ಸಾರಡ್ಕ : ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಹಾಗೂ ಆರಾಧನಾ ಸಂಗೀತ ಶಾಲೆ ಸಾರಡ್ಕ ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 04-06-2023, ಭಾನುವಾರ ಸಂಜೆ ಸಾರಡ್ಕದ ಆರಾಧನಾ ಸಂಗೀತ ಶಾಲೆ ಇಲ್ಲಿ ನಡೆಯಲಿದೆ.
ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 12 ಕಚೇರಿಗಳು ನಡೆದಿದ್ದು, ಇದು 13ನೆಯ ಸಂಗೀತ ಕಚೇರಿಯಾಗಿರುತ್ತದೆ.
ಈ ಕಾರ್ಯಕ್ರಮವನ್ನು ಸಾರಡ್ಕದ ಆರಾಧನಾ ಸಂಗೀತ ಶಾಲೆಯ ನಿರ್ದೇಶಕರಾದ ಸಂಗೀತ ವಿದುಷಿ ಶ್ರೀಮತಿ ಶಕುಂತಲಾ ಕೃಷ್ಣ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ.
‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ ಭಟ್ ಮಣಿಪಾಲ, ಕೆ. ಆಶ್ವೀಜಾ ಉಡುಪ ಕಿನ್ನಿಗೋಳಿ ಮತ್ತು ಶೋಭಿತಾ ಭಟ್ ಕಿನ್ನಿಗೋಳಿ, ವಯಲಿನ್ ನಲ್ಲಿ ಸುನಾದ ಪಿ.ಎಸ್. ಹಾಗೂ ಮೃದಂಗದಲ್ಲಿ ಶಾಶ್ವತ್ ಕಂಬಾರ್ ಸಹಕರಿಸಲಿರುವರು.
ಈ ಸಂದರ್ಭದಲ್ಲಿ ಮಧ್ಯಾಹ್ನ ಗಂಟೆ 2ರಿಂದ 3.30ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಎರಡು ಕೃತಿಗಳನ್ನು ಆಸಕ್ತರಿಗೆ ಕಲಿಸಿಕೊಡಲಾಗುವುದು. ಈ ಕಾರ್ಯಾಗಾರಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಭ್ಯಾಸಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.