ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇವುಗಳ ಆಶ್ರಯದಲ್ಲಿ ‘ಸೇಡಿಯಾಪು ಪ್ರಶಸ್ತಿ’ ಹಾಗೂ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ ಪ್ರದಾನ ಸಮಾರಂಭವು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 16 ಆಗಸ್ಟ್ 2025ರಂದು ನಡೆಯಿತು.
ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ. ಶ್ರೀಧರ ಪೈ ಇವರು ‘ಸೇಡಿಯಾಪು ಪ್ರಶಸ್ತಿ’ಯನ್ನು ಡಾ. ಎಚ್.ವಿ. ನಾಗರಾಜ ರಾವ್ ಹಾಗೂ ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ’ಯನ್ನು ಡಾ. ಪ್ರಜ್ಞಾ ಮತ್ತಿಹಳ್ಳಿ ಇವರಿಗೆ ಪ್ರದಾನ ಮಾಡಿದರು. ‘ಸೇಡಿಯಾವು ಪ್ರಶಸ್ತಿ 2025’ ಪುರಸ್ಕೃತ ಡಾ. ಎಚ್.ವಿ. ನಾಗರಾಜ ರಾವ್ ಕುರಿತು ಎಸ್.ಎಂ.ಎಸ್.ಪಿ. ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್. ಮಹೇಶ್ ಭಟ್ ಅಭಿನಂದನಾ ಮಾತನಾಡಿದರು. ‘ಕಡೆಂಗೋಡ್ಲು ಕಾವ್ಯ ಪ್ರಶಸ್ತಿ 2025’ ಪುರಸ್ಕೃತ ಡಾ. ಪ್ರಜ್ಞಾ ಮತ್ತಿಹಳ್ಳಿ ರಚಿತ ಕೃತಿ ‘ಬೆಳದಿಂಗಳ ಸೋನೆಮಳೆ’ ಕೃತಿಯ ಪರಿಚಯವನ್ನು ಎಂ.ಜಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುತ್ತಿ ವಸಂತ್ ಕುಮಾರ್ ಮಾಡಿದರು.
ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಪ್ರಿನ್ಸಿಪಾಲ್ ಡಾ. ದೇವಿದಾಸ್ ಎಸ್. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಸೇಡಿಯಾಪು ಪ್ರಶಸ್ತಿ ಸಮಿತಿಯ ಡಾ. ಎಸ್.ಜೆ. ಭಟ್ ಉಪಸ್ಥಿತರಿದ್ದರು. ಉಜ್ವಲ್ ಆಷ್ಟೆ ಪ್ರಾರ್ಥಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ಪ್ರಾಸ್ತಾವಿಕ ಮಾತನಾಡಿದರು. ಡಾ. ಅರುಣ್ ಕುಮಾರ್ ಎಸ್.ಆರ್. ನಿರೂಪಿಸಿ, ವಂದಿಸಿದರು.