ಮಡಿಕೇರಿ : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 20 ಫೆಬ್ರವರಿ 2025ರಂದು ಕೊಡಗು ಜಿಲ್ಲೆ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜರುಗಿದ ‘ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ’ ಕಾರ್ಯಕ್ರಮದಲ್ಲಿ ಪಂಜೆಯವರ ಕುರಿತ ವಿಚಾರಗೋಷ್ಠಿ ನಡೆಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಮತ್ತು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್. ಇವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿಯಲ್ಲಿ ನಾಲಂದ ಮಹಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಕೆ. ಕಮಲಾಕ್ಷರವರು ‘ಪಂಜೆಯವರ ಶಿಶು ಸಾಹಿತ್ಯ’ದ ಕುರಿತು ಮಾತನಾಡುತ್ತಾ “ಪಂಜೆಯವರು ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರಿಗೆ ಸಣ್ಣ ಕಥೆಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಈ ಶಾಲೆಗೆ ಅವರು ಬಂದ ಸಂದರ್ಭದಲ್ಲಿ ಅವರಿಗೆ ಪ್ರೀತಿಯ ಸ್ವಾಗತವೇನೂ ಸಿಕ್ಕಿರಲಿಲ್ಲ. ಆದರೂ ಅವರು ತಾಳ್ಮೆಯಿಂದ ಎಲ್ಲರ ಮನ ಗೆದ್ದು, ಎಲ್ಲಾ ಅದ್ಯಾಪಕರ ಮತ್ತು ವಿದ್ಯಾರ್ಥಿಗಳ ಪ್ರೀತಿಯ ಸ್ನೇಹಿತರಾಗಿ, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಕೊಡಗಿನ ಪರಿಸರದಲ್ಲಿ ಕಾಣುವಂತಹ ಪ್ರಾಣಿ ಪಕ್ಷಿಗಳನ್ನು ಒಳಗೊಂಡಂತೆ ಬಾಲ ಗೀತೆಗಳನ್ನು ಬರೆದು ಮಕ್ಕಳಿಗೆ ಆತ್ಮೀಯರಾಗಿದ್ದರು” ಎಂದು ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಸಹಕಾರ್ಯದರ್ಶಿಯಾಗಿದ್ದ ಡಾ. ಎಸ್.ಪಿ. ಮಹಾಬಲೇಶ್ವರ ಇವರು ‘ಪಂಜೆಯವರ ಬದುಕು-ಬರಹ’ ಎಂಬ ವಿಷಯಗಳ ಬಗ್ಗೆ ಮಾತನಾಡಿ “ಹೊಸಗನ್ನಡ ನವೋದಯ ಸಾಹಿತ್ಯದ ಕವಿ ಚಕ್ರವರ್ತಿ ಪಂಜೆ ಮಂಗೇಶರಾಯರು ಎಂದು ರಾಷ್ಟ್ರಕವಿ ಗೋವಿಂದ ಪೈ ಬಣ್ಣಿಸಿದ್ದಾರೆ. ಪಂಜೆ ಮಂಗೇಶರಾಯರೊಂದಿಗೆ 40 ವರ್ಷಗಳ ನಿಕಟ ಸ್ನೇಹಚಾರವಿದ್ದ ಗೋವಿಂದ ಪೈಯವರು ಪಂಜೆ ಮಂಗೇಶರಾಯರನ್ನು ತಮ್ಮ ಗುರುಗಳೆಂದು ಒಪ್ಪಿಕೊಂಡಿದ್ದರು. ಅವರು 1937ರಲ್ಲಿ ಪಂಜೆಯವರು ನಿಧನ ಹೊಂದಿದಾಗ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಹಾಕವಿ ಪಂಪ ಅವರೊಂದಿಗೆ ಪಂಜೆಯವರನ್ನು ಹೋಲಿಸಿ, ಇವರು ನವೋದಯದ ಪಂಪ ಕವಿ ಚಕ್ರವರ್ತಿ ಎಂದು ಬಣ್ಣಿಸಿದ್ದರು. ಪಂಜೆಯವರು ಶಿಕ್ಷಣ ಕ್ಷೇತ್ರದಲ್ಲಿ ಸ್ವತಃ ಅಧ್ಯಾಪಕರಾಗಿ, ಪರೀಕ್ಷಾಧಿಕಾರಿಗಳಾಗಿ, ಪಠ್ಯಪುಸ್ತಕ ರಚಕರಾಗಿ, ಮಕ್ಕಳ ಸಾಹಿತ್ಯದ ಕೃತ್ರುವಾಗಿ, ಸಣ್ಣ ಕಥೆಗಳ ಜನಕರಾಗಿ, ಗಂಭೀರ ಲೇಖಕರಾಗಿ, ಲಲಿತ ಪ್ರಬಂಧಗಳ ರಚನಕಾರರಾಗಿ, ಐತಿಹಾಸಿಕ ಕಥೆ, ಕಾದಂಬರಿ, ಸೃಜನಶೀಲ ಬರಹಗಾರ ಪತ್ರಕರ್ತ, ಕವಿ, ಪತ್ತೆದಾರಿ ಕಾದಂಬರಿಗಳನ್ನು ಬರೆದು ಸಾಹಿತ್ಯದ ಹಲವು ಪ್ರಕಾರಗಳಿಗೆ ಪ್ರಥಮರಾಗಿ ಮೆರೆದವರು. ಕೊಡಗಿಗೆ ಶಾಲಾ ಇನ್ಸ್ಪೆಕ್ಟರ್ ಆಗಿ ಬಂದ ಸಂದರ್ಭದಲ್ಲಿ ಇಲ್ಲಿನ ಅಧ್ಯಾಪಕರು ಅವರನ್ನೇನು ಪ್ರೀತಿಯಿಂದ ಸ್ವಾಗತಿಸಲಿಲ್ಲ. ಏಕೆಂದರೆ ಅವರು ಆಂಗ್ಲರಾಗಿರಲಿಲ್ಲ. ಅವರೊಂದಿಗೆ ಸಹೋದ್ಯೋಗಿಯಾಗಿ ಕೆಲಸ ಮಾಡಿದ ಬಿ.ಎಸ್. ಕುಶಾಲಪ್ಪ ಮುಂದೆ ಕೊಡಗು ರಾಜ್ಯದ ವಿಧಾನ ಸಭಾ ಸ್ಪೀಕರ್ ಆಗಿ ಕೆಲಸ ಮಾಡಿದವರು. ಅವರು ಪಂಜೆ ಅವರೊಂದಿಗೆ ಬೆರೆತು ಸ್ನೇಹಚಾರವಾದ ನಂತರ ಅವರು ಪಂಜೆಯವರನ್ನು ಮುಕ್ತ ಮನಸ್ಸಿನಿಂದ ಕೊಡಗಿನ ಕುರಿತು ಕೊಡಗಿನ ಹುತ್ತರಿ ಹಾಡನ್ನು ಬರೆದ ಪಂಜೆಯವರು ನಿಜಕ್ಕೂ ಸೃಜನಶೀಲ ಸ್ನೇಹಪರ ವ್ಯಕ್ತಿತ್ವದವರು ಎಂದು ಬಣ್ಣಿಸಿದ್ದರು. ನವೋದಯದ ಈ ಕಾಲದಲ್ಲಿ ಎಲ್ಲರಿಗೂ ಸ್ಪೂರ್ತಿ ತುಂಬ ಹಾಡು ಇದಾಗುತ್ತದೆ. ಹಲವಾರು ವರ್ಷಗಳ ಕಾಲ ಅವರು ಸಂಪಿಗೆ ಮಲ್ಲಿಗೆ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕವನ, ಲೇಖನಗಳನ್ನು ಬರೆಯುತ್ತಿದ್ದರು. ನಂತರ ಕವಿಶಿಷ್ಯ ಎನ್ನುವ ಹೆಸರಿನಲ್ಲಿ ಬರೆಯಲು ಪ್ರಾರಂಭ ಮಾಡಿದ ಮೇಲೆ ಅವರು ಎಲ್ಲರಿಗೂ ಚಿರಪರಿಚಿತರಾದರು” ಎಂದು ಹೇಳಿದರು.
ಉಡುಪಿಯ ಎಂ.ಜಿ.ಎಂ. ಕಾಲೇಜಿನ ಉಪನ್ಯಾಸಕಿ ಹಾಗೂ ಸಾಹಿತಿ ಕಾತ್ಯಾಯಿನಿ ಕುಂಜುಬೆಟ್ಟು ಇವರು ‘ಪಂಜೆಯವರ ಶಿಶು ಸಾಹಿತ್ಯ’ ಎಂಬ ವಿಷಯಗಳ ಬಗ್ಗೆ ಮಾತನಾಡುತ್ತ “ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳದಿಂದ ಬಂದ ಪಂಜೆ ಮಂಗೇಶರಾಯರ ಹಾಡುಗಳಲ್ಲಿ ಯಕ್ಷಗಾನದ ಶೈಲಿ ಮತ್ತು ತಾಳ ಇದೆ ಎಂದರು. ನವೋದಯ ಸಾಹಿತ್ಯದಲ್ಲಿ ಹಲವಾರು ಸಂಶೋಧನೆಗಳನ್ನು ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡವರು ಮತ್ತು ಎಲ್ಲದರಲ್ಲೂ ಮೊದಲಿಗರು ಪಂಜೆ ಮಾಹಿತಿ ಹೊಸತರೊಂದಿಗೆ ಸೇರಿಸಿ ನಮಗೆ ಹಲವಾರು ಹಾಡು, ಕಥೆ, ಕವನಗಳನ್ನು ಕಟ್ಟಿಕೊಂಡಿದ್ದಾರೆ. ಮೂಲ ಕೊಂಕಣಿಯವರಾದ ಪಂಜೆ ಮಂಗೇಶರಾಯರು ತುಳುನಾಡಿನಲ್ಲಿ ಹುಟ್ಟಿ, ಕೊಡಗಿನಲ್ಲಿ ವೃತ್ತಿ ಜೀವನ ನಡೆಸಿ, ತುಳು ಕೊಂಕಣಿ ಕೊಡವ ಎಲ್ಲಾ ಭಾಷೆಗಳ ಸೊಗಡನ್ನು ಕನ್ನಡೀಕರಿಸಿ ಶ್ರೇಷ್ಠ ಕವಿ ಎನಿಸಿದ್ದಾರೆ. ಮಕ್ಕಳೊಂದಿಗೆ ಮಕ್ಕಳಾಗಿ ತಮ್ಮ ಹಾಡುಗಳನ್ನು ಅವರಿಗೆ ಪಠಣ ಮಾಡಿಸಿ, ಅರ್ಥ ಮಾಡಿಸಿ ಕವನ ಕಟ್ಟಿದರು. ಮಾಸ್ತಿಯವರಿಗಿಂತ 50 ವರ್ಷಗಳ ಹಿಂದೆಯೇ ಶಿಶು ಸಾಹಿತ್ಯವನ್ನು ಪರಿಚಯಿಸಿದವರು ಪಂಜೆಯವರು” ಎಂದರು.
ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲೆಯ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆದ ಹೆಚ್. ಜಯಪ್ರಕಾಶ್ ಶೆಟ್ಟಿರವರು ಮಾತನಾಡುತ್ತಾ “ಪಂಜೆಯವರ ಬದುಕು ಬರಹ, ಶಿಶು ಸಾಹಿತ್ಯ, ಸಂಶೋಧನೆಗಳು ಇವುಗಳ ಕುರಿತು ಉಪನ್ಯಾಸ ಮಂಡಿಸಿದ ಉಪನ್ಯಾಸಕರು ಪಂಜಯವರ ಪರಿಚಯವನ್ನು ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಕೇವಲ 20 ನಿಮಿಷದಲ್ಲಿ ಪರಿಚಯ ಮಾಡುವ ವ್ಯಕ್ತಿತ್ವ ಅವರದಲ್ಲ. ಅವರು ಒಂದು ಸಮುದ್ರ ಇದ್ದ ಹಾಗೆ, ಬಗೆದಷ್ಟು ಬಗೆದಷ್ಟು ವಿಚಾರಗಳು ಮೂಡಿಬರುತ್ತದೆ. ಅವರಿಗೆ ಕೊಡಗಿನ, ಕೊಡಗರ ಬಗ್ಗೆ, ಇರುವಂತಹ ಪ್ರೀತಿ, ಪರಿಸರದ ಬಗ್ಗೆ, ಕೊಡವರ ವೀರತ್ವದ ಬಗ್ಗೆ ಇರುವಂತಹ ಪ್ರೀತಿಯನ್ನು ಅವರು ತಮ್ಮ “ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೋ” ಎನ್ನುವ ಹಾಡಿನಲ್ಲಿ ಸಂಪೂರ್ಣವಾಗಿ ವ್ಯಕ್ತಪಡಿಸಿದ್ದಾರೆ, ಅದು ಕೊಡಗಿನ ನಾಡಗೀತೆಯಾಗಿದೆ. ಕೋಟಿ ಚೆನ್ನಯ್ಯರ ಕುರಿತು ಅವರು ರಚಿಸಿದ ತುಳುನಾಡಿಗೆ ಅವರು ನೀಡಿದ ಕೊಡುಗೆಯಾಗಿದೆ. ಜಾತಿ, ಭಾಷೆ, ಪ್ರದೇಶ, ಪಂಗಡ, ಇವುಗಳೆಲ್ಲರ ವ್ಯಾಪ್ತಿಯನ್ನು ಮೀರಿದವರು ಪಂಜೆ ಮಂಗೇಶರಾಯರು. ಸೃಜನಶೀಲತೆಯ ಜೊತೆಗೆ ಶಾಸ್ತ್ರ ಪಾಂಡಿತ್ಯವನ್ನು ಮೈಗೂಡಿಸಿಕೊಂಡವರು. ಆಧುನಿಕ ಶಿಕ್ಷಣಕ್ಕೆ ಪ್ರವೇಶವಾಗಿ ಇಂಗ್ಲೀಷ್ ಕನ್ನಡ ನಿಘಂಟು, ಕನ್ನಡ ಮೂಲ ವ್ಯಾಕರಣ, ಶಬ್ದಮಣಿ ದರ್ಪಣ ರಚಿಸಿದವರು. ಪಂಜೆ ಮಂಗೇಶರಾಯರು ಕನ್ನಡ ನವೋದಯದ ಮಹಾ ಬೆಳಗು ಎಂದರೆ ತಪ್ಪಾಗಲಿಕ್ಕಿಲ್ಲ. 19ನೇ ಶತಮಾನದ ಕೊನೆಯ ಹಾಗೂ 20ನೇ ಶತಮಾನದ ಮೊದಲ ಅರ್ಧದ ಕಾಲಾವಧಿಯಲ್ಲಿ ಈ ಮಹಾ ಬೆಳಗು ಕನ್ನಡ ಸಾಹಿತ್ಯರಂಗವನ್ನು ಬೆಳಗಿಸಿತು. ಈ ಮಹಾಪರ್ವದ ಮೊದಲ ದಿನಗಳಲ್ಲಿ ಕನ್ನಡವನ್ನು ಸಿಂಗರಿಸಿದವರಲ್ಲಿ ಪಂಜೆಯವರು ಪ್ರಮುಖರು” ಎಂದು ನುಡಿದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಪ್ರತಿಮಾ ರೈ ನಿರೂಪಿಸಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ, ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಚಂದನ್ ಕಾಮತ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಕೆ.ಜಿ. ರಮ್ಯಾ ವಿಚಾರಗೋಷ್ಠಿಯ ಉಪನ್ಯಾಸಕರನ್ನು ಪರಿಚಯಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು, ಲಿಟಲ್ ಫ್ಲವರ್ ಶಾಲೆಯ ವಿದ್ಯಾರ್ಥಿಗಳು, ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿಗಳು, ಜನರಲ್ ತಿಮ್ಮಯ್ಯ ಶಾಲೆಯ ವಿದ್ಯಾರ್ಥಿಗಳು, ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ವತಿಯಿಂದ ಕಲಾವಿದರು ಪಂಜೆ ಅವರು ರಚಿಸಿದ ಹಾಡುಗಳನ್ನು ಹಾಡಿದರು ಮತ್ತು ನೃತ್ಯರೂಪಕ ನಡೆಸಿಕೊಟ್ಟರು.