಕೆ ಪರಿಗಣಿಸಲಾಗುವುದು. ಲೇಖಕರು ತಮ್ಮ ಕೃತಿಗಳನ್ನು ಜೂನ್ 28ರೊಳಗೆ ಸಲ್ಲಿಸಬೇಕು.
ಗ್ರಂಥಗಳನ್ನು ಉಪ ನಿರ್ದೇಶಕರು, ಪ್ರಸಾರಾಂಗ, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 18 ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ವಿವಿ ಯ ಜಾಲತಾಣ: www.ksu.ac.in ನಲ್ಲಿ ಸಂಸ್ಕೃತ ಗ್ರಂಥ ಪುರಸ್ಕಾರ ಯೋಜನೆಯ ಸಂಪೂರ್ಣ ವಿವರ ಲಭ್ಯವಿದೆ.
ರಾಜ್ಯದಲ್ಲಿ ಸಂಸ್ಕೃತ ಸಾಹಿತ್ಯ ರಚನೆ/ ಗ್ರಂಥ ರಚನೆ ಮತ್ತು ಪ್ರಕಾಶನದ ಉದ್ಯಮವು ಬಹಳ ದೀರ್ಘ ಇತಿಹಾಸವನ್ನು ಹೊಂದಿದೆ. ಇಂದಿಗೂ ಅನೇಕ ವಿದ್ವಾಂಸರು ಸಂಸ್ಕೃತ ವಾಙ್ಮಯದ ಗದ್ಯ, ಪದ್ಯ ಇತ್ಯಾದಿ ಪ್ರಕಾರಗಳ ರಚನೆಯಲ್ಲಿ ತೊಡಗಿದ್ದಾರೆ. ಅನೇಕ ಯುವ ಪ್ರತಿಭೆಗಳೂ ಇಂಥ ಗ್ರಂಥ ರಚನೆಯಲ್ಲಿ ತಮ್ಮ ಕೌಶಲ ತೋರಿಸುತ್ತಿದ್ದಾರೆ.
ಪ್ರತಿ ವರ್ಷ ಸಂಸ್ಕೃತ ವಾಙ್ಮಯ ಪ್ರಪಂಚಕ್ಕೆ ಕರ್ನಾಟಕ ರಾಜ್ಯದ ಗ್ರಂಥ ಕರ್ತೃಗಳ ಕೊಡುಗೆಯೂ ಗಣನೀಯವಾಗಿದೆ. ಇಂತಹ ಸೃಜನಶೀಲ ರಚನೆಗಳಿಗೆ ರಾಜಮಟ್ಟದಲ್ಲಿ ಯಾವುದೇ ಪ್ರೋತ್ಸಾಹ ಪುರಸ್ಕಾರಗಳು ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕೃತ ವಿವಿಯು 2010- 11ನೇ ಸಾಲಿನಿಂದ ‘ಗಂಥ ಪುರಸ್ಕಾರ ಯೋಜನೆ’ ಆರಂಭಿಸಿ, ಕಳೆದ ಹತ್ತು ವರ್ಷಗಳಿಂದ ಸಮಕಾಲೀನ ಉತ್ತಮ ಸಂಸ್ಕೃತ ಗ್ರಂಥಗಳಿಗೆ ಪುರಸ್ಕಾರ ನೀಡುತ್ತಾ ಬಂದಿದೆ.