‘ತ್ರಿಪದಿ ಕವಿ’ ಸರ್ವಜ್ಞ ಜಯಂತಿಯಾದ ಇಂದು, ಹಿರಿಯ ಲೇಖಕಿ, ನಿವೃತ್ತ ಪ್ರಾಧ್ಯಾಪಿಕೆ ಡಾ| ಮೀನಾಕ್ಷಿ ರಾಮಚಂದ್ರರ ಈ ಲೇಖನದ ಮೂಲಕ ಕವಿಗೆ ನಮನಗಳನ್ನು ಸಲ್ಲಿಸುತ್ತಿದ್ದೇವೆ.
ಸುಮಾರು ಹದಿನಾರನೇ ಶತಮಾನದಲ್ಲಿ ಜೀವಿಸಿದ್ದ ಸರ್ವಜ್ಞನನ್ನು ‘ತ್ರಿಪದಿ ಕವಿ’ ಎಂದು ಕರೆಯುತ್ತಾರೆ. ಈತ ಓರ್ವ ಶ್ರೇಷ್ಠ ವಚನಕಾರ ಹಾಗೂ ದಾರ್ಶನಿಕ. ಹಾವೇರಿ ಜಿಲ್ಲೆಯ ಅಂಬಲೂರು ಈತನ ಜನ್ಮಸ್ಥಳ. ತಂದೆ ಬಸವರಸ ತಾಯಿ ಕುಂಬಾರ ಮಾಳಿ. ಈತನ ಹುಟ್ಟಿನ ಬಗ್ಗೆ ಹಲವಾರು ಊಹಾಪೋಹಗಳು ಇವೆ. ಈತನ ಪೂರ್ವಾಶ್ರಮದ ಹೆಸರು ಪುಷ್ಪದತ್ತ ಎಂದೂ ಹೇಳಲಾಗುತ್ತದೆ. ‚ಸರ್ವಜ್ಞ‛ ಎನ್ನುವ ಅಂಕಿತದಲ್ಲಿ ಸರ್ವಜ್ಞ ಎನ್ನುವ ಅಂಕಿತದಲ್ಲಿ ದೊರೆಯುವ ಆತನ ವಚನವೊಂದರಲ್ಲಿ ತಾನು ಏಳು ಲಕ್ಷದ ಎಪ್ಪತ್ತೇಳು ಸಾವಿರದ ಏಳುನೂರ ಎಪ್ಪತ್ತೇಳು ವಚನಗಳನ್ನು ಬರೆದಿರುವೆ ಎಂದು ಆತ ಹೇಳಿಕೊಂಡಿದ್ದರೂ ಸಹಸ್ರಾರು ವಚನಗಳನ್ನು ಈತ ಬರೆದಿರುವನೆಂಬುದು ವೇದ್ಯವಾಗುತ್ತದೆ. ಅವುಗಳಲ್ಲಿ ಕೆಲವು ಪ್ರಕ್ಷಿಪ್ತವಾಗಿ ಸೇರಿಕೊಂಡಿರುವ ಸಾಧ್ಯತೆಗಳೂ ಇವೆ.
‘ಪರಮಾರ್ಥ’ ಎನ್ನುವ ಅಂಕಿತದಲ್ಲೂ ಈತ ಬರೆದಿದ್ದನು ಎನ್ನುವ ಊಹೆಯೂ ಇದೆ. ಸಮಾಜದ ಅಂಕುಡೊAಕುಗಳನ್ನು ಚಿಕಿತ್ಸಕ ದೃಷ್ಟಿಯಿಂದ ತನ್ನ ವಚನಗಳಲ್ಲಿ ಅಭಿವ್ಯಕ್ತಿಸಿ ಆ ಮೂಲಕ ಸಾಮಾಜಿಕ ಕ್ಷೇಮಕ್ಕಾಗಿ ಪ್ರಯತ್ನಿಸಿದ ಪ್ರಾಮಾಣಿಕ ಜನತೆಯ ಕವಿ ಸರ್ವಜ್ಞ. ಅಪಾರವಾದ ಜೀವನಾನುಭವವೇ ಅವನ ಬಂಡವಾಳ. ದೇಶದ ಉದ್ದಗಲ ಸಂಚರಿಸಿ ತಾನು ಕಂಡು ಕೇಳಿ ಅನುಭವಿಸಿದ ವಿಚಾರಗಳನ್ನು ಅಚ್ಚ ಕನ್ನಡದ ಛಂದಸ್ಸಾದ ತ್ರಿಪದಿಗಳ ಮೂಲಕ ಜನರಿಗೆ ತಲುಪಿಸಿದ ಮಹಾ ಕವಿ ಈತ. ಆಡು ಮುಟ್ಟದ ಸೊಪ್ಪು ಇಲ್ಲ ಸರ್ವಜ್ಞ ತನ್ನ ವಚನಗಳಲ್ಲಿ ಹೇಳದ ವಿಚಾರಗಳಿಲ್ಲ. ಸರ್ವಜ್ಞ ವೀರಶೈವ ಮತದವನು ಎಂದು ಮೇಲುನೋಟಕ್ಕೆ ಕಾಣುವುದಿದ್ದರೂ ಆತನದ್ದು ಮತಾತೀತವಾದ ವಿಶಾಲವಾದ ದೃಷ್ಟಿಕೋನ.
ಕುಲವಿಲ್ಲ ಯೋಗಿಗೆ ಛಲವಿಲ್ಲ ಜ್ಞಾನಿಗೆ,
ತೊಲಗಂಬವಿಲ್ಲ ಗಗನಕ್ಕೆ ಸ್ವರ್ಗದಲಿ
ಹೊಲಗೇರಿಯಿಲ್ಲ ಸರ್ವಜ್ಞ
ಎನ್ನುವ ಅವನ ಮಾತುಗಳಲ್ಲಿ ಇದು ಸ್ಪಷ್ಟವಾಗುತದೆ.
ಸಮಾಜದಲ್ಲಿ ವೇದಜ್ಞಾನವುಳ್ಳವರು ತಾವೇ ಶ್ರೇಷ್ಟರೆಂದು ಬೀಗಿ ನಡೆಯುವುದನ್ನು ಖಂಡಿಸುವ ಆತ,
ವೇದವೇ ಹಿರಿದೆಂದು ವಾದವನು ಮಾಡುವಿರಿ
ವೇದದಲೇನು ಅರಿವಿಹುದು| ಅನುಭವಿಯ|
ವೇದವೇ ವೇದ ಸರ್ವಜ್ಞ
ಎಂದು ಬದುಕಿನಲ್ಲಿ ಜೀವನಾನುಭವವೇ ಶ್ರೇಷ್ಟ ಎಂದು ಸಾರಿದ್ದಾನೆ.
ತಮಿಳಿನ ತಿರುವಳ್ಳವರಂತೆ ತೆಲುಗಿನ ವೇಮನರಂತೆ ಕನ್ನಡದಲ್ಲಿ ಸರ್ವಜ್ಞನನ್ನು ಕಾಣಲಾಗುತ್ತದೆ. ಸತ್ಯನಿಷ್ಠುರವಾದ ಸಾಮಾಜಿಕ ಕಳಕಳಿಯಿಂದ ಸರಳಸುಂದರವಾದ ಅಚ್ಚಗನ್ನಡದಲ್ಲಿ ರಚಿತವಾದ ಆತನ ವಚನಗಳು ಸರ್ವ ಕಾಲಕ್ಕೂ ಉಪದೇಶಾತ್ಮಕವಾಗಿವೆ. ಸಮಾಜದ ಮೂಢತೆಗಳನ್ನು ತೊಡೆದುಹಾಕುವ ಪ್ರಾಮಾಣಿಕ ಪ್ರಯತ್ನವನ್ನು ಆತ ಮಾಡಿದ್ದಾನೆ. ಒಂದೊAದು ತ್ರಿಪದಿಯೂ ನೂರಾರು ಪುಟಗಳ ವ್ಯಾಖ್ಯಾನಗಳನ್ನು ಬಯಸುವಂತಹವುಗಳು. ತಾನು ಹೇಳುವಂತಹ ವಿಚಾರಗಳು ಎಲ್ಲರಿಂದಲೂ ಸ್ವೀಕರಿಸಲ್ಪಟ್ಟು ಸಮಾಜವು ನೇರ್ಪಡುತ್ತದೆ ಎಂಬ ಪೂರ್ಣ ಭರವಸೆ ಆತನಿಗಿರಲಿಲ್ಲ. ಮೂರ್ಖರೇ ತುಂಬಿರುವ ಈ ಸಮಾಜಕ್ಕೆ ನೀತಿಯನ್ನು ಬೋಧಿಸುವುದು ‚ಗೋರ್ಕಲ್ಲ ಮೇಲೆ ಮಳೆ ಸುರಿದಂತೆ‛ ಎನ್ನುವುದನ್ನು ಅನುಭವದಿಂದ ಅರಿತವನು ಅವನು. ಹಾಗೆಂದು ಮೌನವಾಗಿ ಕೂರುವುದು ಸರಿಯಲ್ಲ. ಊದುವ ಶಂಖವನ್ನು ಊದಿಯೇ ಬಿಡುವೆನು. ಒಂದಿಷ್ಟು ಮಂದಿ ಅದನ್ನು ಕೇಳಿ ತಮ್ಮನ್ನು ತಾವೇ ತಿದ್ದಿಕೊಂಡರೆ ಸಾಕು ಎನ್ನುವ ಧೋರಣೆ ಆತನದು.
‘ಸರ್ವಜ್ಞ’ ಎನ್ನುವುದು ಸಮಾಜ ಅವನನ್ನು ಗುರುತಿಸಿದ ಹೆಸರು. ಅದು ಗರ್ವದಿಂದ ಆತ ಇಟ್ಟುಕೊಂಡ ಹೆಸರಲ್ಲ. ಅದನ್ನು ಆತ ಬಯಸುವುದೂ ಇಲ್ಲ. ಅದಕ್ಕೇ ಆತ ಹೀಗೆ ಹೇಳಿಕೊಂಡಿದ್ದಾನೆ.
ಸರ್ವಜ್ಞನೆಂಬವನು ಗರ್ವದಿಂದಾದವನೆ
ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯಾ
ಪರ್ವತವೆ ಆದ ಸರ್ವಜ್ಞ
ಜ್ಞಾನಕ್ಕೆ ತಕ್ಕ ವಿನಯದ ಅಗತ್ಯದ ಅರಿವು ಆತನಿಗಿತ್ತು, ಜೀವನಾನುಭವಕ್ಕಿಂತ ಮಿಗಿಲಾದ ಜ್ಞಾನ ಬೇರೊಂದಿಲ್ಲ ಎಂಬುದನ್ನು ಆತ ಮತ್ತೆ ಮತ್ತೆ ಒತ್ತಿ ಹೇಳಿದ್ದಾನೆ.
ಕರದಿ ಕಪ್ಪರವುಂಟು ಹಿರಿದೊಂದು ನಾಡುಂಟು
ಹರನೆಂಬ ದೈವ ನಮಗುಂಟು ತಿರಿವರಿಂ
ಸಿರಿವಂತರಾರು ಸರ್ವಜ್ಞ
ಎಂದು ಓರ್ವ ಪರಿವ್ರಾಜಕನಾಗಿ ನಾಡಿನುದ್ದಗಲ ಸಂಚರಿಸಿದವನು ಆತ. ಹೀಗೆ ಪಡೆದುಕೊಂಡ ಜ್ಞಾನ ಭಂಡಾರವೇ ಅದಕ್ಕೆ ಸಾಕ್ಷಿಯಾಗಿದೆ.
ಒಂದು ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಪೂರ್ಣ ಅರಿವು ಆತನಿಗಿತ್ತು
ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು
ಮೇಟಿಯುಂ ರಾಟಿಯುಂ ನಡೆದಲ್ಲದೆ ದೇಶದ
ಆಟವೇ ನಡೆಯದು ಸರ್ವಜ್ಞ
ಎಂದು ಅಂದೇ ಹೇಳಿದ ಸರ್ವಜ್ಞನ ಮಾತುಗಳು ಇಂದು ಕೃಷಿಯಿಂದ ವಿಮುಖವಾಗುತ್ತಿರುವ ಸಮಾಜಕ್ಕೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸುತ್ತದೆ.
ವಿಷಯಕ್ಕೆ ತಕ್ಕಂತೆ ತ್ರಿಪದಿಗಳಲ್ಲಿ ಸರ್ವಜ್ಞನು ಬಳಸಿದ ದೃಷ್ಟಾಂತ, ಉಪಮೆ, ಪ್ರತಿಮೆಗಳು ಆತನ ವಚನಗಳ ಮೌಲ್ಯವನ್ನು ಹೆಚ್ಚಿಸಿವೆ. ಕೆಲವೆಡೆ ಒಗಟುಗಳ ಮೂಲಕ ಜಾಣ್ಮೆಯಿಂದ ಕೇಳುಗರ ಕುತೂಹಲವನ್ನು ಕೆರಳಿಸಿ ವಿಷಯವನ್ನು ಮನದಟ್ಟು ಮಾಡುವ ಆತನ ಸಾಹಿತ್ಯ ಪ್ರಯೋಗಗಳು ಆತನ ಕಾವ್ಯಪ್ರಜ್ಞೆಗೆ ಕನ್ನಡಿ ಹಿಡಿಯುತ್ತವೆ.
ಸಾಮಾಜಿಕ ದೋಷಗಳನ್ನು ಟೀಕಿಸುವ ಸಂದರ್ಭಗಳಲ್ಲಿ ಆತನ ಕೆಲವು ಭಾಷಾ ಪ್ರಯೋಗಗಳು ಚಾಟಿಯ ಹೊಡೆತದಂತೆ ಇರುವುದನ್ನು ಕಾಣಬಹುದು
ದಂಡಿಸದೆ ದೇಹವನು ಖಂಡಿಸದೆ ಕರಣವನು
ಉಂಡುಂಡು ಸ್ವರ್ಗವೇರಲಿಕೆ ಅದನೇನು
ರಂಡೆಯಾಳುವಳೆ ಸರ್ವಜ್ಞ
ಎನ್ನುವ ವಚನ ಇದನ್ನು ಸ್ಪಷ್ಟಪಡಿಸುತ್ತದೆ.
ಜಾನಪದ ಸತ್ವವನ್ನು ಮೈಗೂಡಿಸಿಕೊಂಡು ಸದಾ ಕಾಲ ನೆನಪಿನಲ್ಲಿ ಉಳಿಯುವ ಗುಣ ಅವುಗಳಲ್ಲಿರುವುದರಿಂದಲೇ ಜನರ ನಡುವೆ ಬಾಯಿಯಿಂದ ಬಾಯಿಗೆ ಹರಿದು ಬಂದ ಆತನ ವಚನಗಳು ಕನ್ನಡಿಗರ ಮನೆಮಾತಾಗಿವೆ. ಅಕ್ಷರಾಭ್ಯಾಸ ಇಲ್ಲದವರೂ ಸಮಯಕ್ಕೆ ತಕ್ಕಂತೆ ಅವುಗಳನ್ನು ಅರಿತು ಪ್ರಯೋಗಿಸಲೂ, ಮೈಗೂಡಿಸಿಕೊಳ್ಳಲೂ ಸಾಧ್ಯವಾಗಿವೆ.
ಸರ್ವಜ್ಞನ ಒಂದೊಂದು ವಚನವೂ ಬದುಕಿನ ವಿವಿಧ ವಿಚಾರಗಳಿಗೆ ಕನ್ನಡಿ ಹಿಡಿಯುವುದರೊಂದಿಗೆ ಬದುಕಿನಲ್ಲಿ ಎದುರಾಗುವ ನೂರಾರು ಪ್ರಶ್ನೆಗಳಿಗೆ ಸಮಸ್ಯೆಗಳಿಗೆ ಉತ್ತರಗಳನ್ನು ನೀಡುತ್ತವೆ. ಅವುಗಳಲ್ಲಿ ಇಲ್ಲದ ವಿಷಯಗಳಿಲ್ಲ. ಮಾನವ ಬದುಕಿನ ಹುಟ್ಟಿನಿಂದ ಸಾವಿನವರೆಗಿನ ಏಳುಬೀಳುಗಳಿಗೆ ಕಾರಣವಾಗುವ ವಿಚಾರಗಳೊಂದಿಗೆ, ಜ್ಞಾನ, ವಿಜ್ಞಾನ. ವೈದ್ಯ, ಜ್ಯೋತಿಷ್ಯ ಮುಂತಾದ ಸಾವಿರಾರು ವಿಷಯಗಳು ಇಲ್ಲಿ ತ್ರಿಪದಿಗಳಾಗಿ ರೂಪುತಾಳಿವೆ.
ಇಂದಿನ ಧಾವಂತದ ವೈಜ್ಞಾನಿಕ ಯುಗದಲ್ಲಿ ಬದುಕಿನ ಸಾವಿರಾರು ಸಮಸ್ಯೆಗಳಿಗೆ ಉತ್ತರಗಳನ್ನು ಕಾಣಲಾರದೆ, ಸಮಸ್ಯೆಗಳ ಸುಳಿಯೊಳಗೆ ಸಿಲುಕಿ ಕತ್ತಲೆಯಲ್ಲಿ ಅಡಿಗಡಿಗೆ ಹಾದಿ ತಪ್ಪುತ್ತಿರುವ ನಾವು ಒಂದಿಷ್ಟು ಹೊತ್ತು ಬಿಡುವು ಮಾಡಿಕೊಂಡು ಆತನ ವಚನಗಳನ್ನು ಓದಿಕೊಂಡು, ಆತ ಹೇಳಿದ ಜೀವನ ಮರ್ಮವನ್ನು ರೂಢಿಸಿಕೊಂಡದ್ದೇ ಆದರೆ, ಬದುಕನ್ನು ನಿಜಾರ್ಥದಲ್ಲಿ ಕಂಡು ಅನುಭವಿಸಲು ಅವುಗಳು ದಾರಿದೀಪಗಳಾಗಿ ಕಂಗೊಳಿಸಬಹುದು.
- ಡಾ. ಮೀನಾಕ್ಷಿ ರಾಮಚಂದ್ರ