ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮುಷ್ಟಿ ಪ್ರಜ್ಞೆಯ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಹಲವು ಪ್ರಮುಖ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಒಡನಾಟ ಹೊಂದಿದ ಸಿಖ್ ಸಮುದಾಯಕ್ಕೆ ಸೇರಿದ್ದರೂ ಕನ್ನಡ ಸಾಹಿತ್ಯ, ಸಂಸ್ಕೃತಿಯ ಕುರಿತು ಅಪಾರ ಆಸಕ್ತಿಯನ್ನು ಹೊಂದಿದ ಸರ್ದಾರ್ ಮನ್ ಪ್ರಿತ್ ಸಿಂಗ್ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ 9 (3)ರಲ್ಲಿ ಮಾನ್ಯ ಅಧ್ಯಕ್ಷರಿಗೆ ದತ್ತವಾಗಿರುವ ಅಧಿಕಾರದನ್ವಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ನಾಮ ನಿರ್ದೇಶನ ಮಾಡಿದ್ದಾರೆ.
ಸರ್ದಾರ್ ಮನ್ ಪ್ರಿತ್ ಸಿಂಗ್ ಇವರು ಸಿಖ್ ಸಮುದಾಯಕ್ಕೆ ಸೇರಿದ್ದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಪ್ರೀತಿ ಹಾಗೂ ಸಂಘ ಸಂಸ್ಥೆಗಳ ಜೊತೆಗೆ ಒಡನಾಟ ಹೊಂದಿದ್ದಾರೆ. ಅವರ ಕನ್ನಡ ಪ್ರೇಮ ಮತ್ತು ನಾಡಿನ ಕುರಿತು ಅಭಿಮಾನ ಕನ್ನಡ ಸಾಹಿತ್ಯ ಪರಿಷತ್ತಿಗೆ ಇನ್ನಷ್ಟು ಕ್ರಿಯಾತ್ಮಕತೆಯನ್ನು ತರಲಿದೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ಆಶಿಸಿದ್ದಾರೆ.