13 ಏಪ್ರಿಲ್ 2023, ಮಂಗಳೂರು: ಮಂಗಳೂರಿನ ಉರ್ವಸ್ಟೋರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘ (ರಿ.) ಮತ್ತು ತುಳು ಧರ್ಮ ಸಂಶೋಧನಾ ಕೇಂದ್ರ ಪೇರೂರು ಇದರ ಸಹಯೋಗದಲ್ಲಿ ದಿನಾಂಕ 11-04-2023 ಮಂಗಳವಾರ ಸಾಹಿತ್ಯ ಸದನದಲ್ಲಿ ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ “ಬರವುದಪ್ಪೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ” ಪ್ರದಾನ ಸಮಾರಂಭ ನಡೆಯಿತು.
ಕಾಲವು ಅಳಿಸಲಾಗದ ಹೆಸರು ಶಕ್ತಿಯುತ ಬಂಡಾಯ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರದು. ಏಪ್ರಿಲ್ 11 ಜ್ಯೋತಿಬಾ ಫುಲೆ ಅವರ ಜನ್ಮ ದಿನ. ಭಾರತದಲ್ಲಿ ನೆಲದ ಮಕ್ಕಳ ಬದುಕಿಗೆ ಮೊದಲು ದನಿ ನೀಡಿದ ಹೆಸರುಗಳು ಇವು ಎಂದು ಅಧ್ಯಕ್ಷತೆ ವಹಿಸಿದ್ದ ಕಲೇವಾಸಂ ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಹೇಳಿದರು.
ಸಿಸ್ಟರ್ ಫ್ಲೋರಾ ಲೂವಿಸ್ ಮತ್ತು ಶ್ರೀಮತಿ ಸೌಭಾಗ್ಯ ಎನ್. ಅವರಿಗೆ ಸೇರಿದ ಸಭೆಯಲ್ಲಿ ‘ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು ಸಭೆಯಲ್ಲಿ ಸೇರಿದ ಸಾಹಿತ್ಯಾಸಕ್ತರು ಇದಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಶ್ರೀಮತಿ ಬಿ.ಎಂ. ರೋಹಿಣಿ ಅವರಿಗೆ ‘ಫಾತಿಮಾ ಶೇಖ್ ಗೌರವ’ ಸನ್ಮಾನ ಮಾಡಲಾಯಿತು. ರೂಪಕಲಾ ಆಳ್ವ ಮತ್ತು ಸುಧಾ ನಾಗೇಶ್ ಪ್ರಶಸ್ತಿ ಪತ್ರ ಓದಿದರು.
ಪ್ರಶಸ್ತಿ ಪಡೆದ ಫ್ಲೋರಾ ಅವರು ಮಾತನಾಡಿ ಸಣ್ಣ ಮಕ್ಕಳಿಗೆ ಕಲಿಸುತ್ತ ನಾನು ಅವರಲ್ಲಿ ದೇವರನ್ನು ಕಾಣುತ್ತೇನೆ ಎಂದರು. ಬಿ.ಎಂ. ರೋಹಿಣಿ ಅವರು ಮಾತನಾಡಿ ಫುಲೆ ದಂಪತಿಯ ಸಾಧನೆ ಎದುರು ನಮ್ಮದು ಕಿಂಚಿತ್ ಸೇವೆ ಎನ್ನುವುದು ಬಯಸದೆ ಬಂದ ಭಾಗ್ಯ ಎಂದರು.
ಮೊದಲಿಗೆ ಪ್ರಶಸ್ತಿ ಪ್ರಾಯೋಜಿಸಿದ ತುಳು ಧರ್ಮ ಸಂಶೋಧನಾ ಕೇಂದ್ರದ ಪೇರೂರು ಜಾರು ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಮಂಜುಳಾ ಸುಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಆಶಾ ಶೆಣೈ ಆಶಯ ಗೀತೆ ಹಾಡಿದರು. ಶ್ರೀಮತಿ ಶರ್ಮಿಳಾ ಶೆಟ್ಟಿ ವಂದಿಸಿದರು. ದಿನೇಶ್ ಮೂಲ್ಕಿ, ದೇವಿಕಾ ನಾಗೇಶ್, ರಮಾನಾಥ, ಬೆನೆಟ್ ಅಮ್ಮಣ್ಣ ಮೊದಲಾದವರು ಉಪಸ್ಥಿತರಿದ್ದರು.