ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಥಬೀದಿ ಗೆಳೆಯರು ವತಿಯಿಂದ ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 23 ನವೆಂಬರ್ 2025ರಂದು ಆಯೋಜಿಸಲಾದ ‘ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು’ ಕುರಿತ ವಿಚಾರ ಸಂಕಿರಣ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ರಂಗಕರ್ಮಿ ಡಾ. ಜನಾರ್ದನ (ಜನ್ನಿ) ಮೈಸೂರು ಇವರು ಮಾತನಾಡಿ “ಕನ್ನಡ ರಂಗಭೂಮಿ ಭಾರತ ದೇಶದಲ್ಲಿಯೇ ಹೊಸ ರೀತಿಯ ಆಯಾಮ ತೆರೆದುಕೊಂಡಿದೆ. ಕನ್ನಡ ರಂಗಭೂಮಿಯ ಹೊಸಹೊಸ ಪ್ರಯೋಗಗಳು ಭಾರತೀಯ ರಂಗಭೂಮಿಯ ಮುಖವಾಣಿಯಾಗಿ ಕೆಲಸ ಮಾಡಿದೆ. ಆ ಮೂಲಕ ಭಾರತೀಯ ರಂಗಭೂಮಿಯ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಅವು ಎಲ್ಲವೂ ವಿಮರ್ಶೆ, ಚರ್ಚೆ, ಸಂವಾದ ಹಾಗೂ ಮರು ತಿದ್ದುಪಡಿಗೆ ಒಳಗಾಗಿದೆ ಎಂಬುದೇ ವಿಶೇಷ. ಸಿನೆಮಾದಲ್ಲಿ ಸಣ್ಣ ಮನುಷ್ಯರನ್ನು ದೊಡ್ಡದಾಗಿ ತೋರಿಸುತ್ತಾರೆ. ಆದರೆ ರಂಗಭೂಮಿ ಮನುಷ್ಯರನ್ನು ಇದ್ದ ಹಾಗೆ ತೋರಿಸುತ್ತದೆ. ಅಂದರೆ ಸತ್ಯವನ್ನು ತೋರಿಸುವ ಮಾಧ್ಯಮವಾಗಿದೆ. ಕಣ್ಣಿಗೆ ಕಣ್ಣು ಇಟ್ಟು ಮಾತನಾಡುವ ಏಕೈಕ ಸಾಧನ ರಂಗಭೂಮಿಯಾಗಿದೆ. ಇಂದು ರಂಗಭೂಮಿ ತಂಡಗಳಿಗೆ ನಿಯಮಿತ ದೃಷ್ಟಿಕೋನದ ಚಳವಳಿ ಇಲ್ಲವಾಗಿದೆ. ರಂಗಭೂಮಿ ಎಂಬುದು ವಿಶ್ವಪ್ರಜ್ಞೆ ಬೆಳೆಸಲು ಹೆದ್ದಾರಿಯಾಗಿದೆ. ಅಲ್ಲಿ ನಿಂತು ನಾವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಬೇಕಾಗಿದೆ. ರಂಗ ಕಲಾವಿದ ಸಾಮಾಜಿಕ ಚಳವಳಿ, ವಿಚಾರ ಸಂಕಿರಣ, ಸಂವಾದದ ಮೂಲಕ ತನ್ನನ್ನು ತಾನು ತಿದ್ದುಕೊಂಡು ಹೊಸ ರೂಪವಾಗಿ ದಾಟಿ ಹೋಗಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ನಾಟಕ ಅಕಾಡೆಮಿಯ ಉಡುಪಿ ಜಿಲ್ಲಾ ಸಂಚಾಲಕ ಸಂತೋಷ್ ನಾಯಕ್ ಪಟ್ಲ ಪ್ರಾಸ್ತಾವಿಕವಾಗಿ ಮಾತನಾಡಿ “ರಂಗಭೂಮಿ ಇಂದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದೊಂದು ಅರಿವಿನ ದಾರಿಯಾಗಿದೆ. ನಮ್ಮನ್ನು, ನಮ್ಮ ಚಿಂತನೆಗಳನ್ನು ನಾವೇ ಒರೆಹಚ್ಚಿ ನಿರ್ಧರಿಸುವ ಮತ್ತು ನಮ್ಮ ಸುತ್ತಲಿನ ಜಗತ್ತನ್ನು ಅರ್ಥೈಸಿಕೊಳ್ಳುವ ಮನರಂಜನೆಯನ್ನು ದಾಟಿದ ಅರಿವಿನ ಮಾಧ್ಯಮವಾಗಿದೆ. ಹಾಗಾಗಿ ನಾಟಕ ಇವತ್ತು ಆ ಮನರಂಜನೆಯ ಮಾಧ್ಯಮವಾಗಬೇಕಾದ ಅಗತ್ಯ ಇಲ್ಲ” ಎಂದು ಹೇಳಿದರು.

ಅಧ್ಯಕ್ಷತೆಯನ್ನು ರಥಬೀದಿ ಗೆಳೆಯರು ಅಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ವಹಿಸಿ “ರಂಗ ಪ್ರಯೋಗಗಳ ಸಮಕಾಲೀನತೆಯ ಸವಾಲುಗಳು ರಾಜ್ಯ ,ರಾಷ್ಟ್ರದಲ್ಲಿ ಒಂದು ರೀತಿಯಾದರೆ ಕರಾವಳಿಯ ರಂಗಭೂಮಿಗೆ ಅದನ್ನು ಜನರಲೈಸ್ ಮಾಡಲು ಬರೋದಿಲ್ಲ ಕರಾವಳಿಯ ಸವಾಲುಗಳನ್ನು ಬೇರೆಯೇ ಆಗಿ ಪರಿಗಣಿಸಿ ಚರ್ಚಿಸಬೇಕಾಗಿದೆ. ಕರಾವಳಿಯ ರಂಗ ಪ್ರಯೋಗಗಳಲ್ಲಿ ಸೈದ್ಧಾಂತಿಕ ಬದ್ಧತೆ ಮಾಯವಾಗಿ ‘ನಾಟಕಕಕ್ಕಾಗಿ ನಾಟಕ’ ಎಂಬ ಧೋರಣೆ ಬೆಳೆಯುತ್ತಿದೆ ಈ ಬಗ್ಗೆ ಈ ವಿಚಾರ ಸಂಕಿರಣದಲ್ಲಿ ಚರ್ಚಯಾಗಲಿ” ಎಂದರು.
ಮುಖ್ಯ ಅತಿಥಿಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಡಾ. ಟಿ.ಎಚ್. ಲವ ಕುಮಾರ್ ಮಾತನಾಡಿದರು. ರಥಬೀದಿ ಗೆಳೆಯರು ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ವಂದಿಸಿ, ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.
