ಮಂಗಳೂರು: ಮಂಗಳೂರಿನ ಉರ್ವಸ್ಟೋರಿನಲ್ಲಿರುವ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಾಹಿತ್ಯ ಸದನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ದಿನಾಂಕ 21-05-2023ರಂದು ಶ್ರೀಮತಿ ಶೀಲಾಲಕ್ಷ್ಮೀ ಕಾಸರಗೋಡು ಇವರ ‘ಸರಸ-ಸಮರಸ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಶ್ರೀಮತಿ ರಶ್ಮಿ ಅರಸ್ ಇವರ ಆಶಯ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಕೃತಿಯ ಲೇಖಕಿಯಾದ ಶ್ರೀಮತಿ ಶೀಲಾಲಕ್ಷ್ಮೀ ಕಾಸರಗೋಡು ಇವರು ಉಪಸ್ಥಿತಿಯಲ್ಲಿ ಹಿರಿಯ ಲೇಖಕಿ ಬಿ. ಸತ್ಯವತಿ ಭಟ್ ಕೊಳಚಪ್ಪು ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಾ “ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಒತ್ತಡದ ವಶವಾಗಿದ್ದಾರೆ. ಅಂಥಹವರು ಈ ಕಾದಂಬರಿಯನ್ನು ಓದಲೇ ಬೇಕು. ಯಾಕೆಂದರೆ ಹದಿಹರೆಯದ ಮಕ್ಕಳ ಸಂಘರ್ಷವನ್ನು ಅವರು ಅತಿ ಸೊಗಸಾಗಿ ಚಿತ್ರಿಸಿದ್ದಾರೆ. ಓರ್ವ ತಾಯಿ ಬಡವಳಿದ್ದು ತನ್ನ ಕಷ್ಟ ಕೋಟಲೆಗಳ ಮಧ್ಯೆಯಿಂದ ಮೇಲೆ ಬರುವಾಗ ತನ್ನ ಸ್ಥಾನಮಾನಕ್ಕೆ ಚ್ಯುತಿ ಬಾರದಂತೆ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗುತ್ತಿರುವುದು ಕೃತಿಯಲ್ಲಿ ಗಮನಿಸಬೇಕಾದ ಅಂಶ” ಎಂದರು.
ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಶೈಲಜಾ ಕೆ. ಲೋಕಾರ್ಪಣೆಗೊಂಡ ಕೃತಿಯ ಪರಿಚಯ ಮಾಡುತ್ತಾ “ಮನೋವೈಜ್ಞಾನಿಕ ವಿಶ್ಲೇಷಣೆಗಳು ಬಹಳ ಚೆನ್ನಾಗಿ ಮೂಡಿ ಬಂದಿವೆ. ಖಿನ್ನತೆಯನ್ನು ಈ ಕಾದಂಬರಿಯ ಪ್ರತಿಯೊಂದು ಪಾತ್ರವೂ ಬೇರೆ ಬೇರೆ ರೀತಿಯಲ್ಲಿ ಅನುಭವಿಸುತ್ತಿರುವುದನ್ನು ಲೇಖಕಿ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಕಾದಂಬರಿಯಲ್ಲಿನ ಪಾತ್ರಗಳು ಚೌಕಟ್ಟು ಮೀರಿ ಹೊರ ಬರಲಾರದೆ ಖಿನ್ನತೆಗೆ ಜಾರುತ್ತವೆ. ಜೀವನದಲ್ಲಿ ಆರ್ಥಿಕವಾಗಿ ತಲೆ ಎತ್ತಿ ನಡೆಯಬೇಕಾದರೆ ಹೆಣ್ಣಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ. ಹೆಣ್ಣು ಜಾಜಿ ಹೂವಿನಂತೆ ಕೋಮಲವಾಗಿರದೆ ಕೇದಿಗೆಯಂತೆ ಗಟ್ಟಿಯಾಗಿದ್ದು, ಪರಿಮಳ ಸೂಸಬೇಕು ಎಂಬುದನ್ನು ಮಾರ್ಮಿಕವಾಗಿ ಲೇಖಕಿ ಚಿತ್ರಿಸಿದ್ದಾರೆ” ಎಂದರು.
ಅಧ್ಯಕ್ಷತೆ ವಹಿಸಿದ ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳ್ಯಾರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ “ಕಾದಂಬರಿ ರಚನೆ ಎಂದರೆ ಹಗುರವಾಗಿ ತೆಗೆದುಕೊಳ್ಳುವ ವಿಚಾರವಲ್ಲ. ಪುರುಷರು ರೆಸೋರ್ಟಿನಲ್ಲಿ ಕುಳಿತು ತಮ್ಮ ಬರವಣಿಗೆಯ ಕೆಲಸ ಮಾಡುತ್ತಿದ್ದರೆ ಮಹಿಳೆಯರು ಮನೆಯ ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ ರಾತ್ರಿ 11 ಗಂಟೆಯ ನಂತರ ಬರೆಯಲು ಕುಳಿತುಕೊಳ್ಳುತ್ತಾರೆ ಎಂದು ಹಿರಿಯ ಲೇಖಕಿ ಪದ್ಮಾ ಶೆಣೈಯವರು ತನ್ನದೇ ಅನುಭವ ಹಂಚಿಕೊಂಡದ್ದನ್ನು ಉಲ್ಲೇಖಿಸುತ್ತಾ ಇಂಥ ಒಂದು ಕಾದಂಬರಿ ಬರೆಯಲು ಲೇಖಕಿ ಬಹಳಷ್ಟು ಮನಶಾಸ್ತ್ರೀಯ ಸಂಬಂಧವಾದ ಗ್ರಂಥಗಳ ಅಧ್ಯಯನ ಮಾಡಿರಲೇಬೇಕು” ಎಂದರು.
ಕ.ಲೇ.ವಾ. ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಆಕೃತಿ ಎಸ್. ಭಟ್ ಸರ್ವರನ್ನೂ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ರೇಖಾ ಶಂಕರ್ ಕಾರ್ಯಕ್ರಮ ನಿರೂಪಿಸಿದರು.
1 Comment
ಅರ್ಥಪೂರ್ಣ ಕಾರ್ಯಕ್ರಮ.