ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಪ್ರಥಮ ಮಕ್ಕಳ ಮೇಳವಾಗಿದೆ. ಕದ್ರಿ ದೇವಳದ ಸಂಪೂರ್ಣ ಸಹಕಾರದೊಂದಿಗೆ ತನ್ನ 23ನೇ ವರ್ಷದ ವಿಶೇಷ ಕಾರ್ಯಕ್ರಮವಾಗಿ ‘ಸರಯೂ ಸಪ್ತಾಹ -2023’ವು ಮೇ 25ರಿಂದ 31ರವರೆಗೆ ಕದ್ರಿ ದೇವಳದ ರಾಜಾಂಗಣದಲ್ಲಿ ಬಹಳ ವೈಭವದಿಂದ ನೆರವೇರಿತು. ಈ ಕಾರ್ಯಕ್ರಮವನ್ನು ದಿನಾಂಕ 25-05-2023ರಂದು ಶ್ರೀ ಕ್ಷೇತ್ರ ಕದ್ರಿಯ ವೇದಮೂರ್ತಿ ನರಸಿಂಹ ತಂತ್ರಿಗಳು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ದಿನಾಂಕ 26-05-2023ರಂದು 2ನೇ ದಿನದ ಕಾರ್ಯಕ್ರಮದಲ್ಲಿ ಶ್ರೇಷ್ಠ ಆರ್ಥಿಕ ತಜ್ಞ, ಕಲಾಪೋಷಕ ಎಸ್.ಎಸ್.ನಾಯಕ್ ಮಾತನಾಡುತ್ತಾ “ಭಾರತೀಯ ಲಲಿತಕಲೆಗಳೇ ಶ್ರೇಷ್ಠ. ಅದರಲ್ಲೂ ಇಂದು ಯಕ್ಷಗಾನ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ತೆಂಕು ಮತ್ತು ಬಡಗುಗಳ ಬೇಧವಿಲ್ಲದೇ ಜನ ಅದನ್ನು ಸ್ವೀಕರಿಸಿದ್ದಾರೆ. ಅದರಲ್ಲೂ ಸರಯೂ ತಂಡ ಬೇರೆ ಬೇರೆ ಭಾಷೆಗಳಲ್ಲೂ ಕಾರ್ಯಕ್ರಮ ನೀಡುತ್ತಾ ಬರುತ್ತಿದೆ. ಸಂಸ್ಕೃತದಲ್ಲೂ ಯಶಸ್ವಿಯಾಗಿ ಕಾರ್ಯಕ್ರಮ ನೀಡಿ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ತಲುಪುವಲ್ಲಿ ಹಿಂದೆ ಬಿದ್ದಿಲ್ಲ. ಅದಕ್ಕಾಗಿ ನಮ್ಮ ಬೆಂಬಲ ಈ ತಂಡಕ್ಕಿದೆ” ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಂಘ ಚಾಲಕರು ಮತ್ತು ನಗರದ ಖ್ಯಾತ ವೈದ್ಯರೂ ಆದ ಡಾ. ಪಿ. ವಾಮನ್ ಶೆಣೈ ಹಾಗೂ ನಿವೃತ್ತ ಅಧ್ಯಾಪಕ ಶ್ರೀ ರಾಧಾಕೃಷ್ಣ ಹೊಳ್ಳ ಕೋಡಿ ವರ್ಕಾಡಿ ಇವರನ್ನು ‘ಯಕ್ಷ ಸರಯೂ’ ಬಿರುದಿತ್ತು ಸನ್ಮಾನಿಸಲಾಯಿತು. ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ, ಮಾಧವ ನಾವಡ ಸನ್ಮಾನ ಪತ್ರ ವಾಚಿಸಿದರು. ಶೋಭಾ ಸುಧಾಕರ ರಾವ್ ನಿರ್ವಹಿಸಿದರು. ವಿದ್ಯಾರ್ಥಿ ಶಾನ್ ಪೂಜಾರಿ ಧನ್ಯವಾದವಿತ್ತರು. ಆ ದಿನ ಪ್ರಸ್ತುತ ಪಡಿಸಿದ ಪ್ರಸಂಗಗಳು ‘ಓಂ ನಮೋ ಭಗವತೇ ವಾಸುದೇವಾಯ’ ಮತ್ತು ‘ಓಂ ನಮಃ ಶಿವಾಯ’.
ದಿನಾಂಕ 27-05-2023ರಂದು ನಡೆದ ಸರಯೂ ಸಪ್ತಾಹದ ಮೂರನೇ ದಿನದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ನಿವೃತ್ತ ಪ್ರಾಂಶುಪಾಲರಾದ ಶ್ರೀ ಮುರಳೀಧರ ರಾವ್ ಮಾತನಾಡುತ್ತಾ “ಯಕ್ಷಗಾನ ಕಲಿಯುವುದು ಮತ್ತು ಕಲಿಸುವುದು ಇವೆರಡೂ ಪ್ರತಿಯೊಬ್ಬನಲ್ಲೂ ಆಡಕವಾಗಿದೆ. ಯಾಕೆಂದರೆ ಯಕ್ಷಗಾನೀಯತೆಯ ನಿರಂತರತೆ ಈ ಮಣ್ಣಿನ ಗುಣ. ನಾವು ಎಲ್ಲೇ ಹೋದರೂ ಅದು ನಮ್ಮ ಜೊತೆ ಸದಾ ಇರುತ್ತದೆ. ನನ್ನ ಶಿಷ್ಯ ವೃಂದ ಅದನ್ನು ಸದಾ ಪಾಲಿಸಿಕೊಂಡು ಬರುತ್ತಿದೆ. ಇದು ಬೆಳಗಲಿ ಕಲೆ ಉಳಿಯಲಿ” ಎಂದರು.
ಬೆಟ್ಟಂಪಾಡಿ ಸುಂದರ ಶೆಟ್ಟಿ, ಶ್ರೀನಿವಾಸ ಉಪಾಧ್ಯಾಯ, ಜ್ಯೋತಿ ಆರ್. ತಂತ್ರಿ, ಪ್ರಭಾಕರ ರಾವ್ ಪೇಜಾವರ ಮುಖ್ಯ ಅತಿಥಿಗಳಾಗಿದ್ದರು. ಸುಧಾಕರ ರಾವ್ ಪೇಜಾವರ ನಿರ್ವಹಿಸಿ, ಅಲೆವೂರಾಯ ವಂದಿಸಿದರು. ಕಾರ್ಯಕ್ರಮದ ನಂತರ ಪ್ರಸ್ತುತ ಪಡಿಸಿದ ಪ್ರಸಂಗ ‘ದೇವಿ ಮಹಾತ್ಮೆ’.
ದಿನಾಂಕ 28-05-2023ರಂದು ಸರಯೂ ಸಪ್ತಾಹದ 4ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ “ಯಕ್ಷಗಾನದಲ್ಲಿ ಜನಮನ ತಲುಪುವ ಸಮೃದ್ಧ ಸಾಹಿತ್ಯ ಇದೆ. ಪ್ರಸಂಗ ಸಾಹಿತ್ಯವಂತೂ ಇನ್ನೂ ಶ್ರೀಮಂತಿಕೆಯನ್ನು ಹೊಂದಿದೆ. ಹೆಚ್ಚಿನ ಕಲಾವಿದರು ಇದನ್ನು ಅರಗಿಸಿಕೊಂಡು ಮೇರು ಸ್ಥಾನದಲ್ಲಿದ್ದಾರೆ. ಇದು ಯಕ್ಷಗಾನದ ವೈಭವವಾಗಿದೆ. ಸರಯೂ ಸಂಸ್ಥೆಯು ಸಾಹಿತ್ಯಾಸಕ್ತಿಯನ್ನು ಎಳೆಯರಲ್ಲಿ ಬಾಲ್ಯದಲ್ಲೇ ಸೃಷ್ಟಿಸಿ ಬೆಳಗುತ್ತಿದೆ. ಈ ಸಂಸ್ಥೆಗೆ ಶುಭ ಹಾರೈಸುತ್ತೇನೆ” ಎಂದರು.
‘ಯಕ್ಷ ಸರಯೂ’ ಸನ್ಮಾನ ಸ್ವೀಕರಿಸಿದ ನ್ಯಾಯವಾದಿ ರಾಘವೇಂದ್ರ ರಾವ್ ಎಚ್.ವಿ.ಯವರು “ಯಕ್ಷಗಾನ ಮಕ್ಕಳ ಮೇಳ ನನ್ನನ್ನು ಆಹ್ವಾನಿಸಿ ಗೌರವಿಸಿದೆ. ಕೀರ್ತಿಶೇಷರಾದ ಸಂಕೀರ್ತನಾ ಕೇಸರಿಯಾಗಿದ್ದ ನಮ್ಮ ತಂದೆಯವರು ಹರಿಕಥೆ – ಯಕ್ಷಗಾನ ಕ್ಷೇತ್ರದಲ್ಲಿ ಬಹಳ ದುಡಿದಿದ್ದಾರೆ. ನಾನೂ ಸ್ವಲ್ಪ ಮಟ್ಟಿಗೆ ಅದನ್ನು ಮುಂದುವರಿಸಿಕೊಂಡು ಬರುತ್ತಿದ್ದೇನೆ. ಕಲೆಯನ್ನು ಎಲ್ಲರೂ ಸೇರಿ ಬೆಳೆಸೋಣ” ಎಂದರು.
ಸಿ.ಎಸ್. ಭಂಡಾರಿ, ರಾಮಕೃಷ್ಣ ಭಟ್ ಬೆಳಾಲು, ಕದ್ರಿ ದೇವಳದ ಮೊಕ್ತೇಸರರಲ್ಲಿ ಒಬ್ಬರಾದ ನಿವೇದಿತಾ ಎನ್.ಶೆಟ್ಟಿ, ವಸಂತ್ ಮತ್ತು ಸುಧಾಕರ ರಾವ್ ಪೇಜಾವರ ಅತಿಥಿಗಳಾಗಿ ಭಾಗವಹಿಸಿದ್ದರು. ಚಿಂತನ್ ಆರ್.ಕೆ. ಸನ್ಮಾನ ಪತ್ರ ವಾಚಿಸಿ, ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿ, ಮಧುಸೂದನ ಅಲೆವೂರಾಯ ಸ್ವಾಗತಿಸಿದರು. ಬಳಿಕ ಸರಯೂ ಸಂಸ್ಥೆ ಹಾಗೂ ಅತಿಥಿ ಕಲಾವಿದರಿಂದ ವರ್ಕಾಡಿ ರವಿ ಅಲೆವೂರಾಯ ವಿರಚಿತ ‘ವೀರ ವೀರೇಶ’ ಪ್ರಸಂಗ ಪ್ರದರ್ಶಿಸಲ್ಪಟ್ಟಿತು.
ಸರಯೂ ಮಹಿಳಾ ವೃಂದ, ಕೋಡಿಕಲ್ ಇವರಿಂದ ‘ದಾಶರಥಿ ದರ್ಶನ’, ಶ್ರೀ ರಾಮ ಕ್ಷತ್ರಿಯ ಮಹಿಳಾ ವೃಂದ, ಜೆಪ್ಪು ಇವರಿಂದ ‘ಶ್ರೀ ಮಾತೆ ಭದ್ರಕಾಳಿ’, ಧೀಶಕ್ತಿ ಯಕ್ಷ ಬಳಗ, ಪುತ್ತೂರು ಇವರಿಂದ ‘ವೀರಮಣಿ ಕಾಳಗ’ ಹಾಗೂ ಯಕ್ಷ ಮಂಜುಳಾ ಕದ್ರಿ ಇವರಿಂದ ‘ಶ್ರೀ ಕೃಷ್ಣ ಕಾರುಣ್ಯ’ ತಾಳಮದ್ದಳೆ ಕಾರ್ಯಕ್ರಮವು ಅದೇ ದಿನ ಬೆಳಿಗ್ಗೆ 9ರಿಂದ 5.30ರವರೆಗೆ ನಡೆದು ಜನಮನವನ್ನು ರಂಜಿಸಿತು.
ದಿನಾಂಕ 29-05-2023ರಂದು 5ನೇ ದಿನದ ವೇದಿಕೆಯಲ್ಲಿ ಯಕ್ಷಗಾನ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಷಿಯವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ “ಈ ದೇಶದ ಕಲೆಗಳಿಗೆ ಅದರದ್ದೇ ಆದ ರೂಪುರೇಷೆ ಇದೆ. ಅದಕ್ಕೆ ಅಪಾಯ ಬಾರದಂತೆ ಕಾಪಾಡಿಕೊಂಡು ಮುಂದಿನ ತಲೆಮಾರಿಗೂ ಅದನ್ನು ತಲಪಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಯಕ್ಷಗಾನಕ್ಕಿರುವ ಅಂದ-ಅಲಂಕಾರವನ್ನು ವಿರೂಪಗೊಳಿಸುವ ಅಧಿಕಾರ ನಮಗಿಲ್ಲ. ಯಕ್ಷಗಾನವನ್ನು ಹಾಗೆಯೇ ಉಳಿಸೋಣ. ಅನ್ಯ ಕಲಾ ಪ್ರಕಾರಗಳೊಂದಿಗೆ ಬೆರೆಸಿ ಅದನ್ನು ಕುಲಗೆಡಿಸಬಾರದು. ಈಗ ಮಕ್ಕಳ ಹಾಗೂ ಮಹಿಳೆಯರ ಯಕ್ಷಗಾನ ತಂಡಗಳಿವೆ. ಅವರವರ ವ್ಯಾಪ್ತಿಯಲ್ಲಿ ಅದು ಮುಂದುವರಿಯಲಿ. 23ರ ಹರೆಯದಲ್ಲಿರುವ ಸರಯೂ ಸಂಸ್ಥೆ ಚೆನ್ನಾಗಿ ಬೆಳೆಯಲಿ” ಎ೦ದರು.
ಯಕ್ಷಗಾನದ ಉತ್ತಮ ಭಾಗವತ ಪುತ್ತೂರು ರಮೇಶ ಭಟ್ಟರನ್ನು ‘ಯಕ್ಷ ಸರಯೂ’ ಬಿರುದಿತ್ತು ಸನ್ಮಾನಿಸಲಾಯಿತು.
ಹಿರಿಯ ಮದ್ದಲೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್, ಕಾರ್ಪೋರೇಟರ್ ಕಿರಣ್ ಕುಮಾರ್ ಕೋಡಿಕಲ್, ಜಯರಾಮ ಉಡುಪ, ತುಳುಕೂಟದ ಉಪಾಧ್ಯಕ್ಷ ಜೆ.ವಿ. ಶೆಟ್ಟಿ, ‘ಕಣಪುರ’ ಪತ್ರಿಕೆಯ ಎಂ.ನಾ.ಚಂಬಲ್ತಿಮಾರ್, ಶ್ರೀ ವೇಳಂಕರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಕುಮಾರ್ ಮಾಲೆಮಾರ್, ಸಂಸ್ಥೆಯ ಅಧ್ಯಕ್ಷ ವರ್ಕಾಡಿ ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು.
ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿ, ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಸನ್ಮಾನ ಪತ್ರ ವಾಚಿಸಿದರು. ವರ್ಕಾಡಿ ಮಾಧವ ನಾವಡರು ಧನ್ಯವಾದವಿತ್ತರೆ, ಸುಧಾಕರ ರಾವ್ ಸನ್ಮಾನಿತರನ್ನು ಅಭಿನಂದಿಸಿದರು. ತದನಂತರ ‘ವೀರ ಅಭಿನಂದನಾಖ್ಯ’ ಪ್ರಸಂಗವನ್ನು ಪ್ರೇಕ್ಷರ ಮುಂದೆ ಆಡಿ ತೋರಿಸಲಾಯಿತು.
ದಿನಾಂಕ 30-05-2023ರಂದು ನಡೆದ 6ನೇ ದಿನ ಸಭಾ ಕಾರ್ಯಕ್ರಮದಲ್ಲಿ ಪಂಚಲಿಂಗೇಶ್ವರ ದೇವಳದ ಡಿ.ರಮೇಶ್ ತಂತ್ರಿಗಳು ಮಾತನಾಡುತ್ತಾ “ಸಮಾಜದಲ್ಲಿ ಅನೇಕರು ಸಾಧನೆ ಮಾಡಿ ಅವರವರ ಕ್ಷೇತ್ರದಲ್ಲಿ ಎತ್ತರಕ್ಕೇರಿರುತ್ತಾರೆ. ಕಲೆಯನ್ನು ಆಶ್ರಯಿಸಿ ಬೆಳೆಯುತ್ತಾರೆ. ಅಂತಹಾ ಮೇರು ಕಲಾವಿದರನ್ನು ಗುರುತಿಸಿ ಗೌರವಿಸಬೇಕಾದುದು ನಮ್ಮ ಕರ್ತವ್ಯ. ಇಂದು ಖ್ಯಾತ ಬಣ್ಣದ ವೇಷಧಾರಿ ಮಿಜಾರು ಬಾಲಕೃಷ್ಣ ಗೌಡರನ್ನು ಸರಯೂ ಮೇಳ ಗೌರವಿಸಿದೆ. ಇತ್ತಂಡಕ್ಕೂ ಶುಭವಾಗಲಿ” ಎಂದರು.
ಶ್ರೀಗಳಾದ ಗೋಕುಲ್ ಕದ್ರಿ, ಗಣೇಶ ಹೆಬ್ಬಾರ್, ಬಿ. ಪ್ರಕಾಶ ಪೈ, ಶೇಷಾದ್ರಿ ಭಟ್, ಕಾತ್ಯಾಯಿನಿ ಸೀತಾರಾಂ, ರಮಾಮಣಿ, ವಂದನಾ ರಾವ್, ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು.
ಪೂರ್ಣಿಮಾ ಪ್ರಶಾಂತ್ ಶಾಸ್ತ್ರೀ ನಿರ್ವಹಿಸಿದರೆ, ರವಿ ಅಲೆವೂರಾಯ ವಂದಿಸಿದರು. ನಿಹಾಲ್ ಸನ್ಮಾನ ಪತ್ರ ವಾಚಿಸಿ, ಸುಧಾಕರ ರಾವ್ ಪೇಜಾವರ ಅಭಿನಂದನಾ ನುಡಿಗಳನ್ನಾಡಿದರು. ಸಭಾ ಕಾರ್ಯಕ್ರಮದ ನಂತರ ‘ಯಜ್ಞ ಸಂರಕ್ಷಣೆ – ನರಕಾಸುರ’ ಪ್ರಸಂಗವು ಪ್ರೇಕ್ಷಕರನ್ನು ರಂಜಿಸಿತು.
ಸರಯೂ ಸಪ್ತಾಹದ ಸಮಾರೋಪದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ಶ್ರೀ ಕಮಲಾ ದೇವಿಪ್ರಸಾದ ಆಸ್ರಣ್ಣರು “ಯಕ್ಷಗಾನದಲ್ಲಿ ಸಂಘಟನೆ ಕಷ್ಟಸಾಧ್ಯವಾದ ಸಂಗತಿ. ಅದನ್ನು ಸರಯೂ ಸಂಸ್ಥೆ ನಿರ್ವಹಿಸುತ್ತಾ ಬಂದು 23ರ ಹರೆಯದಲ್ಲಿದೆ ಎಂದರೆ ಬಹಳ ಪ್ರಶಂಸನೀಯವಾದ ಕಾರ್ಯ ಮಾಡುತ್ತಿದೆ ಎಂದೇ ಅರ್ಥ. ಹಾಗಾಗಿ ಹೆದರದೇ ಮುನ್ನಗ್ಗಿ ನಿಮಗೆ ಶ್ರೀರಾಮ ರಕ್ಷೆಯಿದೆ. ನಮ್ಮ ದುರ್ಗಾ ಮಕ್ಕಳ ಮೇಳವೂ 13 ವರ್ಷಗಳಿಂದ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಯಕ್ಷಗಾನವನ್ನು ಉಳಿಸಿ – ಬೆಳೆಸಬೇಕಾದವರು ಈ ಮಕ್ಕಳೇ. ಯಾಕೆಂದರೆ ಮುಂದಿನ ತಲೆಮಾರಿಗೆ ಅವರೇ ಈ ಕಲೆಯ ವಾರೀಸುದಾರರು. ಅಲ್ಲದೇ ಇಂದು ಈ ಸಂಸ್ಥೆಯಿಂದ ಸನ್ಮಾನಿತರಾದವರಿಗೂ ಅಭಿನಂದನೆಗಳು” ಎಂದರು.
ಡಾ. ಎಂ.ಬಿ.ಪುರಾಣಿಕರು ಮತ್ತು ಪ್ರದೀಪ ಕುಮಾರ ಕಲ್ಕೂರರು ಸಂಸ್ಥೆಗೆ ಶುಭ ಹಾರೈಸಿದರು. ಸುಧಾಕರ ರಾವ್ ಪೇಜಾವರರು ಸಭೆ ನಿರ್ವಹಿಸಿದರು. ಸಂಸ್ಥೆಯ ಅಧ್ಯಕ್ಷ ಮಧುಸೂದನ ಅಲೆವೂರಾಯ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಸೀತಾರಾಂ ಕುಮಾರ್ ಕಟೀಲು, ಕದ್ರಿಯ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗ ಮತ್ತು ಕಲಾವಿದ ಪಿ.ವಿ. ಪರಮೇಶ್ ಉಪಸ್ಥಿತರಿದ್ದರು.
ಡಾ. ಎಂ.ಬಿ.ಪುರಾಣಿಕ್, ಪ್ರೇಮ್ ರಾಜ್ ಕೊಯ್ಲ ಮತ್ತು ಸಂಜಯ ಕುಮಾರ್ ಫಲಿಮಾರರನ್ನು ‘ಯಕ್ಷ ಸರಯೂ’ ಬಿರುದಿತ್ತು ಸನ್ಮಾನಿಸಲಾಯಿತು. ಮಾಧವ ನಾವಡ ವರ್ಕಾಡಿ, ಚಿಂತನ್ ಆರ್.ಕೆ., ಅಕ್ಷಯ ಸುವರ್ಣ ಸನ್ಮಾನ ಪತ್ರ ವಾಚಿಸಿದರು. ಆ ಬಳಿಕ ಅತಿಥಿ ಕಲಾವಿದರು ಹಾಗೂ ಸಂಸ್ಥೆಯ ಕಲಾವಿದರಿಂದ ವರ್ಕಾಡಿ ರವಿ ಅಲೆವೂರಾಯರ ‘ಇಳಾರಜತ’ ಬಯಲಾಟ ಪ್ರದರ್ಶನಗೊಂಡಿತು.