Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 19

    May 14, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಗಾನ ಪ್ರದರ್ಶನ | ಮೇ 17ರಿಂದ 22

    May 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ವೀಚಿ ಸಾಹಿತ್ಯ ಪ್ರಶಸ್ತಿ’ಗೆ ಲೇಖಕರ ಆಯ್ಕೆ
    Awards

    ‘ವೀಚಿ ಸಾಹಿತ್ಯ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    May 29, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತುಮಕೂರು : ತುಮಕೂರಿನ ವೀಚಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 2023ನೇ ಸಾಲಿನ ‘ವೀಚಿ ಸಾಹಿತ್ಯ ಪ್ರಶಸ್ತಿ’ಗೆ ಡಾ. ಬಿ. ಜನಾರ್ದನ ಭಟ್ ಅವರ ‘ವಿನೂತನ ಕಥನ ಕಾರಣ’ (ವಿಮರ್ಶೆ) ಮತ್ತು ಡಾ. ರವಿಕುಮಾರ್ ನೀಹ ಅವರ ‘ಅರಸು ಕುರನ್ಗರಾಯ’ (ಸಂಶೋಧನೆ) ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಈ ಪ್ರಶಸ್ತಿಗೆ ಎರಡು ಕೃತಿಗಳು ಆಯ್ಕೆಯಾಗಿರುವುದರಿಂದ ಪ್ರಶಸ್ತಿ ಮೊತ್ತವನ್ನು ಇಬ್ಬರು ಲೇಖಕರಿಗೂ ಸಮನಾಗಿ ಹಂಚಲು ನಿರ್ಧರಿಸಲಾಗಿದೆ.

    ‘ವೀಚಿ ಯುವ ಪ್ರಶಸ್ತಿ’ಗೆ ದಯಾನಂದ ಅವರ ‘ಬುದ್ಧನ ಕಿವಿ’ (ಕತೆಗಳು) ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು ರೂ.5,000/- ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಸಾಹಿತಿಗಳಾದ ಎಚ್. ದಂಡಪ್ಪ, ಎಸ್. ಗಂಗಾಧರಯ್ಯ, ಗೀತಾ ವಸಂತ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಹಿಂದಿನ ವರ್ಷದ ಸಾಹಿತ್ಯ ಕೃತಿಗಳನ್ನು ಅವಲೋಕನ ಮಾಡಿ ಈ ಆಯ್ಕೆ ಮಾಡಿದೆ ಎಂದು ವೀಚಿ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎಂ.ಎಚ್. ನಾಗರಾಜ್ ತಿಳಿಸಿದ್ದಾರೆ.

    ವೀಚಿ ಸಾಹಿತ್ಯ ಪ್ರತಿಷ್ಠಾನ ನಡೆದು ಬಂದ ದಾರಿ:
    ವೀಚಿ ಎಂಬ ಕಾವ್ಯನಾಮದಿಂದ ಪ್ರಸಿದ್ದರಾಗಿರುವ ವೀ. ಚಿಕ್ಕವೀರಯ್ಯ ಕನ್ನಡದ ಗಣ್ಯ ಕವಿಗಳು, ಸಂಸ್ಕೃತಿ ಚಿಂತಕರು. ಕೃಷಿಕರಾದರೂ ಸಮೃದ್ಧವಾದ ಕಾವ್ಯ ಕೃಷಿಯನ್ನು ಮಾಡಿದ ಇವರು ಪ್ರಣಯ ಚೈತ್ರ, ವಿಷಾದ ನಕ್ಷೆ, ಸಂಕರ ತಳಿ, ನವಿಲ ಮನೆ ಮೊದಲಾದ 19 ಕೃತಿಗಳನ್ನು ನಾಡಿಗೆ ನೀಡಿದ್ದಾರೆ. 2001ನೇ ಜುಲೈ 29ರಂದು ವೀಚಿ ಸಾಹಿತೋತ್ಸವ ನಡೆಯಿತು. ಇದರ ಅಂಗವಾಗಿ ವೀಚಿ ಸಾಹಿತ್ಯ ವಿಚಾರ ಸಂಕಿರಣ, ಕವಿಗೋಷ್ಠಿ, ವೀಚಿ ಅಭಿನಂದನೆ ಮತ್ತಿತರ ಕಾರ್ಯಕ್ರಮಗಳು ನಡೆದವು. “ಹಣ್ಣು ಮೆಟ್ಟಿದ ಅವರೆ” ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಯಿತು. ಇದರ ಜೊತೆಗೆ 1,32,000 ರೂಪಾಯಿಗಳ ನಿಧಿಯನ್ನು ಅರ್ಪಿಸಲಾಯಿತು. ಅದೇ ಹಣವನ್ನು ಮೂಲ ಧನವನ್ನಾಗಿಟ್ಟುಕೊಂಡು ಪ್ರತಿಷ್ಠಾನ ಸ್ಥಾಪಿಸಲು ಮತ್ತು ಪ್ರತಿ ವರ್ಷವೂ ಆಯಾ ವರ್ಷದ ಒಂದು ಉತ್ತಮ ಕೃತಿಗೆ ರೂ.10,000/- ಬಹುಮಾನ ನೀಡಲು ಸೂಚಿಸಿ ಕವಿಗಳು ಆ ಹಣವನ್ನು ಅಭಿಮಾನಿಗಳಿಗೆ ಹಿಂತಿರುಗಿಸಿದರು. ಅವರ ಸಲಹೆಯಂತೆ 2001 ಅಕ್ಟೋಬರ್ 21ರಂದು ವೀಚಿ ಸಾಹಿತ್ಯ ಪ್ರತಿಷ್ಠಾನ ಉದ್ಘಾಟನೆಗೊಂಡಿತು. 2002ರಿಂದ ಅವರ ಹೆಸರಿನಲ್ಲಿ ‘ವೀಚಿ ಪ್ರಶಸ್ತಿ’ ನೀಡುತ್ತಾ ಬರಲಾಗುತ್ತಿದೆ. ಪ್ರಸ್ತುತ ರೂ.2,50,000/- ಠೇವಣಿ ಇದ್ದು, ಪ್ರಶಸ್ತಿಯ ಮೊತ್ತ ರೂ.25,000/- ಆಗಿರುತ್ತದೆ ಮತ್ತು ವೀಚಿ ಅವರ ಅಭಿಮಾನಿ, ಮಹಾನ್ ಪುಸ್ತಕಪ್ರೇಮಿ ಮತ್ತು ಓದುಗ ಶ್ರೀ ಜಿ. ರಾಜನ್ ಅವರು ನೀಡಿ ಪ್ರಾಯೋಜಿಸಿರುವ ರೂ.1,50,000/- ಠೇವಣಿಯಿಂದ ಬರುವ ಬಡ್ಡಿ ಹಣದಲ್ಲಿ ರೂ.5000/-ವನ್ನು ‘ವೀಚಿ ಯುವ ಸಾಹಿತ್ಯ ಪ್ರಶಸ್ತಿ’ ಎಂದು, ರೂ. 5000/-ವನ್ನು ‘ವೀಚಿ ಜಾನಪದ ಪ್ರಶಸ್ತಿ’ ಎಂದು ಮತ್ತು ರೂ.5000/ವನ್ನು ‘ಕನಕ ಕಾಯಕ ಪ್ರಶಸ್ತಿ’ ಎಂದು ನೀಡುತ್ತಾ ಬರಲಾಗುತ್ತಿದೆ.

    ಡಾ. ಬಿ. ಜನಾರ್ದನ ಭಟ್ ಇವರು ಪದವಿ ಪೂರ್ವ ಕಾಲೇಜುಗಳಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಮಣ್ಣು ಇಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡದ ಸವ್ಯಸಾಚಿ ಸಾಹಿತಿಯಾಗಿರುವ ಜನಾರ್ದನ ಭಟ್ ಇವರು ಕತೆ, ಕಾದಂಬರಿ, ವಿಮರ್ಶೆ, ಅನುವಾದ, ಗ್ರಂಥ ಸಂಪಾದನೆಯೂ ಸೇರಿದಂತೆ ಒಟ್ಟು 100 ಕೃತಿಗಳನ್ನು ಇದುವರೆಗೆ ಪ್ರಕಟಿಸಿದ್ದಾರೆ. ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲೆಯ 240 ಪುಸ್ತಕಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಸುಮಾರು 18ಕ್ಕೂ ಹೆಚ್ಚು ಅನುವಾದ ಕೃತಿಗಳನ್ನು ಪ್ರಕಟಿಸಿದ ಇವರು ಕೃತಿಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲೀಷಿಗೆ ಅನುವಾದ ಮಾಡುವ ಪಾಂಡಿತ್ಯವನ್ನು ಮೈಗೂಡಿಸಿಕೊಂಡಿದ್ದಾರೆ. ‘ಉತ್ತರಾಧಿಕಾರ’, ‘ಹಸ್ತಾಂತರ’ ಮತ್ತು ‘ಅನಿಕೇತನ’ ಸೇರಿದಂತೆ ಏಳು ಕಾದಂಬರಿಗಳ ರಚನೆ, ‘ಮೊದಲನೆಯ ಇಲಿ’, ‘ಪುಂಡಗೋಳಿಯ ಕ್ರಾಂತಿ’ ಇತ್ಯಾದಿ 7 ಕಥಾ ಸಂಕಲನಗಳು ಇವರ ಲೇಖನಿಯಿಂದ ಬೆಳಕು ಕಂಡಿವೆ. 37 ಸಾಹಿತ್ಯ ವಿಮರ್ಶೆಯ ಕೃತಿಗಳು ಲೋಕಾರ್ಪಣೆ ಗೊಂಡಿವೆ. ‘ದಕ್ಷಿಣ ಕನ್ನಡದ ಶತಮಾನದ ಕಾವ್ಯ’, ‘ದಕ್ಷಿಣ ಕನ್ನಡದ ಶತಮಾನದ ಕತೆಗಳು’, ‘ಉಡುಪಿ ಜಿಲ್ಲೆಯ ಶತಮಾನದ ಕತೆಗಳು’, ‘ಓಬೀರಾಯನ ಕಾಲದ ಕತೆಗಳು’, ‘ಓಬೀರಾಯನ ಕಾಲದ ಕಥೆಗಳಲ್ಲಿ ಸ್ವಾತಂತ್ರ್ಯದ ತೆರೆಗಳು’ ಇತ್ಯಾದಿ ಐದು ಇವರ ಪ್ರಮುಖ ಸಂಪಾದಿತ ಗ್ರಂಥಗಳು. 10ಕ್ಕಿಂತಲೂ ಹೆಚ್ಚು ಪ್ರತಿಷ್ಟಿತ ಪ್ರಶಸ್ತಿಗಳು, ಮಾನ, ಸಮ್ಮಾನಗಳು ಇವರ ಸಾಹಿತ್ಯ ಕೃಷಿಗೆ ಒಳಿದು ಬಂದಿರುವುದು ಹೆಮ್ಮೆಯ ವಿಚಾರ.

    ಡಾ. ರವಿಕುಮಾ‌ರ್ ನೀಹ ಇವರು ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನ ಸೆಳೆದಿರುವ ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯ ಎನ್.ಸಿ. ಹನುಮಂತಯ್ಯ ಮತ್ತು ದೊಡ್ಡಕ್ಕ ಇವರ ಸುಪುತ್ರ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ.ಪದವಿಗಳಿಸಿದ ಇವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ಒಂದೂವರೆ ದಶಕದಿಂದಲೂ ಕನ್ನಡ ಪ್ರಾಧ್ಯಾಪಕರಾಗಿ ಅಧ್ಯಾಪನ ನಿರತರಾಗಿರುವ ರವಿಕುಮಾರ್ ಈವರೆಗೆ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ. ಸೂಲು, ಪುಸ್ತಕ ವಿಮರ್ಶಾ ಕಥನಗಳು, ಕಂಡದಾರಿ, ಧರ್ಮ ರಾಜಕಾರಣ, ಜಲಜಂಬೂಕನ್ಯೆ (ಖಂಡಕಾವ್ಯ), ಕ್ರಿಯಾಪದ, ನೆಲನಿಲ್ಲದ ಭೂಮಿ, ನಡೆದದಾರಿ, ಸುವರ್ಣ ಮುಖಿ, ಪುಸ್ತಕ ವಿಮರ್ಶೆ: ಸಾಂಸ್ಕೃತಿಕ ಬಿಕ್ಕಟ್ಟುಗಳ ಹುಡುಕಾಟ, ನೆರಳಿಲ್ಲದ ಕಾಯ ಮತ್ತು ಬಯಲ ಬನಿ ಪ್ರಕಟಿತ ಕೃತಿಗಳು. ನಾಡಿನ ಅನೇಕ ಪತ್ರಿಕೆಗಳಲ್ಲಿ ರವಿಕುಮಾ‌ರ್ ಅವರ ಲೇಖನಗಳು ಪ್ರಕಟಗೊಂಡು ಓದುಗರ ಚಿಂತನಾಲಹರಿಯನ್ನು ವಿಸ್ತರಿಸಿವೆ. ಕೊರಟಗೆರೆ ತಾಲೂಕು ಕನ್ನಡ ರಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

    ದಯಾನಂದ ಇವರು ನಾಗಮಂಗಲ ತಾಲೂಕಿನ ಬೆಳ್ಳೂರಿನವರು. ಇವರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ‘ಸಮಯ ಟಿವಿ’, ‘ಪ್ರಜಾವಾಣಿ’ ಮತ್ತು ‘ಸಮಾಚಾರ ಕಾಂ’ ಸುದ್ದಿಸಂಸ್ಥೆಗಳಲ್ಲಿ ಒಂದು ದಶಕದ ಪತ್ರಿಕೋದ್ಯಮದ ಅನುಭವವಿರುವ ಇವರು ಪ್ರಕೃತ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕ. ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು ಪ್ರಕಟಗೊಂಡ ನಾಟಕ ಕೃತಿ ‘ಬಾಳಪೂರ್ಣ’, ಛಂದ ಪುಸ್ತಕ ಬಹುಮಾನ ಪಡೆದ ಕಥಾ ಸಂಕಲನ ‘ದೇವರು ಕಚ್ಚಿದ ಸೇಬು’ ಹಾಗೂ ‘ಬುದ್ಧನ ಕಿವಿ’ ಇವರ ಎರಡನೇ ಕಥಾ ಸಂಕಲನ. ಇವರ ಕತೆಗಳಿಗೆ ‘ಬಸವರಾಜ ಕಟ್ಟಿಮನಿ ಯುವ ಪುರಸ್ಕಾರ’, ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ, ‘ಸಂಕ್ರಮಣ ಕಥಾ ಪುರಸ್ಕಾರ’, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಬಹುಮಾನ, ಸಮಾಜಮುಖಿ ಕಥಾ ಪುರಸ್ಕಾರ ಲಭಿಸಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಪುರಭವನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಮಂಗಳೂರು ಘಟಕದ ವಾರ್ಷಿಕೋತ್ಸವ
    Next Article ಮಡಿಕೇರಿಯ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಳ ಕೂಟದ 91ನೇ ಪುಸ್ತಕ ‘ತಾಳ್ಮೆರ ತಾವರೆ’ ಲೋಕಾರ್ಪಣೆ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.