01 ಮಾರ್ಚ್ 2023, ಬೆಂಗಳೂರು: ವಿಜ್ಞಾನ ಪ್ರಸಾರ್ ನವ ದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಆಯೋಜಿಸಿರುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಕುತೂಹಲಿ ಸ್ಕೋಪ್ ವಿಜ್ಞಾನ ನಾಟಕೋತ್ಸವ 24, 25, 26 ಫೆಬ್ರವರಿ 2023ರಂದು ಬೆಂಗಳೂರಿನ ಬಿ.ವಿ. ಕಾರಂತ ರಂಗ ಮನೆಯಲ್ಲಿ ಜರಗಿತು.
ಮೊದಲ ದಿನದ ನಾಟಕ : ಅಬ್ದುಸ್ ಸಲಾಮ್ ಒಂದು ವಿಚಾರಣೆ
24 ಫೆಬ್ರವರಿ 2023, ಶುಕ್ರವಾರ
ಪ್ರಸ್ತುತಿ : ಅರಿವು ರಂಗ, ಮೈಸೂರು ನಿರ್ದೇಶನ : ಯತೀಶ್ ಎನ್. ಕೊಳ್ಳೇಗಾಲ
ರಚನೆ : ಶಶಿಧರ್ ಡೋಂಗ್ರೆ ಮೂಲ : ನೀಲಾಂಜನ್ ಚೌಧುರಿ ಸಂಗೀತ : ಸಾಯಿ ಶಿವ್
ಮೊಹಮ್ಮದ್ ಅಬ್ದುಸ್ ಸಲಾಂ ಪಾಕಿಸ್ತಾನ ಕಂಡ ಅಪ್ರತಿಮ ವಿಜ್ಞಾನಿ. ಪರಮಾಣು ವಿಜ್ಞಾನದ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲಾಗುವ ಸಲಾಂ ಅವರು ಜನಿಸಿದ್ದು ಪಾಕಿಸ್ತಾನದ ಝಾಂಗ್ ಎಂಬ ಹಳ್ಳಿಯಲ್ಲಿ. ಚಿಕ್ಕಂದಿನಿಂದಲೇ ಬುದ್ಧಿವಂತ ಹುಡುಗ ಎನಿಸಿಕೊಂಡಿದ್ದ ಅಬ್ದುಸ್ ಮ್ಯಾಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ತೆಗೆದುಕೊಂಡು ಲಾಹೋರ್ ನಲ್ಲಿದ್ದ ಸರ್ಕಾರೀ ಕಾಲೇಜಿನಲ್ಲಿ ಓದಿದರು. ಕೇಂಬ್ರಿಡ್ಜ್ ನಲ್ಲಿರುವ ಕ್ಯಾವೆಂಡಿಶ್ ಪ್ರಯೋಗಾಲಯದಲ್ಲಿ ಪಿಎಚ್ ಡಿ ಪದವಿಯನ್ನು ಪಡೆದ ನಂತರ ತಮ್ಮ ಎಲ್ಲ ಸಂಶೋಧನೆಯನ್ನು ಪರಮಾಣು ಭೌತಶಾಸ್ತ್ರದಲ್ಲಿ, ಅದರಲ್ಲೂ ’weak nucler force’ ಎಂಬ ವಿಷಯದ ಮೇಲೆ ಮಾಡಿ, ಈ ಕ್ಷೇತ್ರದ ಶ್ರೇಷ್ಠ ಸಂಶೋಧಕರೆನಿಸಿಕೊಂಡರು. 1979 ರಲ್ಲಿ ಅಬ್ದುಸ್ ಸಲಾಮ್ ಅವರಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು. ಅದನ್ನು ಪಡೆದ ವಿಶ್ವದ ಮೊದಲನೇ ಮುಸ್ಲಿಂ ಎಂದೂ ಗುರುತಿಸಲಾಯಿತು. ವಿಶ್ವವನ್ನು ನಿಯಂತ್ರಿಸುತ್ತವೆ ಎನ್ನಲಾದ ನಾಲ್ಕು ಮೂಲಭೂತ ಶಕ್ತಿಗಳಲ್ಲಿ ಎರಡನ್ನು (ವಿದ್ಯುತ್ಕಾಂತೀಯ ಶಕ್ತಿ ಮತ್ತು ದುರ್ಬಲ ಪರಮಾಣು ಶಕ್ತಿ) ಬೆಸೆಯುವ ಸಂಶೋಧನೆಗೆ ಅವರಿತ್ತ ಕಾಣಿಕೆಗೆ ಅವರಿಗೆ ಮನ್ನಣೆ ಸಿಕ್ಕಿ, ಮುಂದೆ ಸ್ಟಾಂಡರ್ಡ್ ಮಾಡೆಲ್ ಆಫ್ ದ ಯೂನಿವರ್ಸ್ ಎಂದು ಪ್ರಖ್ಯಾತವಾದ ಸಿದ್ಧಾಂತಕ್ಕೆ ನಾಂದಿ ಹಾಡಿತು. ಇದು ನಮ್ಮ ವಿಶ್ವವನ್ನು ಅರ್ಥೈಸುವಲ್ಲಿ ಮಾಡಲಾದ ಸಿದ್ಧಾಂತಗಳಲ್ಲಿ ತುಂಬಾ ಆಳವಾದದ್ದು ಮತ್ತು ಅನುಪಮವಾದದ್ದು ಎಂದು ಪ್ರಖ್ಯಾತವಾಗಿದೆ. ಈ ಸಿದ್ಧಾಂತವನ್ನು ಅನೇಕ ಪ್ರಯೋಗಗಳ ಮೂಲಕ ಪ್ರಮಾಣಿಸಿ ನೋಡಲಾಗಿದ್ದು, ಪ್ರತಿಯೊಂದು ಬಾರಿಯೂ ಆ ಸಿದ್ಧಾಂತದ ಸೌಂದರ‍್ಯ ಮತ್ತು ಶಕ್ತಿಯನ್ನು ಕಂಡ ಮಾನವ ಮೂಕವಿಸ್ಮಿತನಾಗಿದ್ದಾನೆ.
ಅಬ್ದುಸ್ ಸಲಾಮ್ ನಿಷ್ಠಾವಂತ ಮುಸ್ಲಿಂ ಆಗಿದ್ದು, ತಮ್ಮ ಜೀವನ, ಬದುಕಿನ ಗುರಿ ಮತ್ತು ತಮ್ಮ ವಿಜ್ಞಾನವನ್ನು ಇಸ್ಲಾಂ ನಿರ್ದೇಶಿಸುತ್ತಿದೆಯೆಂದು ಬಲವಾಗಿ ನಂಬಿದ್ದರು. ಕುರಾನ್ ನ ಸುರಾಹ್ ಗಳಲ್ಲಿ ಅಭಿವ್ಯಕ್ತಿಗೊಂಡಿದ್ದ, ವಿಶ್ವದ ಎಲ್ಲ ಜನರ ಮತ್ತು ವಸ್ತುಗಳ ಏಕತೆಯ ಭಾವ, ತನ್ನ ಮೇಲೆ ಬೀರಿದ ಪ್ರಭಾವ ಮಹತ್ವದ್ದು ಎಂದು ಅವರು ಹೇಳಿದ್ದರು. ಈ ಪ್ರಭಾವ, ಅವರು ವಿಜ್ಞಾನಕ್ಕೆ ನೀಡಿದ ಸ್ವಂತ ಕೊಡುಗೆಯ ಮೇಲೂ, ಇಟಲಿಯಲ್ಲಿ ಅವರು ಸ್ಥಾಪಿಸಿದ ಇನ್ಸ್ಟಿಟ್ಯೂಟ್ ಆಫ್ ಥಿಯರೆಟಿಕಲ್ ಫಿಸಿಕ್ಸ್ ಸಂಸ್ಥೆಯ ಸ್ಥಾಪನೆಯಲ್ಲೂ, ಮುಖ್ಯ ಪಾತ್ರ ವಹಿಸಿತ್ತೆಂದು ಅವರೇ ಹೇಳಿದ್ದಾರೆ.
ಅವರ ಸಮಾಧಿ ಪಾಕಿಸ್ತಾನದ ಝಾಂಗ್ ಎಂಬ ಸಣ್ಣ ಹಳ್ಳಿಯಲ್ಲಿದ್ದು, ಎಲ್ಲ ಸಾಮಾನ್ಯರಂತೆ ಅವರ ಸಮಾಧಿಯೂ ಇದೆ. ’ನಾನು ಅಲ್ಲಾಹುವಿನ ನಮ್ರ ಸೇವಕ’ ಎಂದು ಎಲ್ಲರ ಮುಂದೆ ಎದೆ ತಟ್ಟಿ ಹೇಳಿಕೊಂಡವನನ್ನು, ಅವನು ಹುಟ್ಟಿದ ದೇಶದಲ್ಲಿ ಧರ್ಮಭ್ರಷ್ಟನೆಂದು ಕರೆದರು. ತಾವು ಹುಟ್ಟಿದ ದೇಶದ ಬಗ್ಗೆ ಅಪಾರ ಪ್ರೀತಿ ಮತ್ತು ತಾವು ನಂಬಿದ್ದ ಧರ್ಮದ ಬಗ್ಗೆ ಅತೀವ ಶ್ರದ್ಧೆ ಇಟ್ಟುಕೊಂಡಿದ್ದ ಸಲಾಂ ಅವರಿಗೆ ತಮ್ಮ ದೇಶದ ಕೆಲವು ಜನ ದ್ವೇಷಿಸಿದ್ದು, ತುಂಬ ನೋವು ಕೊಟ್ಟ ಸಂಗತಿಯಾಗಿತ್ತು.
ಎರಡನೇ ದಿನದ ನಾಟಕ : ಕ್ಯೂಇಡಿ
25 ಫೆಬ್ರವರಿ 2023, ಶನಿವಾರ
ಪ್ರಸ್ತುತಿ : ಅರಿವು ರಂಗ, ಮೈಸೂರು ನಿರ್ದೇಶನ : ಯತೀಶ್ ಎನ್. ಕೊಳ್ಳೇಗಾಲ
ರಚನೆ : ಶಶಿಧರ್ ಡೋಂಗ್ರೆ ಮೂಲ : ಪೀಟರ್ ಪಾರ್ನೆಲ್ ಸಂಗೀತ : ಸಾಯಿ ಶಿವ್
ಅಮೇರಿಕಾದ ವಿಜ್ಞಾನಿ `ರಿಚರ್ಡ್ ಫೈನ್ಮನ್’ ಬದುಕನ್ನು ಆದರಿಸಿದ ನಾಟಕ `QED’ ಯನ್ನು ಅಭಿನಯಿಸಲಾಗಿದೆ. ಅಮೇರಿಕಾದ ನಾಟಕಕಾರ `ಪೀಟರ್ ಪರ‍್ನೆಲ್’ ಬರೆದಿರುವ ಈ ನಾಟಕವನ್ನು ಕನ್ನಡಿಸಿದವರು ಮೈಸೂರಿನವರೇ ಆದ ಶಶಿಧರ ಡೋಂಗ್ರೆ. ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್, ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಅರಿವುರಂಗ ಜೊತೆಯಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಹಕಾರದೊಂದಿಗೆ ಪ್ರಸ್ತುತ ಪಡಿಸಿದ `QED’ ನಾಟಕವು ಅನುವಾದ, ಅಭಿನಯ, ಅಭಿರುಚಿಗಳ ಕನ್ನಡತನದಿಂದಾಗಿಯೇ ನೋಡುಗರ ಮನಮುಟ್ಟುವಂತಹ ಪ್ರದರ್ಶನವಾಗಿತ್ತು.
ವಿಜ್ಞಾನ ನಾಟಕವೊಂದು-ಅದರಲ್ಲೂ ಅನುವಾದಗೊಂಡ ನಮ್ಮದಲ್ಲದ ಸಂಸ್ಕೃತಿಯ ನಾಟಕವೊಂದು ಸುಮಾರು ಒಂದೂಮುಕ್ಕಾಲು ಗಂಟೆಯ ಕಾಲ ನೋಡುಗರನ್ನು ಹಿಡಿದಿಟ್ಟುಕೊಂಡ ಬಗೆಯನ್ನು ನೋಡುಗರು ಮಾತ್ರವೇ ಬಲ್ಲರು. ಅಭಿನಯ, ರಂಗಪರಿಕರಗಳ ಬಳಕೆ ಮತ್ತು ಉಪಯೋಗ, ನಟನೆಯ ಟೈಮಿಂಗ್, ಸಂಗೀತ ಎಲ್ಲವೂ ಸೂಪರ್. ಎರಡು ಪಾತ್ರಗಳ ಈ ನಾಟಕವು ಕಿಂಚಿತ್ತೂ ಬೇಸರ ತರಿಸದ ಹಾಗೆ ಕನ್ನಡ ಪ್ರೇಕ್ಷಕರನ್ನು ಹಿಡಿದಿಟ್ಟ ಬಗೆಯು ಕಾವ್ಯಮಯವಾಗಿತ್ತು.
ಕಳೆದ ಶತಮಾನದಲ್ಲಿ ಅಣುವಿಜ್ಞಾನದ ಶೋಧನೆಗಾಗಿ ನೊಬೆಲ್ ಪಾರಿತೋಷಕವನ್ನು ಪಡೆದಿರುವ ರಿಚರ್ಡ್ ಫೈನ್ಮನ್‌ನ್ನದು ಬಹುಮುಖಿ ವ್ಯಕ್ತಿತ್ವ. ವಿಜ್ಞಾನಜಗತ್ತು ಕಂಡ ಅಪರೂಪದ ಪ್ರತಿಭಾವಂತ. ಅಣು ಬಾಂಬ್ ತಯಾರು ಮಾಡಿದ ವಿಜ್ಞಾನಿಗಳ ಗುಂಪಿನ ಪ್ರಮುಖ ಸದಸ್ಯ ಎನ್ನುವುದು ಅವನ ವ್ಯಕ್ತಿತ್ವದ ಒಂದು ಮಗ್ಗುಲಾಗಿದ್ದರೆ, ಚಿತ್ರಕಲೆ, ನಾಟಕ, ಸಂಗೀತಗಳ ಅವನ ಅಭಿರುಚಿ ಫೈನ್ಮನ್‌ನ ವ್ಯಕ್ತಿತ್ವದ ಮತ್ತೊಂದು ಮಗ್ಗುಲು. ಗಣಿತಶಾಸ್ತçದಲ್ಲೂ ಒಂದು ಪ್ರಮೇಯವನ್ನು ತೋರಿಸಿಕೊಟ್ಟವನು ಫೈನ್ಮನ್. ಎಲ್ಲಕ್ಕಿಂತ ಹೆಚ್ಚಾಗಿ ನಿರ‍್ಗಪ್ರೇಮಿ. ನಿರ‍್ಗದ್ದೇ ಅಂತಿಮ ಗೆಲುವು ಎಂದು ತಿಳಿದವನು ಈ ವಿಜ್ಞಾನಿ.
ಮೂರನೇ ದಿನದ ನಾಟಕ : ಲೀಲಾವತಿ
26 ಫೆಬ್ರವರಿ 2023, ಭಾನುವಾರ
ಪ್ರಸ್ತುತಿ : ಕಲಾಸುರುಚಿ, ಮೈಸೂರು ನಿರ್ದೇಶನ : ಎಚ್.ಎಸ್. ಉಮೇಶ್
ರಚನೆ : ಶಶಿಧರ್ ಡೋಂಗ್ರೆ