ಉಡುಪಿ : ಹಿರಿಯ ಸಾಹಿತಿ, ಸಂಶೋಧಕ ಡಾ. ಬಿ.ವಿ. ಶಿರೂರು ಇವರು 2024ನೇ ಸಾಲಿನ ‘ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ’ಗೆ ಆಯ್ಕೆಯಾಗಿರುತ್ತಾರೆ. ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ, ಕಥನ ಕಾವ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. ಪ್ರಶಸ್ತಿಯು ರೂಪಾಯಿ 10,000ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.
1941 ಮಾರ್ಚ್ 2ರಂದು ಜನಿಸಿದ ಡಾ. ಬಿ.ವಿ. ಶಿರೂರು 1963ರಲ್ಲಿ ಬಿ.ಎ., 1965ರಲ್ಲಿ ಎಂ.ಎ. ಹಾಗೂ ಪಿ.ಎಚ್.ಡಿ. ಪದವಿ ಪಡೆದರು. ಶ್ರೀಯುತರು 1966ರಿಂದ 1985ರವರೆಗೆ ನರೇಗಲ್ ಇಲ್ಲಿನ ಶ್ರೀ ಅನ್ನದಾನೀಶ್ವರ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ನಂತರ 1985ರಲ್ಲಿ ಕರ್ನಾಟಕ ವಿ.ವಿ.ಯ ಕನ್ನಡ ಅಧ್ಯಯನ ಪೀಠದಲ್ಲಿ ಜೈನಸಾಹಿತ್ಯ ಪ್ರವಾಚಕರಾಗಿ ಸೇರಿ 1994ರಲ್ಲಿ ಪ್ರಾಧ್ಯಾಪಕರಾಗಿ 2001ರಲ್ಲಿ ನಿವೃತ್ತಿಯಾದರು. ಹಳೆಗನ್ನಡ ವಚನ ಸಾಹಿತ್ಯ ಶಾಸನ ಸಂಸ್ಕೃತಿ, ಇತಿಹಾಸ, ಸಂಶೋಧನೆ ಹಾಗೂ ಗ್ರಂಥ ಸಂಪಾದನೆ ಇತ್ಯಾದಿ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಶ್ರೀಯುತರು 200ಕ್ಕೂ ಹೆಚ್ಚು ಸಂಶೋಧನ ಲೇಖನಗಳು ಹಾಗೂ 65ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ.
ಇವರ ‘ರತ್ನಕರಂಡಕದ ಕಥೆಗಳು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದೇವೇಂದ್ರ ಕೀರ್ತಿ ಭಟ್ಟಾರಕ ಪ್ರಶಸ್ತಿ, ಶ್ರವಣಬೆಳಗೊಳ ಶಾಸನ ಸಾಹಿತ್ಯ ಪ್ರಶಸ್ತಿ ಲಭಿಸಿವೆ. ಡಾ. ಎಂ.ಎಂ. ಕಲುಬುರ್ಗಿ ರಾಷ್ಟ್ರೀಯ ಸಾಹಿತ್ಯ ಸಂಶೋಧನ ಪ್ರಶಸ್ತಿ, ಡಾ. ವಿದ್ಯಾಶಂಕರ ಪ್ರಶಸ್ತಿ, ಡಾ. ಎಂ.ಎಂ. ಕಲುಬುರ್ಗಿ ಶಾಸನ ಸಾಹಿತ್ಯ ಪ್ರಶಸ್ತಿಗಳು ಇವರಿಗೆ ಸಂದಿವೆ. ಶ್ರೀಯುತರು 11 ಮಂದಿ ಎಂ.ಫಿಲ್ ಹಾಗೂ 18 ಮಂದಿ ಪಿ.ಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಅಲ್ಲದೆ ಕೊಪ್ಪಳ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಇತಿಹಾಸ ಅಕಾಡೆಮಿಯ 19ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ, ಹಂಪಿ ಕನ್ನಡ ವಿ.ವಿ. ನಡೆಸಿದ 7ನೇ ಹಸ್ತಪ್ರತಿ ಸಮ್ಮೇಳನದ ಸರ್ವಾಧ್ಯಕ್ಷತೆ ಹಾಗೂ ಕರ್ನಾಟಕ ವಿ.ವಿ.ಯ 19ನೇ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷತೆ ಇವರಿಗೆ ಒಲಿದು ಬಂದಿತ್ತು.