ಬೆಂಗಳೂರು : ಸಾಹಿತ್ಯ ಸರಸ್ವತಿ ಕಲಾ ವೇದಿಕೆ (ರಿ.) ಸ್ನೇಹಕೂಟ ಸಾಂಸ್ಕೃತಿಕ ವೇದಿಕೆ ಹಾಗೂ ಡಾ. ಸಿಸಿರಾ ಸ್ನೇಹ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಸಾಹಿತಿ ಡಾ. ಎಸ್. ರಾಮಲಿಂಗೇಶ್ವರ ಇವರ ಬದುಕು ಬರಹ : ವಿಚಾರಗೋಷ್ಠಿ, ಪ್ರಶಸ್ತಿ ಪ್ರದಾನ ಹಾಗೂ ಕಥಾ ಸಂಕಲನ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 10 ಏಪ್ರಿಲ್ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ಚಾಮರಾಜ ಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಂತವಾಣಿ ಸುಧಾಕರ್, ಅನುರಾಗ್ ಗದ್ದಿ, ವಿದ್ಯಾ ಅಮಿತ್, ಅಂಬುಜಾಕ್ಷಿ, ಬೀರೇಶ್ ಇವರುಗಳಿಂದ ನಡೆಯುವ ಡಾ. ಸಿಸಿರಾ ವಿರಚಿತ ಗೀತೆಗಳ ಗಾಯನಕ್ಕೆ ಶ್ರೀ ಶಿವಲೀಲಾ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ ನೃತ್ಯ ಪ್ರದರ್ಶನಗೊಳ್ಳಲಿದೆ. ಬಹುಶ್ರುತ ವಿದ್ವಾಂಸರಾದ ಶಾಸ್ತ್ರ ಚೂಡಾಮಣಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಇವರು ಅಧ್ಯಕ್ಷತೆ ವಹಿಸಲಿದ್ದು, ಅಂತರ ರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ನಾಡೋಜ ಪ್ರೊ. ಹಂಪನಾ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಲೇಖಕಿ ಶಾಂತಿವಾಸು ಇವರ ‘ಅಂತಃಪುರ ದರ್ಪಣ’ ಕಥಾ ಸಂಕಲನವನ್ನು ಶಿಕ್ಷಣ ತಜ್ಞ ನಾಡೋಜ ಡಾ. ವೂಡೇ ಪಿ. ಕೃಷ್ಣ ಇವರು ಲೋಕಾಪಣೆಗೊಳಿಸಲಿದ್ದಾರೆ.
ಮಧ್ಯಾಹ್ನ 12-00 ಗಂಟೆಗೆ ಡಾ. ಸಿಸಿರಾ ಅವರ ಬದುಕು ಬರಹ ವಿಚಾರಗೋಷ್ಠಿ ನಡೆಯಲಿದ್ದು, ಹಿರಿಯ ಲೇಖಕ ನೀಲಾವರ ಸುರೇಂದ್ರ ಅಡಿಗ ಇವರಿಂದ ‘ಡಾ. ಸಿಸಿರಾ ಅವರ ಸಾಹಿತ್ಯ ಬರವಣಿಗೆ ಒಂದು ಪಕ್ಷಿ ನೋಟ’, ಹಿರಿಯ ಪತ್ರಕರ್ತರಾದ ಪ್ರೊ. ಮಹಾಲಿಂಗಪ್ಪ ವಿ. ನೆಗಳೂರು ಇವರಿಂದ ‘ಡಾ. ಸಿಸಿರಾ ಅವರ ಸಾಂಸ್ಕೃತಿಕ ಸಂಘಟನೆಯ ಅವಲೋಕನ’, ಹಿರಿಯ ಸಾಹಿತಿ ಸಾ.ಮ. ಶಿವಮಲ್ಲಯ್ಯ ಕನಕಪುರ ಇವರಿಂದ ‘ಸಾಮಾಜಿಕ ಸಂಬಂಧಗಳ ಸೇತುವೆ ಸಿಸಿರಾ’ ಎಂಬ ವಿಷಯಗಳ ಬಗ್ಗೆ ವಿಚಾರ ಮಂಡನೆ ಪ್ರಸ್ತುತಗೊಳ್ಳಲಿದೆ. ಇದೇ ಸಂದರ್ಭದಲ್ಲಿ ‘ಯುವ ಸಾಹಿತ್ಯ ಪುರಸ್ಕಾರ’, ಸಾಹಿತ್ಯ ಸಂಸ್ಕೃತಿ ಪ್ರಶಸ್ತಿ, ಗೌರವ ಸನ್ಮಾನ ಹಾಗೂ ಕವಿಗೋಷ್ಠಿ ನಡೆಯಲಿದೆ.